
ಮಡಿಕೇರಿ NEWS DESK ಆ.4 : ಕೊಡವ ಜನಾಂಗವೂ ಈ ಮಣ್ಣಿನ ಮೂಲದಿಂದ ಬೆಳೆದು ಬಂದಿದೆ. ಭೂಮಿಯೆ ನಮ್ಮ ಎಲ್ಲಾ ಸಂಸ್ಕೃತಿ ಮತ್ತು ಬದುಕಿನ ಮೂಲ, ಹಾಗೇ ಒಂದು ಜಾನಾಂಗದ ಹೆಗ್ಗುರುತೇ ಆ ಜನಾಂಗದ ಭಾಷೆ. ಭಾಷೆ ಮತ್ತು ಮಣ್ಣಿನ ಮೂಲತನ ಉಳಿದರೆ ಮಾತ್ರ ಕೊಡವಾಮೆ ಬೆಳೆಯಲಿದೆ ಎಂದು ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅಭಿಪ್ರಾಯಪಟ್ಟಿದ್ದಾರೆ. ಪೊನ್ನಂಪೇಟೆ ತಾಲ್ಲೂಕು ಬೇಗೂರಿನ ಪಟ್ಟಕೇರಿ ಅಂಬಲ ಸಂಘಟನೆಯ ಎಂಟನೇ ವರ್ಷದ ಬೇಲ್ ನಮ್ಮೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭೂಮಿ ಮತ್ತು ಭಾಷೆಯನ್ನು ಉಳಿಸುವಂತೆ ಕರೆ ನೀಡಿದರು. ಕೊಡವರ ಹುಟ್ಟಿನಿಂದ ಸಾವಿನವರೆಗೆ, ಪ್ರತೀ ಹಬ್ಬ ಹಾಗೂ ಆಚರಣೆಗಳು ಭೂಮಿ ಮತ್ತು ಗದ್ದೆಯ ಸುತ್ತಲೇ ನಿಂತಿದೆ. ಪ್ರತಿಯೊಂದು ಆಚರಣೆಗಳು ಕೂಡ ಕೃಷಿ ಆಧಾರಿತವಾಗಿಯೇ ಇದೆ. ನಮ್ಮ ಸಂಪ್ರದಾಯ ಆಚರಣೆಯ ಮೂಲ ಹೆಗ್ಗುರತೇ ಭಾಷೆ. ನಾವೆಷ್ಟೇ ಮುಂದುವರೆದು ಏನೇ ಸಾಧನೆಗಳನ್ನು ಮಾಡಿದರೂ ನಮ್ಮ ಭಾಷೆಯನ್ನು ಕಡೆಗಣಿಸಿದರೆ ನಾವು ಇದ್ದೂ ಇಲ್ಲದಂತೆ. ಆದ್ದರಿಂದ ಈ ಕೊಡಗಿನ ಪವಿತ್ರ ಮಣ್ಣು ಮತ್ತು ನಮ್ಮ ತಾಯಿಭಾಷೆಯ ಉಳಿವಿಗೆ ನಾವೆಲ್ಲರು ಕಟೀಬದ್ದರಾಗಿರಬೇಕು ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಉಪನ್ಯಾಸಕ ಡಾ.ಜಡೇಗೌಡ ಕೊಡಗಿನ ಅದರಲ್ಲೂ ಕೊಡವ ಸಂಪ್ರದಾಯ ಅತ್ಯಂತ ಶ್ರೀಮಂತವಾಗಿದೆ. ಇಲ್ಲಿನ ಪ್ರಾಕೃತಿಕ ಹಿನ್ನೆಲೆಯೇ ಅತ್ಯಂತ ಸೊಬಗಿನಿಂದ ಕೂಡಿದೆ. ಹಿರಿಯರು ಆಚರಿಸಿಕೊಂಡು ಬಂದಿರುವ ಸಂಪ್ರದಾಯವನ್ನು ಮುಂದಿನ ಪೀಳಿಗೆಯೂ ಪಾಲಿಸುವಂತೆ ಪ್ರೇರೇಪಿಸಬೇಕಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಟ್ಟಕೇರಿ ಅಂಬಲ ಸಂಘದ ಅಧ್ಯಕ್ಷ ಮತ್ರಂಡ ರಾಜ ಮುತ್ತಪ್ಪ ಅವರು, ಪಟ್ಟಕೇರಿ ಅಂಬಲ ಸಂಘಟನೆ ಕಳೆದ ಹನ್ನೊಂದು ವರ್ಷಗಳಿಂದ ಗ್ರಾಮದಲ್ಲಿ ನಿರಂತರ ಜಾಗೃತಿ ಮೂಡಿಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭತ್ತ ಬೆಳೆಯಲು ಪ್ರೇರೇಪಿಸಲಾಗುತ್ತಿದೆ. ಲಾಭ ನಷ್ಟದಿಂದಾಚೆಗೆ ನಮಗೆ ಗದ್ದೆಯೊಂದಿಗಿರುವ ಭಾವನಾತ್ಮಕ ಸಂಬಂಧದ ಕುರುಹಾಗಿ ಯುವ ಸಮೂಹ ಕೂಡ ಭತ್ತ ಬೆಳೆಯುವತ್ತ ಆಕರ್ಷಿತರಾಗಿರುವುದು ಹೆಮ್ಮೆ ತಂದಿದೆ ಎಂದರು. ಗ್ರಾಮದ ಪ್ರಗತಿ ಪರ ಕೃಷಿಕರಾದ ಕೇಚಿಟ್ಟಿರ ಪೊನ್ನಪ್ಪ ಅವರನ್ನು ಸನ್ಮಾನಿಸಲಾಯಿತು. ಪಟ್ಟಕೇರಿ ಅಂಬಲ ಸಂಘದ ಕಾರ್ಯದರ್ಶಿ ಚೋಡುಮಾಡ ಸುಬ್ಬಯ್ಯ, ಸಲಹೆಗಾರ ಮತ್ರಂಡ ಗಣೇಶ್ ಅವರು ಉಪಸ್ಥಿತರಿದ್ದರು. ಕುಮಾರಿ ಮತ್ರಂಡ ಗಾನವಿ ದೇಚಮ್ಮ ಪ್ರಾರ್ಥಿಸಿ, ಮತ್ರಂಡ ಬೋಪಣ್ಣ ನಿರೂಪಿಸಿ ವಂದಿಸಿದರು.










