ಮಡಿಕೇರಿ NEWS DESK ಆ.22 : ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ರಾಜಕೀಯ ಜೀವನದ ಬಗ್ಗೆ “ಯೋಗ ಮತ್ತು ಯೋಗ್ಯತೆ” ಎನ್ನುವ ಪದಗಳನ್ನು ಬಳಕೆ ಮಾಡಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆಯ ಶಾಸಕ ಎ.ಎಸ್.ಪೊನ್ನಣ್ಣ ಅವರು ನೀಡಿರುವ ಹೇಳಿಕೆ ಖಂಡನೀಯವೆಂದು ಯುವ ಜಾತ್ಯತೀತ ಜನತಾದಳದ ಕೊಡಗು ಜಿಲ್ಲಾಧ್ಯಕ್ಷ ಸಿ.ಎಲ್.ವಿಶ್ವ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ “ಯೋಗ ಮತ್ತು ಯೋಗ್ಯತೆ” ಎರಡೂ ಇದ್ದ ಕಾರಣ ಎರಡು ಬಾರಿ ಈ ರಾಜ್ಯದ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದಾರೆ. ಪ್ರಸ್ತುತ ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕಾ ಮಂತ್ರಿಯಾಗಿ ರಾಷ್ಟçದ ಗಮನ ಸೆಳೆದಿದ್ದಾರೆ. ಮಾನವೀಯ ಮೌಲ್ಯಗಳನ್ನು ಹೊಂದಿರುವ ಜನಪರ ಕಾಳಜಿಯ ರಾಜಕಾರಣಿ ಎಂದೇ ಖ್ಯಾತಿ ಗಳಿಸಿರುವ ಕುಮಾರಸ್ವಾಮಿ ಅವರನ್ನು ಅವಹೇಳನ ಮಾಡುವ ನೈತಿಕತೆ ಯಾರಿಗೂ ಇಲ್ಲವೆಂದು ತಿಳಿಸಿದ್ದಾರೆ. ಕಳೆದ 35 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಜನರ ಹಿತವನ್ನಷ್ಟೇ ಕೇಂದ್ರೀಕರಿಸಿ ರಾಜಕಾರಣ ಮಾಡಿದ ಕುಮಾರಸ್ವಾಮಿ ಅವರು ಇಂದಿಗೂ ಜನಪ್ರಿಯ ನಾಯಕರೆನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೇ ಕಾರಣಕ್ಕೆ ಕಳೆದ ವಿಧಾನಸಭಾ ಚುನಾವಣೆ ಮತ್ತು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ. ಇವರ “ಯೋಗ ಮತ್ತು ಯೋಗ್ಯತೆ”ಯ ಬಗ್ಗೆ ಮಾತನಾಡುವವರು ವಿರಾಜಪೇಟೆ ಕ್ಷೇತ್ರದಲ್ಲಿ ಎಷ್ಟು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ, ವಿಧಾನಸಭಾ ಚುನಾವಣೆಯ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಗಳಿಸಿಕೊಟ್ಟ ಮತಗಳೆಷ್ಟು, ಸಹಕಾರ ಸಂಘಗಳ ಚುನಾವಣೆಯಲ್ಲಿ ಇವರ ಬೆಂಬಲಿಗರು ಎಷ್ಟು ಮಂದಿ ಗೆಲುವು ಸಾಧಿಸಿದ್ದಾರೆ ಎನ್ನುವುದನ್ನು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಆಡಳಿತ ಬದಲಾವಣೆ ಬೇಕೆನ್ನುವ ಕಾರಣಕ್ಕೆ ಜನ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ನ್ನು ಗೆಲ್ಲಿಸಿದ್ದಾರೆಯೇ ಹೊರತು ಯಾವುದೇ “ಯೋಗ ಅಥವಾ ಯೋಗ್ಯತೆ”ಯನ್ನು ನೋಡಿ ಅಲ್ಲವೆಂದು ಲೇವಡಿ ಮಾಡಿರುವ ವಿಶ್ವ, ಇದೀಗ ಜನ ಅಭಿವೃದ್ಧಿ ಶೂನ್ಯ ಆಡಳಿತದಿಂದ ಪಶ್ಚಾತ್ತಾಪ ಪಡುವಂತ್ತಾಗಿದೆ ಎಂದು ಟೀಕಿಸಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಮಾತಿಗೆ ಮನ್ನಣೆ ನೀಡಿ ಕೊಡಗು ಮತ್ತು ಮೈಸೂರು ಬಿಜೆಪಿ ಅಭ್ಯರ್ಥಿಯನ್ನು ಮತದಾರರು ಅತ್ಯಧಿಕ ಮತಗಳಿಂದ ಗೆಲ್ಲಿಸಿದ್ದಾರೆ. ಇದು ಕುಮಾರಸ್ವಾಮಿ ಅವರ ರಾಜಕೀಯ ಯೋಗ್ಯತೆಗೆ ಸಾಕ್ಷಿಯಾಗಿದೆ. ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲೂ ಕೊಡಗಿನ ಜನ “ಯೋಗ ಮತ್ತು ಯೋಗ್ಯತೆ”ಯನ್ನು ಸ್ಪಷ್ಟಪಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.