ಮಡಿಕೇರಿ ಆ.12 NEWS DESK : ವಿವಿಧ ಧರ್ಮ, ಭಾಷೆ, ಸಂಸ್ಕೃತಿಗಳ ನಡುವೆಯೂ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವ ಮೂಲಕ ಭಾರತ ಇಡೀ ವಿಶ್ವದಲ್ಲೆ ಶ್ರೇಷ್ಠ ರಾಷ್ಟ್ರವಾಗಿ ಗುರುತಿಸಲ್ಪಟ್ಟಿದೆ. ಪರಸ್ಪರ ಸೌಹಾರ್ದತೆ ಸಹಬಾಳ್ವೆಯ ಚಿಂತನೆಗಳು ಮುಂದುವರೆಯಬೇಕೆನ್ನುವ ಮೂಲ ಚಿಂತನೆಗಳಡಿ ಸ್ವಾತಂತ್ರ್ಯೋತ್ಸವದ ಆ.15 ರಂದು ಸುಂಟಿಕೊಪ್ಪದಲ್ಲಿ ಸುನ್ನಿ ಯುವಜನ ಸಂಘ(ಎಸ್‍ವೈಎಸ್)ದಿಂದ “ರಾಷ್ಟ್ರ ರಕ್ಷಾ ಸಂಗಮ” ಕಾರ್ಯಕ್ರಮ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‍ವೈಎಸ್ ಸಂಘಟನಾ ಕಾರ್ಯದರ್ಶಿ ಹಮೀದ್ ಮುಸ್ಲಿಯಾರ್ “ಜಾತ್ಯತೀತತೆ ಭಾರತದ ಧರ್ಮ” ಎನ್ನುವ ಘೋಷವಾಕ್ಯದೊಮದಿಗೆ ಸ್ವಾತಂತ್ರ್ಯೋತ್ಸವದಂದು ಸಂಜೆ 4 ರಿಂದ 6.30 ಗಂಟೆಯವರೆಗೆ ಸುಂಟಿಕೊಪ್ಪದ ಎಸ್‍ಎಸ್ ಇಂಟರ್‍ನ್ಯಾಷನಲ್ ಸಭಾಂಗಣದಲ್ಲಿ ರಾಷ್ಟ್ರ ರಕ್ಷಾ ಸಂಗಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆಯೆಂದು ವಿವರಗಳನ್ನಿತ್ತರು. ಭಾರತದ ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನತೆಯನ್ನು, ಧಾರ್ಮಿಕ ಸ್ವಾತಂತ್ರ್ಯವನ್ನು, ಸಾಮಾಜಿಕ ನ್ಯಾಯವನ್ನು ಒದಗಿಸಿದೆ. ಈ ಹಿನ್ನೆಲೆ ಭಾರತೀಯರೆಲ್ಲರು ದೇಶವನ್ನು ಮತ್ತು ಸಂವಿಧಾನವನ್ನು ಸಂರಕ್ಷಿಸಿಕೊಂಡು ಮುನ್ನಡೆಯಬೇಕಾಗಿದೆ. ಎಲ್ಲರಲ್ಲೂ ಸೌಹಾರ್ದತೆ, ಸಹಬಾಳ್ವೆಯ ಚಿಂತನೆಗಳನ್ನು ಮೂಡಿಸುವ ಪ್ರಯತ್ನವಾಗಿ ರಾಷ್ಟ್ರ ರಕ್ಷಾ ಸಂಗಮ ಕಾರ್ಯಕ್ರಮದಲ್ಲಿ ಎಲ್ಲಾ ಧರ್ಮದ ಗುರುಗಳನ್ನು ಆಹ್ವಾನಿಸಲಾಗುತ್ತಿದೆಯೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‍ವೈಎಸ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ಬಶೀರ್ ಹಾಜಿ ವಹಿಸಲಿದ್ದಾರೆ. ಜಿಲ್ಲಾ ಉಪಖಾಝಿ ಎಂ.ಎ. ಅಬ್ದುಲ್ಲ್ ಫೈಝಿ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜ್, ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ, ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾಸ್ಟರ್, ಕಿರಿಕೊಡ್ಲಿ ಮಠದ ಶ್ರೀಸದಾಶಿವ ಸ್ವಾಮೀಜಿ, ಸುಂಟಿಕೊಪ್ಪ ಸಿಎಸ್‍ಐ ಇಮ್ಮಾನ್ಯುಯೆಲ್ ಚರ್ಚ್‍ನ ಫಾದರ್ ಮಧು ಕಿರಣ್, ಮುಖ್ಯ ಭಾಷಣಕಾರರಾಗಿ ರಾಜ್ಯ ಎಸ್‍ಕೆಎಸ್‍ಎಸ್‍ಎಫ್ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಝರಿ ಭಾಗವಹಿಸಲಿದ್ದಾರೆಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಎಸ್‍ವೈಎಸ್ ಜಿಲ್ಲಾ ಅಧ್ಯಕ್ಷ ಪಿ.ಎಂ. ಬಶೀರ್ ಹಾಜಿ, ಉಪಾಧ್ಯಕ್ಷ ರಫೀಕ್ ಹಾಜಿ ಮತ್ತು ಮುನಾಝಿರ್,ಜಂಟಿ ಕಾರ್ಯದರ್ಶಿ ಅಶ್ರಫ್ ಪೊನ್ನಂಪೇಟೆ ಹಾಗೂ ಉಪಾಧ್ಯಕ್ಷ ಮೊಯ್ದೀನ್ ಹಾಜಿ ತಿತಿಮತಿ ಉಪಸ್ಥಿತರಿದ್ದರು.