ಸುಂಟಿಕೊಪ್ಪ NEWS DESK ಆ.21 : ನಾರಾಯಣ ಗುರು ಬಿಲ್ಲವ ಸೇವಾ ಸಂಘ ಮತ್ತು ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘದ ವತಿಯಿಂದ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಾರಾಯಣ ಗುರುಗಳ 170ನೇ ಜಯಂತಿ ಹಾಗೂ ರಕ್ಷಾಬಂಧನ ಕಾರ್ಯಕ್ರಮ ನಡೆಯಿತು. ಕನ್ನಡ ಭಾರತಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸತೀಶ್ ಅವರು ಮಾತನಾಡಿ ಒಂದೇ ಕುಲ, ಮನುಜರೆಲ್ಲ ಒಂದೇ ಎಂದು ಪ್ರತಿಪಾದಿಸಿದ ನಾರಾಯಣ ಗುರುಗಳ ಜೀವನವನ್ನು ನಾವೆಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಜಾತಿಯತೆ ಪ್ರಬಲವಾಗಿದ್ದ ಕಾಲಘಟ್ಟದಲ್ಲಿ ದೇವಾಲಯಗಳನ್ನು ನಿರ್ಮಿಸಿ ಶೋಷಿತ ವರ್ಗಕ್ಕೆ ದೇವಾಲಯಗಳ ಪ್ರವೇಶಕ್ಕೆ ನಾರಾಯಣ ಗುರುಗಳು ಅವಕಾಶ ಮಾಡಿಕೊಟ್ಟಿರುವುದು ಸಾಧನೆಯ ಒಂದು ಪ್ರತೀಕವಾಗಿದೆ ಎಂದು ಬಣ್ಣಿಸಿದರು. ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘದ ಸದಸ್ಯರಾದ ವೀಣಾ ಮಾತನಾಡಿ, ಸಹೋದರಿಯ ರಕ್ಷಣೆಯನ್ನು ಪ್ರತಿಯೊಬ್ಬ ಸಹೋದರನು ಮಾಡಿದ್ದಲ್ಲಿ ರಾಮರಾಜ್ಯದ ಕಲ್ಪನೆ ನನಸಾಗಲಿದೆ ಎಂದರು. ಮಹಿಳೆಯರಿಗೆ ಸಮಸ್ಯೆಗಳು ಉಂಟಾದಲ್ಲಿ ಎಲ್ಲರೂ ತಮ್ಮ ಮನೆಯ ಸಮಸ್ಯೆ ಎಂದು ಭಾವಿಸಿ, ಬಗೆಹರಿಸಲು ಸಿದ್ದರಿರಬೇಕು. ಹಾಗಾದಾಗ ಮಾತ್ರ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಸಾಧ್ಯ. ಪ್ರತಿ ಮಹಿಳೆಯ ಬೆಂಬಲಕ್ಕೆ ಪುರುಷ ಸಮಾಜ ಇದೆ ಎನ್ನುವ ಅರ್ಥವನ್ನು ರಕ್ಷಾಬಂಧನ ನೀಡುತ್ತದೆ ಎಂದರು. ಕಾರ್ಯಕ್ರಮಕ್ಕೂ ಮೊದಲು ನಾರಾಯಣ ಗುರುಗಳ ಭಾವಚಿತ್ರಕ್ಕೆ ನಾರಾಯಣಗುರು ಬಿಲ್ಲವ ಸೇವಾ ಸಂಘದ ಸಲಹಾ ಸಮಿತಿಯ ಸದಸ್ಯರಾದ ಬಿ.ಬಿ.ಮೋನಪ್ಪ ಪೂಜಾರಿ ಅವರು ಪೂಜೆ ಸಲ್ಲಿಸಿದರು. ನಂತರ ನೆರೆದಿದ್ದ ಬಿಲ್ಲವ ಸಮಾಜದ ಸದಸ್ಯರು ಪುಷ್ಪಾರ್ಚನೆಯನ್ನು ಮಾಡುವ ಮೂಲಕ ನಾರಾಯಣ ಗುರುಗಳಿಗೆ ಗೌರವ ಸಲ್ಲಿಸಿದರು. ಸದಸ್ಯರುಗಳು ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಆಚರಿಸಿದರು. ಸಂಘದ ಅಧ್ಯಕ್ಷ ಬಿ.ಎಂ.ಮಣಿ ಮುಖೇಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ದೇಯಿ ಬೈದೇತಿ ಮಹಿಳಾ ಸಂಘದ ಅಧ್ಯಕ್ಷರಾದ ಮಧು ನಾಗಪ್ಪ, ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಕೋಟ್ಯಾನ್, ಸಲಹಾ ಸಮಿತಿ ಸದಸ್ಯ ಡಾ.ಯಶೋಧರ ಪೂಜಾರಿ, ಕೆ.ಪಿ.ಜಗನ್ನಾಥ್, ಬಿ.ಬಿ.ಜಿನ್ನಪ್ಪ ಪೂಜಾರಿ, ರಮೇಶ್ ಪೂಜಾರಿ, ರಮೇಶ್ ಕೊಡಗರಹಳ್ಳಿ, ಅಂಜಲಿ ಯಶೋಧರ ಪೂಜಾರಿ, ಮಹಿಮಾ ಸತ್ಯ, ಪೂರ್ಣಿಮಾ ರವಿ, ಬೇಬಿ, ಮೀನಾಕ್ಷಿ, ಅಶೋಕ್, ಮಿಲನ್, ಹರೀಶ್ ಸೋಮವಾರಪೇಟೆ ಸೇರಿದಂತೆ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.