ಮಡಿಕೇರಿ ಜು.2 NEWS DESK : ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘವು 25 ವಸಂತಗಳನ್ನು ಪೂರೈಸಿರುವ ಹಿನ್ನೆಲೆ, ಮುಂಬರುವ ನವೆಂಬರ್ ತಿಂಗಳಿನಲ್ಲಿ ‘ಬೆಳ್ಳಿ ಮಹೋತ್ಸವ’ವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ಸಂಘದ ಗೌರವ ಅಧ್ಯಕ್ಷ, ನಿವೃತ್ತ ಎಸ್‌ಪಿ ಎಂ.ಎ.ಅಪ್ಪಯ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2000ನೇ ಸಾಲಿನಲ್ಲಿ ಅಂದಿನ ಜಿಲ್ಲಾ ಎಸ್‌ಪಿ ಸೀಮಂತ್ ಕುಮಾರ್ ಸಿಂಗ್ ಅವರ ಸಲಹೆಯ ಮೇರೆ ಡಿವೈಎಸ್‌ಪಿ ದಿ. ಕಾಳೇರಮ್ಮನ ನಾಣಯ್ಯ ಅವರ ನೇತೃತ್ವದಲ್ಲಿ ಸಮಾನ ಮನಸ್ಕ 28 ಮಂದಿ ಪೊಲೀಸ್ ನಿವೃತ್ತ ಅಧಿಕಾರಿಗಳು ಒಗ್ಗೂಡಿ ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘವನ್ನು ಸ್ಥಾಪಿಸಲಾಯಿತು. ಪ್ರಸ್ತುತ ಸಂಘದಲ್ಲಿ ಸುಮಾರು ಸಾವಿರಕ್ಕೂ ಮೇಲ್ಪಟ್ಟು ಸದಸ್ಯರುಗಳಿದ್ದಾರೆ ಎಂದರು. ಸಂಘ ಆರಂಭಗೊAಡರು ಕಚೇರಿಗೆ ಅಗತ್ಯ ಸ್ಥಳಾವಕಾಶ ಇಲ್ಲದ ಹಿನ್ನೆಲೆಯಲ್ಲಿ ಅಂದಿನ ಎಡಿಜಿಪಿ ಜೀವನ್ ಕುಮಾರ್ ಗಾಂವ್‌ಕರ್ ಅವರು ನಗರದ ಮೈತ್ರಿ ಸಭಾಂಗಣದ ಪಕ್ಕದಲ್ಲಿ ಸ್ಥಳವನ್ನು ಒದಗಿಸಿದ್ದಲ್ಲದೆ, ಅಗತ್ಯ ಆರ್ಥಿಕ ನೆರವನ್ನು ನೀಡಿದ್ದರೆಂದು ಸ್ಮರಿಸಿಕೊಂಡ ಅಪ್ಪಯ್ಯ ಅವರು, ಮೈಸೂರು ರಾಜ್ಯದ ಮೊದಲನೇ ಐಜಿಪಿ ಪಿ.ಕೆ. ಮೊಣ್ಣಪ್ಪ ಅವರ ಮಗ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಂ.ಬೆಳ್ಯಪ್ಪ ಅವರು ನೀಡಿದ ಧನ ಸಹಾಯ ಮತ್ತು ದಾನಿಗಳ ಸಹಕಾರದಿಂದ ಸಂಘದ ‘ಸ್ವಾಭಿಮಾನ’ ಕಟ್ಟಡ ನಿರ್ಮಾಣವಾಯಿತೆಂದು ನೆನಪಿಸಿಕೊಂಡರು. ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ರಾಜ್ಯದಲ್ಲೆ ಮೊದಲ ಸಂಘÀವಾಗಿ ಬೆಳ್ಳಿ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆಯೆಂದು ಹೆಮ್ಮೆಯಿಂದ ನುಡಿದ ಅವರು, ಸಂಘ ಅಸ್ತಿತ್ವಕ್ಕೆ ಬಂದ ಬಳಿಕ ಇಲ್ಲಿಯವರೆಗೆ ಸಂಘದ ಸದಸ್ಯರಾಗಿರುವ ನಿವೃತ್ತ ಪೊಲೀಸ್ ಸದಸ್ಯರುಗಳಿಗೆ ಅಗತ್ಯ ಸಹಕಾರವನ್ನು ನೀಡುತ್ತ ಬರಲಾಗುತ್ತಿದೆಯೆಂದು ತಿಳಿಸಿದರು. ಸ್ಮರಣ ಸಂಚಿಕೆ– ಬೆಳ್ಳಿ ಮಹೋತ್ಸವದ ಹಿನ್ನೆಲೆಯಲ್ಲಿ ನಿವೃತ್ತ ಅಧಿಕಾರಿಗಳ, ಸಂಘಕ್ಕೆ ಶ್ರಮಿಸಿದವರ ವಿವರಗಳನ್ನು ಒಳಗೊಂಡ ಸಚಿತ್ರವಾದ ಸ್ಮರಣ ಸಂಚಿಕೆಯನ್ನು ಹೊರ ತರಲು ಉದ್ದೇಶಿಸಲಾಗಿದೆ. ಈ ಸ್ಮರಣ ಸಂಚಿಕೆಗೆ ಪೊಲೀಸರನ್ನು ಒಳಗೊಂಡಂತೆ ಸಾರ್ವಜನಿಕರು ಬರಹಗಳನ್ನು ಕಳುಹಿಸಬಹುದೆಂದು ತಿಳಿಸಿದ ಅವರು, ಬರಹಗಳನ್ನು ‘ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿಗಳು, ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ, ‘ಸ್ವಾಭಿಮಾನ’ ಕಟ್ಟಡ, ಫೀ.ಮಾ.ಕಾರ್ಯಪ್ಪ ಕಾಲೇಜು ರಸ್ತೆ, ಐಟಿಐ ಜಂಕ್ಷನ್, ಮಡಿಕೇರಿ-571201’ಕ್ಕೆ ಕಳುಹಿಸಬಹುದೆಂದರು. ಸನ್ಮಾನ- ಬೆಳ್ಳಿ ಮಹೋತ್ಸವ ಸಮಾರಂಭದಲ್ಲಿ ಸ್ವಾಭಿಮಾನ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಿದ ನಿವೃತ್ತ ಐಪಿಎಸ್ ಅಧಿಕಾರಿ ಪಿ.ಎಂ. ಬೆಳ್ಯಪ್ಪ, ಸಿಆರ್‌ಪಿಎಫ್ ಡಿಜಿಪಿ ಎಂ.ಎ.ಗಣಪತಿ ಸೇರಿದಂತೆ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಗುವುದೆಂದು ಮಾಹಿತಿಯನ್ನಿತ್ತರು. ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷರಾದ ಎಂ.ಕೆ.ಉತ್ತಪ್ಪ, ಪ್ರಧಾನ ಕಾರ್ಯದರ್ಶಿ ಅಚ್ಚುತನ್ ನಾಯರ್, ಜಂಟಿ ಕಾರ್ಯದರ್ಶಿ ಕೆ.ಕಾವೇರಪ್ಪ ಹಾಗೂ ನಿರ್ದೇಶಕ ಹಮೀದ್ ಉಪಸ್ಥಿತರಿದ್ದರು.