ಮಡಿಕೇರಿ ಅ.25 NEWS DESK : ಕೇಲೋ ಇಂಡಿಯಾದಿಂದ ಮಾನ್ಯತೆ ಪಡೆದ ರಾಷ್ಟ್ರೀಯ ಮಟ್ಟದ ವಾಕೋ ಇಂಡಿಯಾ ಕಿಕ್ ಬಾಕ್ಸಿಂಗ್ ಫೆಡರೇಷನ್ ಸಂಸ್ಥೆಯ ಸಹಕಾರದೊಂದಿಗೆ, ಕರ್ನಾಟಕ ಕಿಕ್ ಬಾಕ್ಸಿಂಗ್ ಲೀಗ್ ವತಿಯಿಂದ ಮಡಿಕೇರಿಯಲ್ಲಿ ನ.5 ರಿಂದ 14ರವರೆಗೆ ಅಂತರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್ ತರಬೇತಿ ಶಿಬಿರ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕರ್ನಾಟಕ ಕಿಕ್ ಬಾಕ್ಸಿಂಗ್ ಲೀಗ್ ಪ್ರಧಾನ ಕಾರ್ಯದರ್ಶಿ ರಾಜಶೇಖರ್, ನಗರದ ಜ.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಒಳಾಂಗಣದಲ್ಲಿ ಕಿಕ್ ಬಾಕ್ಸಿಂಗ್ ತರಬೇತಿ ಕಿಂಬರ್ಲಿ ಕೂರ್ಗ್ ನೆರವಿನೊಂದಿಗೆ ನಡೆಯಲಿದೆ ಎಂದರು. ತರಬೇತಿ ಶಿಬಿರದಲ್ಲಿ ಜಿಲ್ಲೆ ಹಾಗೂ ರಾಷ್ಟ್ರದ ವಿವಿಧೆಡೆಗಳ ಆಸಕ್ತ 200 ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ತರಬೇತಿಯಲ್ಲಿ ರಾಷ್ಟ್ರೀಯ ಮಟ್ಟದ 13 ಹಾಗೂ 3 ಮಂದಿ ಅಂತರಾಷ್ಟ್ರೀಯ ತರಬೇತುದಾರರು ಪಾಲ್ಗೊಳ್ಳಲಿದ್ದಾರೆ. ತರಬೇತಿಯಲ್ಲಿ ಪಾಲ್ಗೊಳ್ಳುವವರಿಗೆ 14 ಸಾವಿರ ಪ್ರವೇಶ ಶುಲ್ಕ ನಿಗಧಿಯಾಗಿದ್ದು, ಸ್ಥಳೀಯರಿಗೆ ರಿಯಾಯಿತಿ ಇರಲಿದೆ ಎಂದು ತಿಳಿಸಿದರು. ಕಿಕ್ ಬಾಕ್ಸಿಂಗ್ ತರಬೇತಿಯಲ್ಲಿ ಪಾಲ್ಗೊಳ್ಳಲು ಯಾವುದೇ ವಯೋಮಿತಿಯನ್ನು ಕಡ್ಡಾಯಗೊಳಿಸಿಲ್ಲ. ಆದರೆ, ಕಿಕ್ ಬಾಕ್ಸಿಂಗ್ ತರಬೇತುದಾರರಾಗಲು ಇಚ್ಛಿಸುವವರ ವಯೋಮಿತಿ 18 ವರ್ಷ ಮೇಲ್ಪಟ್ಟಿರಬೇಕೆಂದು ಸ್ಪಷ್ಟಪಡಿಸಿದರು.
ಉದ್ಯೋಗಾವಕಾಶ :: ದೈಹಿಕ ಸಾಸ್ಥ್ಯ, ಜಿಮ್, ಯೋಗ ತರಬೇತಿಗಳನ್ನು ಒದಗಿಸುವ ‘ಕಲ್ಟ್ ಫಿಟ್’ ಸಂಸ್ಥೆ ಶಿಬಿರದಲ್ಲಿ ಪಾಲ್ಗೊಳ್ಳುವವರಲ್ಲಿ ಅಂದಾಜು ನೂರು ಮಂದಿಗೆ ರಾಷ್ಟ್ರದ ವಿವಿಧೆಡೆಗಳಲ್ಲಿರುವ ತಮ್ಮ ಕೇಂದ್ರಗಳಲ್ಲಿನ ತರಬೇತುದಾರರ ಹುದ್ದೆಯನ್ನು ಒದಗಿಸಲಿದೆ.
ಕಿಕ್ ಬಾಕ್ಸಿಂಗ್ ಛಾಂಪಿಯನ್ ಶಿಪ್ :: ತರಬೇತಿಯೊಂದಿಗೆ ನ.9 ರಿಮದ 13 ರವರೆಗೆ ನಗರದ ಗಾಂಧಿ ಮೈದಾನದಲ್ಲಿ ‘ ರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್ ಛಾಂಪಿಯನ್ ಶಿಪ್’ ನಡೆಯಲಿದೆ. ಇದರಲ್ಲಿ ರಾಷ್ಟ್ರದ ವಿವಿಧೆಡೆಗಳ 70 ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ಇದು ವರ್ಷದ ಕೊನೆಯ ಹಾಗೂ ಮುಂಬರುವ ರಿಯಾದ್ ಏಷ್ಯನ್ ಗೇಮ್ಸ್ ಪೂರ್ವ ತಯಾರಿಯ ಛಾಂಪಿಯನ್ ಶಿಪ್ ಆಗಿದೆಯೆಂದು ರಾಜಶೇಖರ್ ವಿವರಿಸಿದರು. ತರಬೇತಿ ಮತ್ತು ಛಾಂಪಿಯನ್‍ಶಿಪ್ 6ನೇ ಏಷಿಯನ್ ಇಂಡೋರ್ ಮತ್ತು ಮಾರ್ಷಲ್ ಆಟ್ರ್ಸ್ ಗೇಮ್ಸ್ ಮುಂತಾದ ಪ್ರಮುಖ ಅಂತರರಾಷ್ಟ್ರೀಯ ಪಂದ್ಯಾವಳಿಗಳ ಆಯ್ಕೆಗಾಗಿ ಪ್ರಮುಖ ವೇದಿಕೆಯಾಗಿಯೂ ಇದು ಕಾರ್ಯನಿರ್ವಹಿಸುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಕಿಕ್ ಬಾಕ್ಸಿಂಗ್ ಲೀಗ್ ಅಧ್ಯಕ್ಷ ಮಹದೇವೇಗೌಡರು ಹಾಗೂ ಕಿಂಬರ್ಲಿ ಕೂರ್ಗ್‍ನ ಪ್ರಮುಖ ಕೆ.ಜಿ.ಮದನ್ ಉಪಸ್ಥಿತರಿದ್ದರು.