

ಸುಂಟಿಕೊಪ್ಪ ಜು.23 NEWS DESK : ಪಸಕ್ತ ಸಾಲಿನಲ್ಲಿ ಆಶಾದಾಯಕ ಮುಂಗಾರು ಮಳೆಯಿಂದ ಕೃಷಿಕರು ಹೆಚ್ಚಿನ ಉತ್ಸಾಹದೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಜೂನ್ ಬಹುಪಾಲು ಮಳೆಯಾಗುವುದರೊಂದಿಗೆ ಜುಲೈನಲ್ಲಿ ಪುನರ್ವಸು ಮಳೆಯ ಆರ್ಭಟದಿಂದ ಉತ್ತಮ ಮಳೆಯಾಗಿದ್ದು ಹೊಳೆ, ತೋಡು, ನಾಲೆ, ಝರಿಗಳು ತುಂಬಿ ಹರಿಯುತ್ತಿದ್ದು ಗದ್ದೆಗಳಲ್ಲೂ ನೀರು ತುಂಬಿರುವುದರಿಂದ ರೈತರು ಗದ್ದೆ ಉಳುಮೆ ಮಾಡಿ ಭತ್ತದ ಬೀಜ ಹಾಕಲು ಸಹಕಾರಿಯಾಯಿತು. ಮೊದಲೇ ಬೀಜ ಹಾಕಿದ ರೈತರಿಗೆ ಸಸಿಮಿಡಿ ಬೆಳೆದಿದ್ದರಿಂದ ಈಗ ಗದ್ದೆಯನ್ನು ಹದಮಾಡಿ ನಾಟಿ ಕಾಯಕ ಮಾಡಲು ಅನುಕೂಲಕರವಾಗಿದೆ.
ಸುಂಟಿಕೊಪ್ಪದ ಗದ್ದೆಹಳ್ಳ ನಿವಾಸಿ ಪ್ರಗತಿಪರ ಕೃಷಿಕ ಪಟ್ಟೆಮನೆ ಉದಯಕುಮಾರ್, ಪ್ರಸನ್ನ, ಮಧು, ಸದಾಶಿವ ಅವರುಗಳ ಗದ್ದೆಯಲ್ಲಿ ಕೃಷಿಕರು ನಾಟಿ ಕಾರ್ಯದಲ್ಲಿ ಮಗ್ನರಾಗಿರುವುದು ಕಂಡು ಬಂತು.
ಕೊಡಗರಹಳ್ಳಿ, ಕಂಬಿಬಾಣೆ, ಹೆರೂರು, ಹರದೂರು, ಹಾರ್‍ಬೈಲ್, ಕೆದಕಲ್, ಹೊರೂರು, ಹಾಲೇರಿ, ಕಾಂಡನಕೊಲ್ಲಿ ಮೊದಲಾದ ಗ್ರಾಮದಲ್ಲೂ ಬಿರುಸಿನಿಂದ ಕೃಷಿ ಚಟುವಟಿಕೆಯನ್ನು ಕೈಗೊಂಡಿದ್ದಾರೆ. 









