ವಿರಾಜಪೇಟೆ ಜು.26 NEWS DESK : ವಿರಾಜಪೇಟೆ -ಕರಡವನ್ನು ಸಂಪರ್ಕಿಸುವ ರಸ್ತೆಯು ಕೆದಮುಳ್ಳೂರು ಗ್ರಾಮ ಸಮೀಪದ ತೆರ್ಮೆಮೊಟ್ಟೆ ಎಂಬಲ್ಲಿ ಬಿರುಕು ಬಿಟ್ಟಿದ್ದು, ಇಲಾಖಾ ವತಿಯಿಂದ ರಸ್ತೆಗೆ ಟಾರ್ಪಲ್ ಹೊದಿಕೆಯನ್ನು ಅಳವಡಿಸಿದ್ದರು. ತದನಂತರ ಸಾರ್ವಜನಿಕರಿಗೆ ಸಂಚಾರಕ್ಕೆ ಅನಾನುಕೂಲ ಎದುರಾಗಿತ್ತು. ಇತ್ತೀಚಿಗೆ ಸಾರ್ವಜನಿಕರು ಹಾಗೂ ಸ್ಥಳೀಯರು ಬದಲಿ ರಸ್ತೆಯ ವ್ಯವಸ್ಥೆಯನ್ನು ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿ ಪ್ರತಿಭಟನೆಯನ್ನು ನಡೆಸಿದರು. ಮತ್ತು ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ಹೇಳಿದ್ದರು.
ಇದೀಗ ವಿರಾಜಪೇಟೆ ತಹಶೀಲ್ದಾರ್ ಹಾಗೂ ತಾಲ್ಲೂಕು ದಂಡಧಿಕಾರಿ ಹೆಚ್.ಎನ್.ರಾಮಚಂದ್ರ ತಾಲ್ಲೂಕು ಇಲಾಖಾ ಸಿಬ್ಬಂದಿಗಳು ಹಾಗೂ ಲೋಕೋಪಯೋಗಿ ಇಲಾಖೆಯ ಜೊತೆಯಲ್ಲಿ ಆಗಮಿಸಿ ಗ್ರಾಮಸ್ಥರ ಸಮ್ಮುಖದಲ್ಲಿ ಸ್ಥಳ ಪರಿಶೀಲನೆಯನ್ನು ಮಾಡಿದರು.
ಕೆದಮುಳ್ಳೂರು ಗ್ರಾ.ಪಂ ಉಪಾಧ್ಯಕ್ಷ ಎಂ. ಪರಮೇಶ್ವರ್ ತಹಶೀಲ್ದಾರ್ ಅವರಿಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಗಳನ್ನು ವಿವರಿಸಿದರು. ಮತ್ತು ಬದಲಿ ರಸ್ತೆಯನ್ನು ದುರಸ್ಥಿ ಪಡಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿ ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ ತಹಸೀಲ್ದಾರ್ ರಾಮಚಂದ್ರ ಕಾಲ್ನಡಿಗೆಯಲ್ಲಿಯೇ ಸುಮಾರು ಒಂದು ಕಿಲೋಮೀಟರ್ ತೆರಳಿ ಬದಲಿ ರಸ್ತೆಯನ್ನು ಪರಿಶೀಲಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಸಮಸ್ಯೆಯು ಈಗಾಗಲೇ ಗಮನಕ್ಕೆ ಬಂದಿದ್ದು, ಶೀಘ್ರದಲ್ಲಿಯೇ ಬದಲಿ ರಸ್ತೆಯನ್ನು ಸಾರ್ವಜನಿಕರಿಗೆ ಬಳಸಲು ಅನುವು ಮಾಡಿಕೊಡುತ್ತೇವೆ. ಸಾರ್ವಜನಿಕರ ಹಾಗೂ ಸ್ಥಳೀಯರು ಸಹಕಾರವನ್ನು ನೀಡಬೇಕು ಎಂದು ಕೋರಿದರು. ತಹಸೀಲ್ದಾರ್ ಬದಲಿ ರಸ್ತೆಯ ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಕೈ ಬಿಟ್ಟರು.
ಕಂದಾಯ ಪರಿವೀಕ್ಷಕರಾದ ಹರೀಶ್, ಕೆದಮುಳ್ಳೂರು ಗ್ರಾ.ಪಂ ಅಧ್ಯಕ್ಷ ಜಫ್ರಿ ಚಂಗಪ್ಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಣಿ, ಗ್ರಾ.ಪಂ ಮಾಜಿ ಸದಸ್ಯರಾದ ಚೋಟು ಬಿದ್ದಪ್ಪ, ತಾಲ್ಲೂಕು ಕಚೇರಿ ಸಿಬ್ಬಂದಿಗಳು, ಲೋಕೋಪಯೋಗಿ ಇಲಾಖಾ ಸಿಬ್ಬಂದಿಗಳು, ಗ್ರಾ.ಪಂ ಸದಸ್ಯರು ಹಾಗೂ ಸಾರ್ವಜನಿಕರು ಹಾಜರಿದ್ದರು.