
ಕುಶಾಲನಗರ NEWS DESK ಆ.4 : ಕೇರಳದ ವೈನಾಡ್ ನಲ್ಲಿ ಭೂ ಕುಸಿತದಿಂದ ಸಂತ್ರಸ್ತರಾದ ನಾಗರಿಕರಿಗೆ ಸಹಾಯ ಹಸ್ತ ಚಾಚುವ ಸಂಬಂಧ ಕುಶಾಲನಗರ ಕಾವೇರಿ ಆಟೋ ನಿಲ್ದಾಣದ ಚಾಲಕರ ತಂಡ ಅಗತ್ಯ ವಸ್ತುಗಳೊಂದಿಗೆ 8 ಆಟೋಗಳಲ್ಲಿ ತೆರಳಿ ಭಾನುವಾರ ಸ್ವಯಂಸೇವಕರಾಗಿ ಕೆಲಸ ನಿರ್ವಹಿಸಿದರು. ಕುಶಾಲನಗರ ಸರಕಾರಿ ಆಸ್ಪತ್ರೆ ಹಿಂಭಾಗದಲ್ಲಿರುವ ಕಾವೇರಿ ಆಟೋ ಚಾಲಕ ಮಾಲೀಕರು, ಚಾಲಕರು ಅಕ್ಕಿ ಬೇಳೆ ಎಣ್ಣೆ ದಿನಸಿ ಪದಾರ್ಥಗಳು ಬಟ್ಟೆಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ತಮ್ಮ ಆಟೋಗಳಲ್ಲಿ ತುಂಬಿಸಿ ಭಾನುವಾರ ಮುಂಜಾನೆ 5 ಗಂಟೆ ವೇಳೆಗೆ 8 ಆಟೋಗಳಲ್ಲಿ ಸುಮಾರು ಹತ್ತಕ್ಕೂ ಅಧಿಕ ಮಂದಿ ತೆರಳಲಿದ್ದಾರೆ. ಅಲ್ಲಿಯ ಸಂತ್ರಸ್ತರಿಗೆ ನೆರವು ನೀಡುವುದು ಮತ್ತು ತಮ್ಮ ವಾಹನದ ಮೂಲಕ ಅಲ್ಲಿನ ಜನರಿಗೆ ತಮ್ಮ ಕೈಲಾದಷ್ಟು ಸೇವೆ ಸಲ್ಲಿಸುವುದರೊಂದಿಗೆ ಸಂತ್ರಸ್ತರಿಗೆ ಅನುಕೂಲ ಕಲ್ಪಿಸುವುದು ತಮ್ಮ ಉದ್ದೇಶವಾಗಿದೆ ಎಂದು ತಂಡದ ಪ್ರಮುಖರಾದ ಅರೀಫ್ ತಿಳಿಸಿದ್ದಾರೆ. ಚಾಲಕರಾದ ಆರೀಫ್, ಚೇತನ್, ನೂತನ್, ಮಹೇಶ್ ವಿಜಯ್ ಪ್ರಜ್ವಲ್ ಹಮೀದ್, ಕುಮಾರ್ ಮತ್ತಿತರರು ತೆರಳಿ ತಮ್ಮೊಂದಿಗೆ ಒಯ್ದ ದಿನ ನಿತ್ಯದ ಅಗತ್ಯ ಸಾಮಗ್ರಿಗಳನ್ನು ವಿತರಿಸುವುದರೊಂದಿಗೆ ಸ್ವಯಂಸೇವಕರಾಗಿ ಕೆಲಸ ನಿರ್ವಹಿಸಿದರು.








