ಸುಂಟಿಕೊಪ್ಪ,ಜು.19 NEWS DESK: ಆನೆ ಮಾನವ ಸಂಘರ್ಷ ಉಪಶಮನಗೊಳಿಸುವ ನಿಟ್ಟಿನಲ್ಲಿ ತಾತ್ಕಲಿಕ ಮತ್ತು ಶಾಶ್ವತ ಪರಿಹಾರಗಳ ಕುರಿತು ಸದ್ಯದಲ್ಲೇ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿ ಮೇಲಾಧಿಕಾರಿಗಳಿಗೆ ಸೂಕ್ತ ಪ್ರಸ್ತಾವನೆ ಕಳುಹಿಸಲಾಗುವುದೆಂದು ಅರಣ್ಯ ಇಲಾಖೆಯ ಕೊಡಗು ವೃತ್ತದ ಮಡಿಕೇರಿ ವಿಭಾಗದ ಉಪಸಂರಕ್ಷಣಾದಿಕಾರಿ ಬಾಸ್ಕರ್ ಹೇಳಿದರು.
ಕೆದಕಲ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿತವಾಗಿದ್ದ ಕಾಫಿ ಬೆಳೆಗಾರರು ಮತ್ತು ಅರಣ್ಯ ಇಲಾಖಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಡಾನೆ ಓಡಿಸುವ ಸಂದರ್ಭದಲ್ಲಿ ಇಲಾಖೆಯವರಿಗೆ ಮತ್ತು ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಬೇಕಾಗುವ ಅಂಬ್ಯುಲೆನ್ಸ್ ವಾಹನ ಒದಗಿಸುವ ಬಗ್ಗೆ ಘೋಷಣೆ, ಒಂದೂವರೆ ವರ್ಷದ ಹಿಂದೆ ನಡೆದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳ ಮರುಪರಿಶೀಲನೆ ಮತ್ತು ನಿಯಮಿತವಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ಕರೆಯುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದೆಂದು ಬಾಸ್ಕರ್ ಹೇಳಿದರು.
ಈಗಾಗಲೇ ಆನೆ ಓಡಿಸುವ ಕಾರ್ಯಾಚರಣೆ ಚಾಲ್ತಿಯಲ್ಲಿದ್ದು, ಇದು ಹೆಚ್ಚು ಪರಿಣಾಮಕಾರಿಯಾಗಿ ಆಗಬೇಕು, ಯಾವುದೇ ಸಂದರ್ಭದಲ್ಲಿ ಮಾನವ ಜೀವಹಾನಿ ಆಗಬಾರದೆಂಬುದು ನಮ್ಮ ಕಾಳಜಿಯಾಗಿದೆ. ಇದನ್ನು ಕಾಡಾನೆ ಓಡಿಸುವ ಕಾರ್ಯಾಚರಣೆ ಮಾಡಬಾರದು ಎಂಬ ಅರ್ಥದಲ್ಲಿ ತೆಗೆದುಕೊಂಡಿದ್ದನ್ನು ಉಲ್ಲೇಖಿಸಿದ ಭಾಸ್ಕರ್, ಕಾಡಾನೆ ಓಡಿಸುವ ಕಾರ್ಯಾಚರಣೆ ಸಂದರ್ಭ ತೆಗೆದುಕೊಳ್ಳಬೇಕಾದ ಕ್ರಮಗಳ ಆರ್‍ಆರ್‍ಟಿ ಗೆ ಸಂಪೂರ್ಣ ವಿವೇಚನೆ ಮತ್ತು ಜವಬ್ಧಾರಿಯನ್ನು ನೀಡಿರುವುದಾಗಿ ಘೋಷಣೆ ಮಾಡಿದರು. ಇಲ್ಲಿ ಮುಖ್ಯವಾಗಿ ಆನೆಗಳು ಬಂದ ಬಳಿಕ ಓಡಿಸುವುದಕ್ಕಿಂತ ಅವುಗಳ ಬರುವಿಕೆಯನ್ನು ತಡೆಗಟ್ಟಿ ಮರಳಿ ಕಾಡಿಗೆ ಅಟ್ಟುವ ಕೆಲಸಕ್ಕೆ ಹೆಚ್ಚು ಒತ್ತು ಕೊಡಬೇಕಾಗಿದೆ ಎಂದು ಅವರು ಹೇಳಿದರು. ಆನೆ ಮತ್ತು ಮಾನವ ಸಂಘರ್ಷದ ಕುರಿತು ನಡೆದಿರುವ ಉಪಶಮನಕಾರಿ ಪ್ರಯತ್ನದ ಕುರಿತು ಮಾಹಿತಿ ನೀಡಿದ ಅವರು, ಈಗಾಗಲೇ ಇಲಾಖೆಯ ವತಿಯಿಂದ ವಿರಾಜಪೇಟೆ ಮತ್ತು ಮಡಿಕೇರಿ ವಿಭಾಗದಲ್ಲಿ ಕ್ರಮವಾಗಿ 130 ಮತ್ತು 65 ಆನೆಗಳು ಪತ್ತೆಯಾಗಿದ್ದು, ಇದರಲ್ಲಿ ವಿರಾಜಪೇಟೆ ವ್ಯಾಪ್ತಿಯಲ್ಲಿ ಕೇವಲ 5 ಆನೆಗಳು ಅರಣ್ಯದಲ್ಲಿದ್ದರೆ, 125 ಆನೆಗಳು ತೋಟಗಳಲ್ಲಿ ಬಿಡುಬಿಟ್ಟಿವೆ. ಅದೇ ರೀತಿ ಮಡಿಕೇರಿ ವಿಭಾಗದಲ್ಲಿ 25 ಆನೆಗಳು ಕಾಡಿನಲ್ಲಿದ್ದರೆ, ಉಳಿದ ಆನೆಗಳು ತೋಟಗಳಲ್ಲಿ ಸಂಚರಿಸುತ್ತಿವೆ ಎಂಬ ಅಘಾತಕಾರಿ ಮಾಹಿತಿಯನ್ನು ಅವರು ಬಹಿರಂಗ ಪಡಿಸಿದರು.
ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆನೆ ಮಾನವ ಸಂಘರ್ಷದ ಕುರಿತು ಇಲಾಖೆ ಜನಪ್ರತಿನಿಧಿಗಳು ಮತ್ತು ಕೊಡಗು ವನ್ಯಜೀವಿ ಸಮಸ್ಥೆಯ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿದ್ದು ಈ ಬಗ್ಗೆ ಪ್ರಸ್ತಾವನೆಗಳನ್ನು ಇಲಾಖೆಯ ಮೂಲಕ ಸರಕಾರಕ್ಕೆ ಕಳುಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಈಗಾಗಲೇ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಕಾಡಾನೆಗಳು ಸೆರೆಹಿಡಿಯುವ ಬಗ್ಗೆ ವಿರೋಧ ಮತ್ತು ಅವುಗಳನ್ನು ಪಳಗಿಸುವಾಗ ನೀಡುವ ಹಿಂಸೆಯನ್ನು ತಪ್ಪಿಸುವ ನಿಟ್ಟಿನಲ್ಲಿ ನಿರ್ದೇಶನಗಳನ್ನು ನೀಡಬೇಕೆಂದು ಅರ್ಜಿಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೆದಕಲ್ ಗ್ರಾ.ಪಂ ಸದಸ್ಯ ಜಿ.ಡಿ.ಶಿವಶಂಕರ್ ಆನೆ-ಮಾನವ ಸಂಘರ್ಷ ಪರಿಹರಿಸಲಾಗದ ಮಟ್ಟಕ್ಕೆ ಬೆಳೆದಿದ್ದು, ಆನೆ ಹಾವಳಿಯಿಂದ ಸಂತ್ರಸ್ಥರಾದವರಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಆಗ್ರಹಿಸಿದರು. ಎಲ್ಲಾ ಇಲಾಖೆಗಳಲ್ಲಿ ಜನಸ್ಪಂದನ ಮತ್ತು ಜನಸಂಪರ್ಕ ಸಭೆಗಳನ್ನು ಕನಿಷ್ಠ 3 ತಿಂಗಳಿಗೊಮ್ಮೆ ಮಾಡುತ್ತಿದ್ದು, ಅರಣ್ಯ ಇಲಾಖೆಯಲ್ಲಿ ಯಾಕಿಲ್ಲವೆಂದು ಪ್ರಶ್ನಿಸಿದರು. 3 ತಿಂಗಳಿಗೊಮ್ಮೆ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆಯಬೇಕೆಂದು ಆಗ್ರಹಿಸಿದರು.
ಸಭೆಯಲ್ಲಿ ಮಾತನಾಡಿದ ಕಾಫಿಬೆಳೆಗಾರರು ಮತ್ತು ಸಂತ್ರಸ್ಥರು ಅರಣ್ಯ ಇಲಾಖೆಯು ತೋರುತ್ತಿರುವ ನಿರ್ಲಕ್ಷ್ಯ ಮತ್ತು ಬೇಜವಬ್ದಾರಿಯ ಕುರಿತು ಕಿಡಿಕಾರಿದರು. ಅರಣ್ಯ ಇಲಾಖೆಯ ಕೆಳಹಂತದ ಸಿಬ್ಬಂದಿಗಳಿಗೆ ಆನೆ ಓಡಿಸುವ ಆನೆ ಸೆರೆಕಾರ್ಯಚರಣೆ ಸಂದರ್ಭ ಯಾವುದೇ ರಕ್ಷಣೆ ಇಲ್ಲ ಮುಖ್ಯವಾಗಿ ಅಂಬ್ಯುಲೆನ್ಸ್ ವ್ಯವಸ್ಥೆ ಇಲ್ಲ ಓರ್ವ ವಾಚರ್ ತೀವ್ರವಾಗಿ ಗಾಯಗೊಂಡ ಸಂದರ್ಭ ಆತನನನ್ನು ಬೈಕ್‍ನಲ್ಲಿ ಕರೆದುಕೊಂಡು ಹೋದ ಬಗ್ಗೆ ಉಲ್ಲೇಖಿಸಿ ಮತನಾಡಿದ ಕೊರವಂಡ ಸಂತೋಷ್ ಪೂವಯ್ಯ ನಿಮ್ಮ ಸಿಬ್ಬಂದಿಗಳ ರಕ್ಷಣೆ ಮಾಡಿಕೊಳ್ಳಲಾಗದ ಇಲಾಖೆ ಆನೆಗಳಿಂದ ಆಗುವ ಹಾನಿ ಮಾನವ ಜೀವಹಾನಿಯನ್ನು ಹೇಗೆ ತಪ್ಪಿಸುವಿರಿ ಎಂದು ಕಟ್ಟುವಾಗಿ ಪ್ರಶ್ನಿಸಿ ಕನಿಷ್ಠ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು.
ಕಾಫಿಬೆಳೆಗಾರ ಶ್ರೀನಾಥ್ ಮಾತನಾಡಿ, ನಮ್ಮಗೆ ಶಾಶ್ವತ ಪರಿಹಾರ ಬೇಕು, ಅರಣ್ಯಭವನದಲ್ಲಿ ಅಥವಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಸಭೆಗೆ ನಮಗೂ ಪ್ರಾತಿನಿಧ್ಯ ನೀಡಬೇಕು, ಪ್ರಾಣಿ ಪ್ರಿಯರು ಮತ್ತು ಪರಿಸರ ವಾದಿಗಳು ಸ್ವಯಂಸೇವಾ ಸಂಸ್ಥೆಗಳು ನಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಸೂಚಿಸಬೇಕೆ ಹೊರತು ಅವರಷ್ಟಕೆ ಸಭೆಗಳನ್ನು ಮಾಡಿಕೊಂಡು ಪರಿಹಾರಗಳನ್ನು ಸಲಹೆ ನೀಡುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಚೆಪ್ಪುಡಿರ ಸತೀಶ್ ಮಾತನಾಡಿ, ನನ್ನ ತೋಟದಲ್ಲಿ 6ಕ್ಕಿಂತಲ್ಲೂ ಹೆಚ್ಚು ಆನೆಗಳು ಬಿಡುಬಿಟ್ಟಿದ್ದು, ಪರಿಹಾರ ಏನೆಂಬುದನ್ನು ಪ್ರಶ್ನಿಸಿದರಲ್ಲದೆ ಮುಂಬರುವ ದಿನಗಳಲ್ಲಿ ಕಾಫಿ ತೋಟಗಳು ಆನೆಗಳ ವಾಸಸ್ಥಾನವಾಗಿ ಪರಿವರ್ತಿವಾಗಿ ನಾವು ಮತ್ತು ನಮ್ಮ ಮುಂದಿನ ಜನಾಂಗ ನಲೆಕಳೆದುಕೊಳ್ಳುವ ಭಯಹುಟ್ಟಿದೆ ಎಂದು ಆತಂಕ ವ್ಯಕತಪಡಿಸಿದರು.
ಕೆದಕಲ್ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಸಂಜು ಪೊನ್ನಪ್ಪ ಮಾತನಾಡಿ, ಈ ರೀತಿಯ ಸಭೆಗಳು ಸಾಕಷ್ಟು ನಡೆದಿದ್ದು, ಯಾವುದೇ ಪರಿಹಾರ ಸಿಕ್ಕಿಲ್ಲ ಕೇವಲ ಅಂದಿನ ಸಭೆ ಅಂದಿಗೆ ಎಂಬ ವ್ಯವಸ್ಥೆಯನ್ನು ನಾವು ಕಾಣುತ್ತಿದ್ದು, ಸಭೆಯ ತೀರ್ಮಾನಗಳು ಯಾಕೆ ಕಾರ್ಯರೂಪಕ್ಕೆ ಬಂದಿಲ್ಲವೆಂದು ಪ್ರಶ್ನಿಸಿದರು.
ಕಾಫಿಬೆಳೆಗಾರ ಕೆ.ಕೆ.ಬೆಳಿಯಪ್ಪ ಮಾತನಾಡಿ ಇಲಾಖೆಯಿಂದ ನಮ್ಮ ತಾಳ್ಮೆಪರೀಕ್ಷಿಸುವ ಕೆಲಸವಾಗುತ್ತಿದ್ದು ಆನೆಗಳನ್ನು ಕೂಡ ಕ್ರಿಮಿಗಳೆಂದು ಪರಿಗಣಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಿಂದ ಹೊರಗಿಡಬೇಕೆಂದು ಆಗ್ರಹಿಸಿದ ಅವರು ಕೆವಲ 3 ತಿಂಗಳಿನಲ್ಲಿ ಆನೆ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತೆವೆಂದು ಸವಾಲು ಎಸೆದರು. ಸಭೆಯಲ್ಲಿ ಆನೇಕ ಈ ಸಲಹೆಯನ್ನು ಗಡಚಿಕ್ಕಿಸುವ ಚಪ್ಪಳೆಯೊಂದಿಗೆ ಸ್ವಾಗತಿಸಿದ್ದು ಕಂಡು ಬಂತು. ಕೊಡಗರಹಳ್ಳಿಯ ಕಾಫಿಬೆಳೆಗಾರ ಸಂಜಯ್ ಸರಳಾಯ ಮಾತನಾಡಿ ಆನೆಗಳ ಸಂತಾತಿ ನಿಯಂತ್ರಿಸುವ ನಿಟ್ಟಿನಲ್ಲಿ ದಕ್ಷಿಣ ಆಫ್ರಿಕಾದ ಸಂಸ್ಥೆಯೊಂದು ಪರಿಣಿತಿ ಹೊಂದಿ ಯಶಸ್ವಿ ಕಾರ್ಯಚರಣೆಯನ್ನು ಹೊಂದಿ ಅದನ್ನು ನಮ್ಮಲ್ಲಿಯೂ ಅಳವಡಿಸಿಕೊಳ್ಳುವುದಕ್ಕೆ ಆದ್ಯಾಯನ ಪೂರ್ವಕ ವರದಿಯೊಂದನ್ನು ಅರಣ್ಯ ಕಾರ್ಯಪಡೆಯ ಮುಖ್ಯಸ್ಥರಾಗಿದ್ದ ಶಾಶ್ವತಿಮಿಶ್ರ ಅವರಿಗೆ ಖುದ್ದಾಗಿ ನೀಡಿದ್ದು, ಹೆಚ್ಚು ಕಡಿಮೆ ವರ್ಷಕಳೆದರೂ ಯಾವುದೇ ಪ್ರತಿಸ್ಪಂದನವಿಲ್ಲ ಎಂದು ವಿಷಾದದಿಂದ ನುಡಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಕಾಫಿ ಬೆಳೆಗಾರ ಮೋಹನ್‍ದಾಸ್ ಮಾತನಾಡಿ. ಆನೆಗಳಿಂದ ಕೃಷಿಫಸಲು ನಷ್ಟಕ್ಕೆ ಪರಿಹಾರ ಹೆಚ್ಚುಗೊಳಿಸಬೇಕು ಕಾಫಿತೋಟಗಳಲ್ಲಿ ಹೋಂಸ್ಟೇ ಪರಿರ್ಯಾಯ ಅರ್ಥಿಕ ವ್ಯವಸ್ಥೆಯಾಗಿದ್ದು ಪ್ರವಾಸೋದ್ಯಮಕ್ಕೆ ತನ್ನದೆಯಾದ ಕೊಡುಗೆ ನೀಡಿದೆ ಆದರೆ ಮನೆ ಬಾಗಿಲಿಗೆ ಸಮಯದ ಆರಿವೆ ಇಲ್ಲದೆ ಕಾಡಾನೆಗಳು ಬರುತ್ತಿರುವ ಹಿನ್ನಲೆಯಲ್ಲಿ ಕಾಫಿತೋಟಗಳು ಹೋಂಸ್ಟೇಗಳ ನಿರ್ವಹಣೆ ಕಷ್ಟವಾಗಿದ್ದು, ಕೊಡಗಿನ ಅರ್ಥಿಕ ವ್ಯವಸ್ಥೆಗೆ ತೀವ್ರಹೊಡೆತ ಬೀಳುತ್ತಿದೆ. ಈಬಗ್ಗೆ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸರಕಾರಕ್ಕೆ ಸೂಕ್ತ ಪ್ರಸ್ತಾವನೆಗಳನ್ನು ಕಳುಹಿಸಬೇಕಾದ ಅನಿವಾರ್ಯತೆಗಳು ಇದೆ ಎಂದು ಪರಿಸ್ಥಿತಿಯ ಮನದಟ್ಟು ಮಾಡಿದರು.
ಸಭೆಯಲ್ಲಿ ಕೊಡಗರಹಳ್ಳಿ, ಕಂಬಿಬಾಣೆ, ನಾಕೂರು ಶಿರಂಗಾಲ, ಕೆದಕಲ್, ಹೊರೂರು, ಕಾರೆಕೊಲ್ಲಿ, ಭೂತನಕಾಡು, ಮತ್ತಿಕಾಡು, ಚೌಡಿಕಾಡು ವ್ಯಾಪ್ತಿಯಲ್ಲಿನ ಕಾಫಿಬೆಳೆಗಾರರು ಪಾಲ್ಗೊಂಡು ತಮ್ಮ ಕಷ್ಟನಷ್ಟಗಳನ್ನು ಸಭೆಯಲ್ಲಿ ತೆರೆದಿಟ್ಟರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಸಿಗೋಪಾಲ್, ಕುಶಾಲನಗರ ವಲಯ ಅರಣ್ಯ ಅಧಿಕಾರಿ ರತನ್‍ಕುಮಾರ್, ಆರ್.ಆರ್.ಟಿ ತಂಡದ ಮುಖ್ಯಸ್ಥ ಸಹಾಯಕ ವಲಯ ಅರಣ್ಯಾಧಿಕಾರಿ ದೇವಯ್ಯ, ಸಿದ್ದರಾಮ ಸೇರಿದಂತೆ ಸಿಬ್ಬಂದಿಗಳು ಸುಂಟಿಕೊಪ್ಪ ಅಪರಾಧ ವಿಭಾಗದ ಎಸ್‍ಐ ಸ್ವಾಮಿ, ಎಎಸ್‍ಐ ತೀರ್ಥಕುಮಾರ್ ಸಿಬ್ಬಂದಿಗಳು ಇದ್ದರು.










