ಮಡಿಕೇರಿ NEWS DESK ಆ.7 : ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ವೀರ ಯೋಧರ ಸ್ಮರಣೆ ಹಾಗೂ ಕಳೆದು ಹೋದ ಭಾರತದ ಭೂಭಾಗಗಳನ್ನು ಮತ್ತೆ ಪಡೆಯುವ ಸಂಕಲ್ಪದೊಂದಿಗೆ ವಿರಾಜಪೇಟೆಯಲ್ಲಿ ಹಿಂದು ಜಾಗರಣ ವೇದಿಕೆ ವತಿಯಿಂದ ಪಂಜಿನ ಮೆರವಣಿಗೆ ಮತ್ತು ವಾಹನ ಜಾಥಾ ನಡೆಯಿತು. ಸಾವಿರಾರು ಹಿಂದೂಪರ ಕಾರ್ಯಕರ್ತರು ಕೇಸರಿ ಧ್ವಜ, ಪಂಜು ಹಿಡಿದು ದೇಶಭಕ್ತಿಯ ಘೋಷಣೆಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಘೋಷಣೆಗಳನ್ನು ಕೂಗಿ ಅಖಂಡ ಭಾರತದ ಸಂಕಲ್ಪ ಮಾಡಿದರು.
ಸಭಾ ಕಾರ್ಯಕ್ರಮ :: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಕರ್ನಲ್ ಕೆ.ಸಿ. ಸುಬ್ಬಯ್ಯ ಭಾರತದ ಅಖಂಡತೆಗೆ ಧಕ್ಕೆ ಬಂದ ನೈಜ ಇತಿಹಾಸವನ್ನು ಭಾರತೀಯರು ತಿಳಿದುಕೊಳ್ಳಬೇಕೆಂದು ಕರೆ ನೀಡಿದರು. ಸಾಮಾಜಿಕ ಕಾರ್ಯಕರ್ತ ಚಿ.ನಾ. ಸೋಮೇಶ್ ಮಾತನಾಡಿ ಅಖಂಡ ಭಾರತ ಸಂಕಲ್ಪ ದಿನದ ಮಹತ್ವ ಹಾಗೂ ಸಮಾಜದಲ್ಲಿ ಇಂದಿನ ಯುವ ಫೀಳಿಗೆ ವಹಿಸಬೇಕಾದ ಪಾತ್ರದ ಬಗ್ಗೆ ವಿವರಿಸಿದರು. ವೇದಿಕೆಯ ಜಿಲ್ಲಾ ಸಂಯೋಜಕ ಕುಕ್ಕೇರ ಅಜಿತ್ ಮಾತನಾಡಿ ಭಾರತ ದೇಶದಲ್ಲಿ ನಡೆದ ಸ್ವಾತಂತ್ರ‍್ಯ ಹೋರಾಟಗಳು ಅಖಂಡ ಭಾರತಕ್ಕಾಗಿ ನಡೆದಿತ್ತು. ಆದರೆ ಭಾರತದ ಸ್ವಾತಂತ್ರ‍್ಯ ಹೋರಾಟಗಾರರ ಕನಸಾಗಿದ್ದ ಅಖಂಡ ಭಾರತವನ್ನು ತ್ರಿಖಂಡವಾಗಿ ತುಂಡರಿಸಲು ಕಾರಣವಾದ ಅಂದಿನ ನೈಜ ಘಟನೆಗಳನ್ನು ಯುವ ಸಮೂಹಕ್ಕೆ ನೆನಪಿಸುವುದು ನಮ್ಮ ಕರ್ತವ್ಯವಾಗಿದೆ. ಆದ್ದರಿಂದ ಪ್ರತಿವರ್ಷದಂತೆ ಕೊಡಗು ಜಿಲ್ಲೆಯ ಆರು ಕಡೆ ಪಂಜಿನ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಯೋಜಕ ಅಲುಮಾಡ ಶರತ್, ತಾಲ್ಲೂಕು ಸಂಯೋಜಕ ರವೀಂದ್ರ ಪೂಜಾರಿ ಹಾಗೂ ಹಿಂದು ಜಾಗರಣ ವೇದಿಕೆ, ಆರ್.ಎಸ್.ಎಸ್, ವಿ.ಹೆಚ್.ಪಿ. ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.











