ಮಡಿಕೇರಿ ಅ.4 NEWS DESK : ಕೊಡಗಿನ ಕ್ರೀಡೆಯೆಂದರೆ ಹಾಕಿ ಆಟ ಅದರಲ್ಲೂ ಹಾಕಿ ಆಡುತ್ತಲೇ ಜೀವ ತ್ಯಜಿಸಿದ ಆಟಗಾರನೇ ಚೌರೀರ ಹರಿ ಅಚ್ಚಯ್ಯ. ಚೌರೀರ ಅಪ್ಪಯ್ಯ ಹಾಗೂ ದೇಚವ್ವ (ತಾಮನೆ ಕಾಡುಮಂಡ) ದಂಪತಿಯರ ಪುತ್ರನಾಗಿ ಹರಿ ಅವರು ಜನವರಿ 30, 1953 ರಂದು ಮಡಿಕೇರಿಯಲ್ಲಿ ಜನಿಸಿದರು.
ಶಿಕ್ಷಣ :: ಹರಿ ಅವರು ಪ್ರಾಥಮಿಕ ಶಿಕ್ಷಣವನ್ನು ಹಾಗು ಪ್ರೌಢ ಶಿಕ್ಷಣವನ್ನು ಮಡಿಕೇರಿಯಲ್ಲಿ ಹಾಗೂ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಪಡೆದರು.
ಬಾಲ್ಯದಿಂದಲೇ ಹಾಕಿಯ ಓಡನಾಟ :: ಬಾಲ್ಯದಿಂದಲೇ ಹಾಕಿ ಆಟದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದ ಹರಿಪಾಲ್ ಅವರು ತಮಗಿಂತ ಹಿರಿಯ ಆಟಗಾರರ ಜೊತೆ ಹಾಕಿ ಆಡುತ್ತಿದ್ದರು. ತಮ್ಮ 10- 12 ನೇ ವಯಸ್ಸಿನಲ್ಲಿ ಗೋಲ್ ಕೀಪರ್ ಆಗಿ ಆಡುತ್ತಿದ್ದರು. ನಂತರ ಕಾಲೇಜು ದಿನಗಳಲ್ಲಿ ಫುಲ್ ಬ್ಯಾಕ್ ಆಗಿ ಆಡಲು ಪ್ರಾರಂಭಿಸಿದರು.
ಸ್ನೇಹಿತರ ಅನಿಸಿಕೆ :: ಕೋಟೆರ ಮುದ್ದಯ್ಯ ಹಾಗೂ ಹರಿಪಾಲ್ ಅವರಿಬ್ಬರು ಕಾಲೇಜು ಸಹಪಾಠಿಗಳಾಗಿ, ಮೈಸೂರು ವಿಶ್ವವಿದ್ಯಾನಿಲಯದ ಪರ 1970-71 ರಲ್ಲಿ ಪ್ರತಿನಿಧಿಸಿದ್ದರು. ಮುದ್ದಯ್ಯನವರ ಅನಿಸಿಕೆಯಂತೆ ಹರಿಪಾಲ್ ಅವರು ಅತ್ಯುತ್ತಮ ಫುಲ್ ಬ್ಯಾಕ್ ಆಟಗಾರರಾಗಿದ್ದರು. ಕಾಲೇಜು ದಿನಗಳಲ್ಲಿ ಉತ್ತಮ ಹಾಕಿ ತಂಡವನ್ನು ಕಟ್ಟಿದ್ದರು. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಿಂದ ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ 7 ಆಟಗಾರರಲ್ಲಿ ಹರಿ ಕೂಡ ಒಬ್ಬರಾಗಿದ್ದರು. ಎಲ್ಲಾ ಆಟಗಾರರು ಹಾಗೂ ಸಹಪಾಠಿಗಳು ಉತ್ತಮ ಬಾಂಧವ್ಯವನ್ನು ಹೊಂದಿದ್ದರು ಎಂದು ತಮ್ಮ ಅನಿಸಿಕೆ ಹಂಚಿಕೊಂಡರು. ಇವರಂತೆಯೇ ಕೊಟ್ರಂಗಡ ರವಿ ಹಾಗೂ ಕೇಲೆಟೀರ ಪೌಲ್ ಕೂಡ ಅದ್ಭುತ ಆಟಗಾರರು ಎಂಬುದನ್ನು ಇಲ್ಲಿ ನೆನೆದರು.
ವಾಂಡರರ್ಸ್ ಕ್ಲಬ್ ಮಡಿಕೇರಿ :: ಹಾಕಿಗೆ ಹೆಸರಾದ ವಾಂಡರರ್ಸ್ ಕ್ಲಬ್ ನಲ್ಲಿ ಶಂಕರ್ ಸ್ವಾಮಿ ಅವರ ಶಿಷ್ಯರಾಗಿ ಅವರಿಂದ ಹಾಕಿಯಲ್ಲಿ ಎಲ್ಲ ರೀತಿಯ ಕೌಶಲ್ಯಗಳನ್ನು ಕರಗತಮಾಡಿಕೊಂಡು ಅತ್ಯುತ್ತಮ ಫುಲ್ ಬ್ಯಾಕ್ ಆಟಗಾರನಾಗಿ ಹೊರ ಹೊಮ್ಮಿದರು. ಇವರ ಅದ್ಭುತ ಆಟವನ್ನು ನೋಡಿ ಬಿ.ಇ.ಎಂ.ಎಲ್ ಬೆಂಗಳೂರು, ಇವರನ್ನು ತಮ್ಮ ತಂಡಕ್ಕೆ ಬರಮಾಡಿಕೊಂಡರು.
ಬಿ.ಇ.ಎಂ.ಎಲ್ ಬೆಂಗಳೂರು :: 1970 ರಲ್ಲಿ ಬಿ.ಇ.ಎಂ.ಎಲ್ ತಂಡದ ನಾಯಕನಾಗಿ ಕೋರೆರ ಕಪ್ ಅನ್ನು ಸಿಲೋನ್ ನಲ್ಲಿ ಆಡಿದರು. ಕರ್ನಾಟಕ ರಾಜ್ಯ ಹಾಕಿ ತಂಡವನ್ನು ಪ್ರತಿನಿಧಿಸಿದರು. ಕೈಗಾರಿಕಾ ಎಂಜಿನಿಯರಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನಂತರ ಉಳುವವನಿಗೆ ಭೂಮಿ ಎಂಬ ದೇವರಾಜು ಅರಸು ಅವರ ಸರ್ಕಾರದ ನಿಯಮದಿಂದ ಬಿ.ಇ.ಎಂ.ಎಲ್ ತೊರೆದು ಹೊದ್ದೂರಿಗೆ ಹಿಂದಿರುಗಿದರು. ಮರಳಿ ಬಂದ ನಂತರ ವಾಂಡರರ್ಸ್ ಹಾಕಿ ಸಂಸ್ಥೆಗೆ ತರಬೇತಿದಾರರಾಗಿ ಸೇವೆ ಸಲ್ಲಿಸಲಾರಂಭಿಸಿದ್ದರು. ಅಲ್ಲಿನ ಆಟಗಾರರಿಗೆ ತರಬೇತಿ ನೀಡುತ್ತಾ, ಹಲವು ಯುವ ಪ್ರತಿಭೆಗಳನ್ನು ಸೇರಿಸಿ ಅತ್ಯುತ್ತಮ ಆಟಗಾರರಾಗಲು ಅವರನ್ನು ಉರಿದುಂಬಿಸಿ, ಸಹಕರಿಸಿ ತರಬೇತಿಯನ್ನು ನೀಡಿ ಹಾಕಿಯ ಮೇಲೆ ತಮಗಿದ್ದ ಒಲವನ್ನು ತೋರಿಸುತ್ತಾರೆ. ಇವರ ಜೊತೆಗೆ ಐ.ಒ.ಬಿ ಯ ಆಟಗಾರ ಬಲ್ಯಾಟಂಡ ಪಾರ್ಥ ಚಂಗಪ್ಪ ಅವರು ಕೂಡ ಸಾಥ್ ನೀಡುತ್ತಾರೆ.
ಹಾಕಿ ಶಿಬಿರ :: ಹಲವಾರು ವರ್ಷಗಳ ಕಾಲ ಹಾಕಿ ತರಬೇತಿ ಹಾಗೂ ಬೇಸಿಗೆ ಶಿಬಿರವನ್ನು ನಾಪೋಕ್ಲಿನಲ್ಲಿ ನಡೆಸಲು ಸಹಕರಿಸಿದ್ದರು.
ಸಾಮಾಜಿಕ ಹಿತಾಸಕ್ತಿ ತಮ್ಮ ಊರಿನ ಬಗ್ಗೆ ಬಹಳಷ್ಟು ಹಿತಾಸಕ್ತಿ ಹೊಂದಿದ ಹರಿಪಾಲ್ ಅವರು 10 ವರ್ಷಗಳ ಕಾಲ ಹೊದ್ದೂರಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದರು.
2012 ಐಚೆಟ್ಟೀರ ಕೌಟುಂಬಿಕ ಹಾಕಿ ಪಂದ್ಯಾವಳಿ :: 2012 ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಐಚೆಟ್ಟೀರ ಕುಟುಂಬದವರು ಅಮ್ಮತ್ತಿಯಲ್ಲಿ ಆಯೋಜಿಸಿದರು. ಪಂದ್ಯಾವಳಿಯ ಉದ್ಘಾಟನೆಯಂದು ಅಂದಿನ ಭಾರತ ತಂಡದ ತರಬೇತಿದಾರ ಮೈಕಲ್ ನಾಬ್ಸ್, ಪಾಂಡಂಡ ಕುಟ್ಟಪ್ಪ ಹಾಗೂ ಬಹಳಷ್ಟು ಅಂತಾರಾಷ್ಟ್ರೀಯ ಆಟಗಾರರು ಅಂದು ಆಗಮಿಸಿದ್ದರು. ಅಂದು ವೀಕ್ಷಕ ವಿವರಣೆಗಾರನಾಗಿದ್ದ ನನ್ನ ಪಕ್ಕದಲ್ಲಿ ಕೂತಿದ್ದ ಚೌರೀರ ಹರಿಪಾಲ್ ಅವರು ಒಂದೆರಡು ಸಲಹೆಗಳನ್ನು ನನಗೆ ನೀಡಿದರು. ಬಹಳಷ್ಟು ಶಿಸ್ತು ಬದ್ಧ ಪಂದ್ಯಾವಳಿಯಾಗಿತ್ತು. ಪ್ರದರ್ಶನ ಪಂದ್ಯಾವಳಿಯು ಭಾರತದ ಒಲಂಪಿಕ್ಸ್ ಹಾಕಿ ತಂಡ 2012 ( ರೋಡ್ ಟು ಲಂಡನ್) ಎಂಬ ನಾಮಕರಣದೊಂದಿಗೆ ಪಂದ್ಯಾವಳಿ ಆಡಿದರು. ಕೂರ್ಗ್ ಇಂಟರ್ನ್ಯಾಷನಲ್ ಟೀಮ್ ಮತ್ತು ರೋಡ್ ಟು ಲಂಡನ್ ತಂಡಗಳ ನಡುವೆ ಪ್ರದರ್ಶನ ಪಂದ್ಯಾವಳಿ ನಡೆಯಿತು.
ಬ್ಲೂ ಅಸ್ಟ್ರೋ ಟರ್ಫ್ :: 2012 ಲಂಡನ್ ಒಲಂಪಿಕ್ಸ್ ನಡೆಯುವಾಗ ಇಂಗ್ಲೆಂಡ್ ನ ಬಾವುಟದ ಬಣ್ಣ ಗುಲಾಬಿ ಮತ್ತು ನೀಲಿ ಆದುದರಿಂದ, ಲಂಡನ್ ಒಲಂಪಿಕ್ಸ್ ನ ಎಲ್ಲಾ ಕ್ರೀಡಾಕೂಟಗಳಲ್ಲಿ ಮೈದಾನವು ನೀಲಿ ಮತ್ತು ಗುಲಾಬಿ ಬಣ್ಣ ಕ್ಕೆ ಬದಲಾಯಿಸಬೇಕೆಂಬ ನಿಯಮ ಬಂತು. ಆದರೆ ಹಸಿರು ಆಸ್ಟ್ರೋ ಟರ್ಫ್ ಎಲ್ಲಾ ಆಟಗಾರರಿಗೆ ಮೆಚ್ಚುಗೆಯಾಗಿತ್ತು. ಏಕೆಂದರೆ ಹುಲ್ಲು ಕೂಡ ಹಸಿರು ಹಾಗೂ ನೀಲಿ ಆಸ್ಟ್ರೋ ಟರ್ಫ್ ನಲ್ಲಿ ಆಡುವಾಗ ಅದರ ಪ್ರತಿಬಿಂಬ ಕಣ್ಣಿಗೆ ಹೊಡೆಯುತ್ತಿದ್ದರಿಂದ ಆಡಲು ಆಗುತ್ತಿರಲಿಲ್ಲ ಎಂದು ಹಲವು ಆಟಗಾರರು ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಇದನ್ನು ಪಾಂಡಂಡ ಕುಟ್ಟಪ್ಪ, ಮೈಕಲ್ ನಾಬ್ಸ್, ಚೌರೀರ ಹರಿಪಾಲ್ ಹಾಗೂ ಇತರ ಅಂತಾರಾಷ್ಟ್ರೀಯ ಆಟಗಾರರು ಚರ್ಚೆ ಹಾಗೂ ಸಂವಾದ ನಡೆಸಿದರು.
ಕೊನೆಯ ಪಂದ್ಯಾವಳಿ :: ಏಪ್ರಿಲ್ 29, 2012ರ ಐಚೆಟ್ಟೀರ ಹಾಕಿ ಪಂದ್ಯಾವಳಿಯಲ್ಲಿ, ಎಂದಿನಂತೆ ತಮ್ಮ ಕುಟುಂಬದ ಪರ ಹಾಕಿ ಆಡಲು ಲವಲವಿಕೆಯಿಂದ ಹರಿಪಾಲ್ ಅವರು ಅಮ್ಮತ್ತಿಗೆ ಧಾವಿಸಿದರು. ಪಂದ್ಯಾಟವು ಮಾಚಂಗಡ ತಂಡದ ನಡುವೆ ಇತ್ತು. ಎಲ್ಲ ಆಟಗಾರರನ್ನು ಹುರಿದುಂಬಿಸಿ ಅವರು ಕೂಡ ಮೈದಾನಕ್ಕೆ ಇಳಿದರು. ಆದರೆ ಜವರಾಯ ಅಮ್ಮತ್ತಿಯ ಮೈದಾನದ ಸುತ್ತ ಸುತ್ತುತ್ತಿದ್ದಾನೆ ಎಂಬ ಸುಳಿವು ಕೂಡ ಸಿಗಲಿಲ್ಲ. ಅಂದು ಪಂದ್ಯಾಟಕ್ಕೆ ಮೊದಲೇ ಕಾರ್ಮೋಡ ಕವಿದಿತ್ತು. ಇನ್ನು ಕೇವಲ 30 ನಿಮಿಷಗಳಲ್ಲಿ ಅವರ ಪ್ರಾಣ ಪಕ್ಷಿ ಹಾರಿಹೋಗುತ್ತದೆ ಎಂಬ ಸುಳಿವು ಕೂಡ ಅವರಿಗೆ ಇರಲಿಲ್ಲ. ಪಂದ್ಯಾಟ ಮುಗಿದ ನಂತರ ಸ್ವಲ್ಪ ಎದೆ ನೋವು ಕಾಣಿಸಿಕೊಂಡು ಅವರನ್ನು ಅಮ್ಮತ್ತಿಯ ಆರ್.ಐ.ಎಚ್.ಪಿ ಆಸ್ಪತ್ರೆಗೆ ಕರೆದಯ್ಯಲಾಯಿತು. ಆದರೆ ಅಷ್ಟರಲ್ಲಿ ಗಾಢ ನಿದ್ರೆಗೆ ಜಾರಿದರು. ಇಂತಹ ದುರಾದೃಷ್ಟ ಆಟಗಾರರು ಕೊಡಗಿನಲ್ಲಿ ಮತ್ತೊಬ್ಬರಿಲ್ಲ. ಅಂದು ಪಂದ್ಯಾಟದಲ್ಲಿ ಅವರ ಕುಟುಂಬ 2-0 ಗೋಲಿನಿಂದ ಗೆದ್ದಿದ್ದರೂ ಅಂದು ಅವರ ಕುಟುಂಬ ಪಂದ್ಯಾವಳಿಯಿಂದ ಹಿಂದೆ ಉಳಿಯಲು ನಿರ್ಧರಿಸಿದ್ದರು. ಆದರೆ ಇದರಿಂದ ಹರಿಪಾಲ್ ಅವರ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಎಂದು ಕೆಲವು ದಿನಗಳ ನಂತರ ಪಂದ್ಯಾಟ ಮುಂದುವರಿಸಿದರು. ಹರಿಪಾಲ್ ಅವರು ಹಾಕಿ ಕೂರ್ಗ್ ನ ಸ್ಥಾಪಕ ಸದಸ್ಯ ಹಾಗೂ ಸಂಘಟನೆಗಾರ ಇವರ ಪತ್ನಿ ಸುನಿ( ತಾಮನೆ ಅಜ್ಜನಿಕಂಡ), ಮಗಳು ನಿತ್ಯ ವೃತ್ತಿಯಲ್ಲಿ ವೈದ್ಯರು, ಕ್ರಿಟಿಕಲ್ ಕೇರ್ ಮೆಡಿಸನ್ ನ ಮುಖ್ಯಸ್ಥರಾಗಿ ಮೆಡಿಕವರ್ ಆಸ್ಪತ್ರೆ, ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಗ ನಿರನ್ ಮಂದಣ್ಣ ವೃತ್ತಿಯಲ್ಲಿ ಇಂಜಿನಿಯರ್, ತಮ್ಮ ತಂದೆಯ ನಿಧನದ ನಂತರ ಇಂದು ಕಾಫಿ ತೋಟವನ್ನು ನೋಡಿಕೊಳ್ಳುತ್ತಿದ್ದಾರೆ. ಹರಿಪಾಲ್ ಅವರಂತಹ ಹಾಕಿ ಪ್ರೇಮಿಯನ್ನು ನಾವು ಮತ್ತೊಮ್ಮೆ ನೋಡಲು ಸಾಧ್ಯವಿಲ್ಲ. ಇವರಿಗೆ ನನ್ನದೊಂದು ಕೋಟಿ ಸಲಾಂ.
ಕ್ರೀಡಾ ವಿಶ್ಲೇಷಣೆ :: ಚೆಪ್ಪುಡೀರ ಕಾರ್ಯಪ್ಪ