ಮಡಿಕೇರಿ ಜು.26 NEWS DESK : ಸಿದ್ದಾಪುರದ ಕಾಫಿ ತೋಟಗಳು ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಜು.29 ರಂದು ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿಯಲ್ಲಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಅಂದು 10.30 ಗಂಟೆಗೆ ಮಾನವ ಸರಪಳಿ ನಿರ್ಮಿಸಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ವಿರೋಧಿಸಿ ಹಕ್ಕೊತ್ತಾಯ ಮಂಡಿಸಲಾಗುವುದು. ಕೊಡವ ಲ್ಯಾಂಡ್ ನ ಸಂರಕ್ಷಣೆಗಾಗಿ ಸರ್ವ ಕೊಡವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ಅವರು ಮನವಿ ಮಾಡಿದ್ದಾರೆ. ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆ 79ಎ ಮತ್ತು 79ಬಿಯನ್ನು ದುರ್ಲಾಭಪಡಿಸಿಕೊಂಡು ಕೃಷಿ ಜಮೀನು, ಭತ್ತದ ಗದ್ದೆಗಳು ಮತ್ತು ಕಾಫಿ ತೋಟಗಳನ್ನು ಪರಿವರ್ತನೆ ಮಾಡಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲೂ ಆಂಧ್ರದ ಹಣ ಬಳಕೆಯಾಗುತ್ತಿದ್ದು, ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯಾಗುತ್ತಿದೆ. ಬೆಂಗಳೂರು, ತಿರುವನಂತಪುರ, ಚೆನ್ನೈ ಹೈದರಬಾದ್ ಸೇರಿದಂತೆ ದೇಶದ ವಿವಿಧೆಡೆಯ ಭೂಮಾಫಿಯ ಮತ್ತು ರಾಜಕೀಯ ಸಂಯೋಜಿತ ಗುಂಪುಗಳು ಈ ಕಾರ್ಯದಲ್ಲಿ ತೊಡಗಿವೆ. ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮೂಲಕ ರೆಸಾರ್ಟ್ಗಳು ದೈತ್ಯಾಕಾರದ ವಿಲ್ಲಾಗಳು, ಲೇಔಟ್ ಗಳು, ಮನೆಗಳು ಟೌನ್ ಶಿಪ್ ಗಳು, ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಸೇರಿದಂತೆ ವಾಣಜ್ಯ ಉದ್ದೇಶದ ಯೋಜನೆಗಳು ತಯಾರಾಗುತ್ತಿದೆ. ಇದು ಪವಿತ್ರ ಕೊಡವ ಲ್ಯಾಂಡ್ ನ ನಾಶಕ್ಕೆ ಕಾರಣವಾಗಬಹುದು. ತಡಿಯಂಡಮೋಲ್‌ನ ಕೆಳಗೆ ಕೆಲವು ಕಾಫಿ ತೋಟಗಳು ಪರಿವರ್ತನೆಯಾಗಿದೆ. ಗಾಳಿಬೀಡಿನ ಹಸಿರು ಬೆಲ್ಟ್ ಪ್ರದೇಶದಲ್ಲಿ ಹೌಸಿಂಗ್ ಕಾಲೋನಿಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಸೂರ್ಲಬ್ಬಿ ಮತ್ತು ಅರೆಕಾಡು ಭಾಗದಲ್ಲಿ ಭೂಪರಿವರ್ತನೆಯಾಗಿ ಟೌನ್ ಶಿಪ್ ಗಳ ನಿರ್ಮಾಣಕ್ಕೆ ಸಜ್ಜಾಗುತ್ತಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದ್ದಾರೆ. ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು “ಕೊಡವ ಲ್ಯಾಂಡ್” ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.