ಮಡಿಕೇರಿ NEWS DESK ಆ.24 : ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದಿಂದ ಬೇಸತ್ತ ಗ್ರಾಮಸ್ಥರು ತಮ್ಮ ಸ್ವಂತ ಖರ್ಚಿನಿಂದ ತಾವೇ ಸೇತುವೆ ನಿರ್ಮಿಸಿಕೊಂಡ ಅಪರೂಪದ ಬೆಳವಣಿಗೆ ಹಾರಂಗಿ ಸಮೀಪದ ಮಾವಿನಹಳ್ಳ ಗ್ರಾಮದಲ್ಲಿ ನಡೆದಿದೆ. ಈ ಗ್ರಾಮದಲ್ಲಿದ್ದ ಕಿರು ಸೇತುವೆ ಮೂರು ವರ್ಷಗಳ ಹಿಂದೆ ಸುರಿದ ಅಧಿಕ ಮಳೆಯಿಂದಾಗಿ ನೀರಿನ ರಭಸಕ್ಕೆ ಕುಸಿದು ಹೋಗಿತ್ತು. ಸಂಪರ್ಕ ಕಡಿತಗೊಂಡ ಕಾರಣ ಮಾವಿನಹಳ್ಳ, ಯಡವನಾಡು, ಐಗೂರು, ಹಾರಂಗಿ ಸೇರಿದಂತೆ ಐದು ಗ್ರಾಮಗಳ ಗ್ರಾಮಸ್ಥರು, ವಿದಾರ್ಥಿಗಳು ಹಾಗೂ ಉದ್ಯೋಗಿಗಳು ಮುಖ್ಯ ರಸ್ತೆಯನ್ನು ಸೇರಲು ಐದು ಕಿ.ಮೀ ದೂರ ಬಳಸಿ ಬರಬೇಕಾಗಿತ್ತು. ಸೇತುವೆಯ ಕೊರತೆ ಮತ್ತು ಸಂಚಾರದ ಸಂಕಷ್ಟದ ಕುರಿತು ಹಿರಿಯ ಅಧಿಕಾರಿಗಳ ಗಮನ ಸೆಳೆದು ಮೂರು ವರ್ಷ ಕಳೆದರೂ ಯಾವುದೇ ಸ್ಪಂದನೆ ದೊರೆತ್ತಿರಲಿಲ್ಲ. ಎಂಜಿನಿಯರ್ ಗಳು ಸ್ಥಳ ಪರಿಶೀಲನೆ ಮಾತ್ರ ಮಾಡಿದರು, ಆದರೆ ಇಲ್ಲಿಯವರೆಗೆ ಯಾರೂ ಸೇತುವೆ ನಿರ್ಮಿಸಿಕೊಡುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಿಲ್ಲ. ಇದರಿಂದ ಅಸಮಾಧಾನಗೊಂಡ ಗ್ರಾಮಸ್ಥರು ತಾವೇ ಸೇತುವೆ ನಿರ್ಮಿಸಿಕೊಳ್ಳಲು ಮುಂದಾದರು. ಗ್ರಾಮಸ್ಥರೆಲ್ಲರು ಒಗ್ಗೂಡಿ ಹಣ ಸಂಗ್ರಹಿಸಿ ಅಡಿಕೆ ಮರದ ದಿಮ್ಮಿಗಳನ್ನು ತಂದು ಕಿರು ಸೇತುವೆ ನಿರ್ಮಿಸಿದರು. ಇದೀಗ ತಾವೇ ನಿರ್ಮಿಸಿದ ಸೇತುವೆಯಲ್ಲಿ ಗ್ರಾಮಸ್ಥರು ಸಂಚಾರ ಆರಂಭಿಸಿದ್ದಾರೆ. ಮಾವಿನಹಳ್ಳ ಸುತ್ತಮುತ್ತಲ ಗ್ರಾಮಗಳ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಬೇಕು ಮತ್ತು ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.











