ಮಡಿಕೇರಿ ಜು.3 NEWS DESK : ಬುಡಕಟ್ಟು ಜನಾಂಗದ ಕುಟುಂಬಗಳನ್ನು ಲೈನ್ ಮನೆಗಳಿಂದ ಮುಕ್ತಗೊಳಿಸಬೇಕು ಮತ್ತು ಸ್ವಂತ ವಸತಿಗಾಗಿ ನಿವೇಶನ ಮಂಜೂರು ಮಾಡಬೇಕೆಂದು ಆಗ್ರಹಿಸಿ ಬುಡಕಟ್ಟು ಕಾರ್ಮಿಕರ ಸಂಘ ಹಾಗೂ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಹೊಸೂರು ಗ್ರಾಮ ಪಂಚಾಯಿತಿ ಎದುರು ಧರಣಿ ಸತ್ಯಾಗ್ರಹ ನಡೆಸಿತು.
ಮಳೆಯ ನಡುವೆ ಮಹಿಳೆಯರು, ಮಕ್ಕಳು ಸೇರಿದಂತೆ ಅನೇಕರು ಪ್ರತಿಭಟನೆ ನಡೆಸಿ ಲೈನ್ ಮನೆ ಜೀವನ ಬೇಡ, ಸ್ವಂತಮನೆ ನಿರ್ಮಿಸಿಕೊಳ್ಳಲು ಸರ್ಕಾರ ನಿವೇಶನ ನೀಡಬೇಕು ಎಂದು ಆಗ್ರಹಿಸಿದರು.
ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳತ್ಮಾಡುವಿನಲ್ಲಿ ನಿವೇಶನ ರಹಿತರಿಗೆ ವಿತರಿಸಲು ಭೂಮಿ ಲಭ್ಯವಿದೆ. ಈ ಭೂಮಿಯನ್ನು ಹೊಸೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಲೈನ್ ಮನೆಗಳಲ್ಲಿ ಹಾಗೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಬುಡಕಟ್ಟು ಕುಟುಂಬಗಳಿಗೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಬುಡಕಟ್ಟು ಕಾರ್ಮಿಕರ ಸಂಘದ ಅಧ್ಯಕ್ಷ ಗಪ್ಪು ಮಾತನಾಡಿ, ಕಾಫಿತೋಟಗಳ ಲೈನ್‌ಮನೆಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಕುಟುಂಬಗಳಿಗೆ ನಿವೇಶನ ಒದಗಿಸುವಂತೆ ಆಗ್ರಹಿಸಿ ಕಳೆದ 9 ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಾ ಬರಲಾಗಿದೆ. ಆದರೆ ಕೇವಲ ಆಶ್ವಾಸನೆ ನೀಡುತ್ತಾ ಬಂದಿರುವ ಅಧಿಕಾರಿಗಳು ನಮ್ಮ ಬೇಡಿಕೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಿವೇಶನದ ಬೇಡಿಕೆ ಈಡೇರುವವರೆಗೂ ನಿರಂತರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಸಂಘಟನೆಯ ಪ್ರಮುಖರಾದ ಭವ್ಯ ಮಾತನಾಡಿ, ಬುಡಕಟ್ಟು ಕುಟುಂಬಗಳಿಗೆ ನಿವೇಶನಕ್ಕಾಗಿ ಆಗ್ರಹಿಸಿ ಪೊನ್ನಂಪೇಟೆ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಕಚೇರಿ ಎದುರು ಈ ಹಿಂದೆ 8 ತಿಂಗಳ ಕಾಲ ಅಹೋರಾತ್ರಿ ಧರಣಿ ನಡೆಸಿದ ಸಂದರ್ಭ ಅಧಿಕಾರಿಗಳು ನಿವೇಶನ ಒದಗಿಸುವ ಭರವಸೆ ನೀಡಿದ್ದರು, ಆದರೆ ಇಲ್ಲಿಯವರೆಗೆ ಭರವಸೆ ಈಡೇರಿಲ್ಲ ಎಂದು ಆರೋಪಿಸಿದರು.
ಪೊನ್ನಂಪೇಟೆ ತಾಲ್ಲೂಕಿನ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಫಿ ತೋಟಗಳ ಲೈನ್ ಮನೆಗಳಲ್ಲಿ ಹಾಗೂ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಕುಟುಂಬಗಳಿಗೆ ನಿವೇಶನದ ಹಕ್ಕು ಪತ್ರ ಮತ್ತು ವಸತಿ ಮಂಜೂರು ಆಗುವವರೆಗೆ ನಿರಂತರ ಹೋರಾಟ ನಡೆಸಲಾಗುವುದು ಎಂದರು.