ಮಡಿಕೇರಿ ಆ.4 NEWS DESK : ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಜುಲೈ ತಿಂಗಳಿನಲ್ಲಿ ಸುರಿದ ಗಾಳಿ ಸಹಿತ ಮಹಾಮಳೆ ಅಪಾರ ನಷ್ಟಕ್ಕೆ ಕಾರಣವಾಗಿದೆ. ಒಂದು ತಿಂಗಳು ಸುರಿದ ಭಾರೀ ಮಳೆ ಬತ್ತಿ ಹೋಗಿದ್ದ ಕೆರೆ, ನದಿ, ಜಲಾಶಯಗಳನ್ನು ಭರ್ತಿ ಮಾಡಿ ಸಂತಸ ಮೂಡಿಸಿದ್ದರೆ, ಮತ್ತೊಂದೆಡೆ ಸಾರ್ವಜನಿಕ ಆಸ್ತಿಪಾಸ್ತಿ, ಕೃಷಿ ಕ್ಷೇತ್ರಕ್ಕೆ ಹಾನಿಯಾಗಿದೆ. ಜಿಲ್ಲೆಯ ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ, ಕುಶಾಲನಗರ ಮತ್ತು ಪೊನ್ನಂಪೇಟೆ ತಾಲ್ಲೂಕು ಸೇರಿದಂತೆ ಇಡೀ ಜಿಲ್ಲೆಯೆ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿತ್ತು. ಕಾವೇರಿ ಮತ್ತು ಲಕ್ಷ್ಮಣತೀರ್ಥ ನದಿ ಪಾತ್ರಗಳಲ್ಲಿ ಬರುವ 16 ಗ್ರಾಮಗಳು ನೆರೆ ಹಾವಳಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಲ್ಲದೆ, 269 ಮಂದಿ ತೊಂದರೆಗೆ ಒಳಗಾದರು. ಜಿಲ್ಲಾ ವ್ಯಾಪ್ತಿಯ 13 ಕಡೆಗಳಲ್ಲಿ ಗುಡ್ಡ ಕುಸಿತಗಳು ಸಂಭವಿಸಿದ್ದರೆ, 20 ಕಡೆಗಳಲ್ಲಿ ಬರೆ ಕುಸಿತದ ಘಟನೆ ನಡೆದಿದೆ. ಇದರಿಂದ ಗ್ರಾಮೀಣ ಭಾಗದ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಇನ್ನಷ್ಟೆ ದುರಸ್ತಿ ಕಾಮಗಾರಿ ನಡೆಯಬೇಕಾಗಿದೆ.
::: ಮನೆಗಳಿಗೆ ಹಾನಿ :::
ಭಾರೀ ಪ್ರಮಾಣದ ಗಾಳಿ ಮಳೆಯಿಂದ ಜಿಲ್ಲಾ ವ್ಯಾಪ್ತಿಯಲ್ಲಿ 19 ಮನೆಗಳು ಸಂಪೂರ್ಣವಾಗಿ ಕುಸಿದು ಹಾನಿ ಸಂಭವಿಸಿದ್ದರೆ, 50 ಮನೆಗಳು ಗಂಭೀರ ಸ್ವರೂಪದಲ್ಲಿ ಕುಸಿದಿದೆ. 185 ಮನೆಗಳು ಭಾಗಶಃ ಕುಸಿದು ಹಾನಿ ಸಂಭವಿಸಿದ್ದು, ಹಲವು ಕುಟುಂಬಗಳ ಬದುಕು ಅತಂತ್ರವಾಗಿದೆ.
::: 269 ಮಂದಿಯ ಸ್ಥಳಾಂತರ :::
ಭಾರೀ ಮಳೆಯಿಂದ ಅಪಾಯದ ಮಟ್ಟ ಮೀರಿ ಹರಿದ ಕಿರು ತೊರೆಗಳು, ಕಾವೇರಿ, ಲಕ್ಷ್ಮಣತೀರ್ಥ ನದಿಗಳಿಂದ ನೆರೆ ಹಾವಳಿಗೆ ತುತ್ತಾದ 269 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಸಂತ್ರಸ್ತರ ಅನುಕೂಲಕ್ಕಾಗಿ ಜಿಲೆಯ ವಿವಿಧೆಡೆ 14 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿತ್ತು. ಪ್ರಸ್ತುತ ಮಳೆಯ ಪ್ರಮಾಣ ಕುಸಿದಿರುವುದರಿಂದ ಭಾಗಮಂಡಲದ ಕಾಶಿ ಮಠ, ವಿರಾಜಪೇಟೆ ಸಂತ ಅನ್ನಮ್ಮ ಶಾಲೆ, ಸೋಮವಾರಪೇಟೆಯ ಬಾಲಕರ ವಿದ್ಯಾರ್ಥಿ ನಿಲಯ ಮತ್ತು ಬಲ್ಯಮಂಡೂರು ಅಂಗನವಾಡಿ ಕೇಂದ್ರದಲ್ಲಿ ಮಾತ್ರ ಕಾಳಜಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
::: ಜಾನುವಾರುಗಳ ಸಾವು ::
ಭಾರೀ ಗಾಳಿ ಮಳೆಯಿಂದ ನಿರ್ಮಾಣವಾದ ಶೀತದ ವಾತಾವರಣ ಮತ್ತು ಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್ ತಂತಿಗಳನ್ನು ಸ್ಪರ್ಶಿಸಿ ಒಟ್ಟು 18 ಜಾನುವಾರುಗಳು ಸಾವನ್ನಪ್ಪಿವೆ.
::: 2810 ವಿದ್ಯುತ್ ಕಂಬಗಳಿಗೆ ಹಾನಿ :::
ಗಾಳಿಮಳೆಯಿಂದ ಜಿಲ್ಲಾ ವ್ಯಾಪ್ತಿಯಲ್ಲಿ 2810 ವಿದ್ಯುತ್ ಕಂಬಗಳು ಧರೆಗುರುಳಿದ್ದು, 49 ಟ್ರಾನ್ಸ್ ಫಾರ್ಮರ್‍ಗಳಿಗೆ ಹಾನಿ ಸಂಭವಿಸಿದೆ. ಈ ಎಲ್ಲಾ ಹಂತಗಳಲ್ಲಿ ಚೆಸ್ಕಾಂ ಸಿಬ್ಬಂದಿಗಳು ಹಗಲಿರುಳೆನ್ನದೆ ನಡೆಸಿದ ದುರಸ್ತಿ ಕಾರ್ಯಗಳಿಂದ ವಿದ್ಯತ್ ಸಂಪರ್ಕ ಕಡಿತಗೊಂಡ ಬಹುತೇಕ ಭಾಗಗಳಲ್ಲಿ ವಿದ್ಯುತ್ ಸಂಪರ್ಕವನ್ನು ಮರು ಸ್ಥಾಪಿಸಲಾಗಿದೆ.
::: 42 ಸೇತುವೆಗಳಿಗೆ ಹಾನಿ :::
ಮುಂಗಾರಿನ ಅವಧಿಯಲ್ಲಿ ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸುವ 42 ಸೇತುವೆಗಳಿಗೆ ಹಾನಿ ಸಂಭವಿಸಿದೆ. ಜಿಲ್ಲಾ ವ್ಯಾಪ್ತಿಯ ಲೋಕೋಪಯೋಗಿ ಇಲಾಖೆಗೆ ಒಳಪಟ್ಟ 51.87 ಕಿ.ಮೀ. ರಸ್ತೆಗಳಿಗೆ ಹಾನಿ ಸಂಭವಿಸಿ ಸುಮಾರು 54.70 ಕೋಟಿ ನಷ್ಟ ಸಂಭವಿಸಿದ್ದರೆ, ಪಿಆರ್‍ಇಡಿಗೆ ಸಂಬಂಧಿಸಿದ 291.77 ಕಿ.ಮೀ. ರಸ್ತಗಳಿಗೆ ಹಾನಿಯಾಗಿದ್ದು 39.72 ಕೋಟಿಯಷ್ಟು ನಷ್ಟ ಉಂಟಾಗಿದೆ. ಪ್ರಸ್ತುತ ಮಳೆ ಕೊಂಚ ವಿರಾಮ ಪಡೆದುಕೊಂಡಿದ್ದರೂ ಆಗಸ್ಟ್ ತಿಂಗಳ ಮಳೆಯ ಬಗ್ಗೆ ಕೊಡಗಿನ ಜನರಲ್ಲಿ ಆತಂಕ ಮನೆ ಮಾಡಿದೆ.