ಕುಶಾಲನಗರ ಸೆ.6 NEWS DESK : ಕೊಡಗು ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಛೇರಿ, ಮಡಿಕೇರಿ, ಭಾರತ್ ಸ್ಕೌಟ್ಸ್, ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ ಯ ವತಿಯಿಂದ ಕುಶಾಲನಗರ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಯ ಕಾವೇರಿ ಇಕೋ ಕ್ಲಬ್ ಹಾಗೂ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಇಕೋ ಕ್ಲಬ್ ಹಾಗೂ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಎನ್.ಎಸ್.ಎಸ್.ಘಟಕದ ಸಂಯುಕ್ತಾಶ್ರಯದಲ್ಲಿ ಗೋ ಗ್ರೀನ್ ಅಭಿಯಾನದಡಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಬಳಕೆಗೆ ಕುರಿತು ಜನಜಾಗೃತಿ ನಡೆಯಿತು. ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಯ ಮಹತ್ವ ಕುರಿತು ಮಾಹಿತಿ ನೀಡಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಹಾಗೂ ಪರಿಸರ ಕಾರ್ಯಕ್ರಮಗಳ ಸಂಘಟಕ ಟಿ.ಜಿ.ಪ್ರೇಮಕುಮಾರ್ , ಈ ಗಣೇಶೋತ್ಸವದಲ್ಲಿ ಬಣ್ಣದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ನಾವು ಪರಿಸರ ಮಾಲಿನ್ಯಕ್ಕೆ ನೇರವಾಗಿ ಕಾರಣರಾಗುತ್ತಿದ್ದೇವೆ. ಆಧುನಿಕತೆಯ ಭರಾಟೆ ನಡುವೆ ಮಾಲಿನ್ಯಕಾರಿ
ಪಿಓಪಿ ಹಾಗೂ ರಾಸಾಯನಿಕ ಬಣ್ದ ಗಣೇಶ ಮೂರ್ತಿಗಳನ್ನು ತ್ಯಜಿಸಿ ನಾವು ಪರಿಸರ ಸಂರಕ್ಷಣೆಗೆ ಪೂರಕವಾದ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸಿ ಪರಿಸರ ಸಂರಕ್ಷಣೆಗೆ ಸಂಕಲ್ಪ ತೊಡಬೇಕಿದೆ ಎಂದರು. ಆರೋಗ್ಯ ಮತ್ತು ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಕೊಡಗಿನಲ್ಲಿ ‘ನಮ್ಮ ನಡೆ ಹಸಿರೆಡೆಗೆ’-‘ಗ್ರೋ ಗ್ರೀನ್’ ಅಭಿಯಾನದಡಿ ಗಣೇಶ ಚತುರ್ಥಿಗೆ ಪೂರಕವಾಗಿ ಕೊಡಗು ಜಿಲ್ಲೆಯ ಶಾಲಾ-ಕಾಲೇಜಿನ ಇಕೋ ಕ್ಲಬ್, ಎನ್.ಎಸ್.ಎಸ್.ಘಟಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕೊಡಗು ಜಿಲ್ಲಾ ಘಟಕ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಶಾಲಾಭಿವೃದ್ಧಿ ಸಮಿತಿಗಳ ವತಿಯಿಂದ ರಾಸಾಯನಿಕ ಬಣ್ಣ ಮುಕ್ತ ಗಣೇಶ ಮೂರ್ತಿ ತಯಾರಿಕೆ ಹಾಗೂ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಕುರಿತು ವಿದ್ಯಾರ್ಥಿಗಳು ಹಾಗೂ ಜನಸಮುದಾಯದಲ್ಲಿ ಪರಿಸರ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಪರಿಸರ ಸ್ನೇಹಿ ಗಣೇಶ ಮೂರ್ತಿ : ಪ್ರತಿ ವರ್ಷ ಗೌರಿ-ಗಣೇಶ ಹಬ್ಬದ ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಮಾಲಿನ್ಯಕಾರಿ ಪಿಓಪಿ ಹಾಗೂ ರಾಸಾಯನಿಕ ಬಣ್ಣದ ವಿಗ್ರಹಗಳನ್ನು ನಿಷೇಧಿಸಿರುವುದರಿಂದ ಪ್ರತಿಯೊಬ್ಬರೂ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ಬಳಕೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಪ್ರೇಮಕುಮಾರ್ ಮನವಿ ಮಾಡಿದರು. ಗಣೇಶ ಮೂರ್ತಿಗಳನ್ನು ನದಿ, ಕೆರೆ, ಬಾವಿ ಮತ್ತಿತರ ಜಲಮೂಲಗಳು ಸೇರಿದಂತೆ ನೀರಿನಲ್ಲಿ ವಿಸರ್ಜನೆ ಮಾಡುವುದರಿಂದ ಜಲಚರಗಳಿಗಲ್ಲದೆ, ಪರಿಸರಕ್ಕೂ ಹಾನಿಯುಂಟಾಗುತ್ತದೆ. ಇದನ್ನು ತಡೆಯುವ ಸಲುವಾಗಿ ನಾವು ಪರಿಸರ ಸ್ನೇಹಿ ರಾಸಾಯನಿಕ ಬಣ್ಣ ಮುಕ್ತ ಗಣೇಶ ಮೂರ್ತಿಗಳನ್ನು ತಯಾರಿಸಿಕೊಳ್ಳಲು ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದರು. ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಜೇಡಿಮಣ್ಣಿನಿಂದ ಹಾಗೂ ರೋಗ ನಿರೋಧಕ ಶಕ್ತಿ ಇರುವ ಅರಿಶಿಣದಿಂದ ಪುಟ್ಟ ಗಣೇಶನನ್ನು ಮನೆಯಲ್ಲೇ ತಯಾರಿಸಿ, ಪೂಜಿಸಿದ ನಂತರ ಮನೆಯ ಅಂಗಳದಲ್ಲಿ ವಿಸರ್ಜಿಸಿ ಆ ನೀರನ್ನು ಗಿಡಗಳಿಗೆ ಹಾಕಬೇಕಿದೆ ಎಂದರು. ರಾಜ್ಯ ಸರ್ಕಾರವು ಈಗಾಗಲೇ ರಾಸಾಯನಿಕ ಬಣ್ಣ ಹಾಗೂ ಪಿ.ಓ.ಪಿ. ಗಣೇಶ ಮೂರ್ತಿಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಪ್ರೇಮಕುಮಾರ್ ತಿಳಿಸಿದರು. ಈ ದಿಸೆಯಲ್ಲಿ ಜಿಲ್ಲೆಯಲ್ಲಿ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಲಿರುವ ನಾಗರಿಕರು ಸೀಸ, ಪಾದರಸ ಲೇಪಿತ ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್(ಪಿ.ಓ.ಪಿ.) ಗಣಪತಿ ಮೂರ್ತಿಗಳನ್ನು ಬಳಸದೇ, ನೈಸರ್ಗಿಕವಾಗಿ ಮಣ್ಣಿನಿಂದ ತಯಾರಿಸಿದ ‘ಪರಿಸರ ಸ್ನೇಹಿ’ ಗಣೇಶ ವಿಗ್ರಹಗಳನ್ನು ಖರೀದಿಸಬೇಕು ಎಂದು ಮನವಿ ಮಾಡಲಾಗುತ್ತಿದೆ ಎಂದು ಹೇಳಿದರು.
‘ಪರಿಸರ ಸ್ನೇಹಿ ಮಣ್ಣಿನ ಗಣೇಶʼ ಜಾಗೃತಿ ಆಂದೋಲನ : ಕೊಡಗಿನಲ್ಲಿ ‘ಪರಿಸರ ಸ್ನೇಹಿ ಮಣ್ಣಿನ ಗಣೇಶʼ ಮೂರ್ತಿಗಳನ್ನು ಸ್ಥಾಪಿಸೋಣ-ಜಲಮೂಲಗಳನ್ನು ಉಳಿಸೋಣ’ ಎಂಬ ಘೋಷ ವಾಕ್ಯದಡಿ ಮಾಲಿನ್ಯರಹಿತ ಗಣೇಶ ಚತುರ್ಥಿ ಆಚರಣೆ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಯ ಕುರಿತು ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿ ಬಿ.ಎನ್.ಪುಷ್ಪ, ಯಾರೂ ಕೂಡ ಮಾಲಿನ್ಯಕಾರಿ ಪಿ.ಓ.ಪಿ.ಹಾಗೂ ರಾಸಾಯನಿಕ ಬಣ್ಣದ ಗಣೇಶಮೂರ್ತಿಗಳನ್ನು ಬಳಸದೇ ಅವುಗಳನ್ನು ತ್ಯಜಿಸಿ, ಪರಿಸರ ಸ್ನೇಹಿ ನೈಸರ್ಗಿಕ ಜೇಡಿಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಬಳಕೆ ಮಾಡುವ ಮೂಲಕ ಜಲಮಾಲಿನ್ಯ ತಡೆಗಟ್ಟುವ ಮೂಲಕ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು. ಈ ಬಗ್ಗೆ ಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿ ಸಮುದಾಯದಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಕೊಡಗು ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ, ಇಕೋ ಕ್ಲಬ್ ಮೂಲಕ ಪರಿಸರ ಸಂಘಟಕ ಟಿ.ಜಿ.ಪ್ರೇಮಕುಮಾರ್ ಅವರು ಕಳೆದ ಒಂದು ದಶಕದಿಂದ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಬಗ್ಗೆ ಶಾಲಾ ವಿದ್ಯಾರ್ಥಿಗಳು ಹಾಗೂ ಸಮುದಾಯದಲ್ಲಿ ಜನಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯವಾದುದು. ಇತ್ತೀಚಿನ ವರ್ಷಗಳಲ್ಲಿ ಈ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿದೆ ಎಂದು ಹೇಳಿದರು. ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮೈಸೂರು ವಿಭಾಗೀಯ ಉಪಾಧ್ಯಕ್ಷ ಪಿ.ನವೀನ್ ಕುಮಾರ್ ಮಾತನಾಡಿ, ಎಲ್ಲರೂ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸುವ ಮೂಲಕ ಜಲಮಾಲಿನ್ಯ ತಡೆದು ಪರಿಸರ ಸಂರಕ್ಷಣೆಗೆ ಪಣ ತೊಡಬೇಕು ಎಂದರು. ಪರಿಸರ ಸ್ನೇಹಿ ಹಬ್ಬಗಳ ಆಚರಣೆಯ ಕುರಿತು ಮಾತನಾಡಿದ ಶಾಲೆಯ ಇಕೋ ಕ್ಲಬ್‌ನ ಉಸ್ತುವಾರಿ ಶಿಕ್ಷಕ ಎಸ್.ಎನ್.ವೇಣುಗೋಪಾಲ್, ಗಣೇಶ ಮೂರ್ತಿಗಳನ್ನು ಯಾವುದೇ ಕಾರಣಕ್ಕೂ ಕೆರೆ, ನದಿ ಮತ್ತಿತರ ಜಲಮೂಲಗಳಲ್ಲಿ ವಿಸರ್ಜಿಸದೆ ನಿಗದಿಪಡಿಸಿರುವ ಕೃತಕ ಹೊಂಡಗಳಲ್ಲಿಯೇ ವಿಸರ್ಜಿಸಬೇಕಿದೆ ಎಂದರು. ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಟಿ.ಇ.ವಿಶ್ವನಾಥ್, ಮೌಲಾನ ಅಜಾದ್ ಶಾಲೆಯ ಪ್ರಾಂಶುಪಾಲರಾದ ಶ್ವೇತ, ಪಿ.ಎಂ.ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಗೈಡ್ ಕ್ಯಾಪ್ಟನ್ ಭವ್ಯ
ಕೆ.ಟಿ.ರಶ್ಮಿ, ಬಿ.ಕೆ.ಅಕ್ಷತಾ, ಎಚ್.ಪಿ.ಅನಿತಾ, ವಿದ್ಯಾರ್ಥಿಗಳು ಇತರರು ಇದ್ದರು. ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಕುರಿತು ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ವಿದ್ಯಾರ್ಥಿಗಳಿಗೆ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿ , ನಾವೆಲ್ಲರೂ ಪಿಓಪಿ ಮತ್ತು ರಾಸಾಯನಿಕ ಬಣ್ಣ ಮುಕ್ತ ಗಣೇಶೋತ್ಸವವನ್ನು ಆಚರಿಸಬೇಕು ಎಂದು ಮನವಿ ಮಾಡಿದರು. ಇದೇ ವಿದ್ಯಾರ್ಥಿಗಳು ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಕುರಿತು ಪರಿಸರ ಘೋಷಣೆಗಳನ್ನು ಕೂಗಿದರು.