ನಾಪೋಕ್ಲು ಜು.6 NEWS DESK : ಚೆಯ್ಯಂಡಾಣೆ, ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ನಿರಂತರ ಉಪಟಳದಿಂದ ಬೇಸತ್ತ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಚೈಯಂಡಾಣೆ, ನರಿಯಂದಡ ಗ್ರಾ.ಪಂ ವ್ಯಾಪ್ತಿಯ ಚೆಯ್ಯಂಡಾಣೆ, ನರಿಯಂದಡ, ಚೇಲಾವರ, ಕೋಕೇರಿ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಕೃಷಿ ಫಸಲನ್ನು ತಿಂದು ನಷ್ಟ ಪಡಿಸುತ್ತಿದೆ.
ಗ್ರಾಮದ ಪೊಕ್ಕೋಳಂಡ್ರ, ಕೋಡಿಮಣಿಯoಡ, ಬೊವೇರಿಯಂಡ, ಬಿಳಿಯಂಡ್ರ, ಮಕ್ಕಿಮನೆ, ಮಂಜoಡ್ರ, ನೆಲ್ಲಮಕ್ಕಳ, ಮುಂಡ್ಯೋಲಂಡ ಅವರ ತೋಟಗಳಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳ ಹಿಂಡು ಅಡಿಕೆ, ಕಾಫಿ, ಬಾಳೆ ಗಿಡಗಳನ್ನು ನಾಶಪಡಿಸಿವೆ.
ಈ ಭಾಗದ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಅರಣ್ಯ ಇಲಾಖೆಯ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಚರಣೆ ನಡೆಸಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ನರಿಯಂದಡ ಗ್ರಾಮಸ್ಥ ಪೊಕ್ಕೋಳಂಡ್ರ ಧನೋಜ್ ಅಳಲು ತೋಡಿಕೊಂಡಿದ್ದಾರೆ.
ಕಾಡಾನೆ ತಡೆಗೆ ಅರಣ್ಯ ಇಲಾಖೆ ತಕ್ಷಣವೇ ಶಾಶ್ವತ ಪರಿಹಾರ ಕಲ್ಪಿಸಬೇಕು ಮತ್ತು ನಷ್ಟ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಮುಂದಿನ ಹತ್ತು ದಿನಗಳೊಳಗೆ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಚೆಯ್ಯಂಡಾಣೆಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಡಿಎಫ್ ಒ ಜಗನ್ನಾಥ್ ಕಾಡಾನೆಗಳ ದಾಂಧಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರಲ್ಲದೇ, ಪ್ರತಿಭಟನೆ ಕೈ ಬಿಟ್ಟು ಸಹಕರಿಸಬೇಕೆಂದು ಮನವಿ ಮಾಡಿದರು.
ವರದಿ : ದುಗ್ಗಳ ಸದಾನಂದ