ಮಡಿಕೇರಿ ಸೆ.10 NEWS DESK : ಚೆಸ್ಕಾಂ ಮಡಿಕೇರಿ ಉಪವಿಭಾಗ ಮತ್ತು ಮಡಿಕೇರಿ ವಿಭಾಗದ ವತಿಯಿಂದ ವಿದ್ಯುತ್ ಗುತ್ತಿಗೆದಾರರ ಸಹಕಾರದೊಂದಿಗೆ 55ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಮಂಗಳವಾರ ನಗರದ ಗಾಂಧಿ ಮೈದಾನದಲ್ಲಿ ಕ್ರೀಡಾಕೂಟ ನಡೆಯಿತು.
ಚೆಸ್ಕಾಂ ಎಇಇ ವಿನಯ್ ಕುಮಾರ್ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿ ಕ್ರೀಡಾ ಚಟುವಟಿಕೆಗಳಲ್ಲಿ ಇಲಾಖಾ ಸಿಬ್ಬಂದಿಗಳು ಪಾಲ್ಗೊಳ್ಳುವಂತೆ ಕೋರಿ ಶುಭ ಹಾರೈಸಿದರು. ಚೆಸ್ಕಾಂ ಸಹಾಯಕ ಇಂಜಿನಿಯರ್ ಸಂಪತ್ ಮಾತನಾಡಿ, ಈ ಹಿಂದಿನಿಂದಲು ಗಣೇಶೋತ್ಸವವನ್ನು ಇಲಾಖಾ ಸಿಬ್ಬಂದಿಗಳು ನಡೆಸಿಕೊಂಡು ಬರುತ್ತಿದ್ದು, ಅದನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ. ಉತ್ಸವದ ಹಿನ್ನೆಲೆಯಲ್ಲಿ ಇಲಾಖಾ ಸಿಬ್ಬಂದಿಗಳಿಗೆ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಮುಂಗಾರಿನ ಅವಧಿಯಲ್ಲಿ ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸಲು ಅವಿಶ್ರಾಂತವಾಗಿ ಶ್ರಮಿಸಿದ್ದ ಸಿಬ್ಬಂದಿಗಳ ಮನರಂಜನೆಗಾಗಿ ಮತ್ತು ನಿತ್ಯದ ಒತ್ತಡಗಳಿಂದ ಹೊರ ಬರಲು ಕ್ರೀಡಾ ಚಟುವಟಿಕೆ ಸಹಕಾರಿಯಾಗಿದೆ ಎಂದರು. ಕ್ರೀಡಾಕೂಟದಲ್ಲಿ ಚೆಸ್ಕಾಂ ಮಡಿಕೇರಿ ಉಪ ವಿಭಾಗದ ಸುಮಾರು 150 ಸಿಬ್ಬಂದಿಗಳು ಮತ್ತು ಮಡಿಕೇರಿ ವಿಭಾಗದ 50 ಕ್ಕೂ ಹೆಚ್ಚಿನ ಸಿಬ್ಬಂದಿಗಳು ಪಾಲ್ಗೊಳ್ಳುತ್ತಿರುವುದಾಗಿ ಮಾಹಿತಿ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಚೆಸ್ಕಾಂ ಅಧಿಕಾರಿ ಶಿವಾನಂದ ಶೆಟ್ಟಿ, ಕೊಡಗು ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಮಮತಾ ರಾಜು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ವಾಲಿಬಾಲ್, ಭಾರದ ಗುಂಡು ಎಸೆತ ಸೇರಿದಂತೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ಚೆಸ್ಕಾಂ ಸಿಬ್ಬಂದಿಗಳ ಪಾಲ್ಗೊಳ್ಳುವಿಕೆಯ ಮೂಲಕ ಉತ್ಸಾಹದಿಂದ ನಡೆಯಿತು.










