ಮಡಿಕೇರಿ ನ.4 NEWS DESK : ಕೊಡಗಿನ ಸೈನಿಕ ಶಾಲೆಯ 12ನೇ ತರಗತಿಯ 60 ವಿದ್ಯಾರ್ಥಿಗಳಲ್ಲಿ 19 ವಿದ್ಯಾರ್ಥಿಗಳು 2024ನೇ ಸಾಲಿನ ಕೇಂದ್ರ ಲೋಕ ಸೇವಾ ಆಯೋಗದ(ಯು.ಪಿ.ಎಸ್.ಸಿ) ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್.ಡಿ.ಎ) ಪರೀಕ್ಷೆಯಲ್ಲಿ (ಎನ್ ಡಿ ಎ 154ನೇ ಮತ್ತು ಐ ಎನ್ ಎ116ನೇ ಕೋರ್ಸ್) ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಈ ಕುರಿತು ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ಮಾತನಾಡಿ, ಈ ಸಾಧನೆಯು ನಮ್ಮ ವಿದ್ಯಾರ್ಥಿಗಳು ತೋರಿದ ಕಠಿಣ ಪರಿಶ್ರಮ ಮತ್ತು ನಿರಂತರ ತರಬೇತಿಯ ಪ್ರತೀಕವಾಗಿದೆ. ಶಾಲೆಯ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪ್ರಸ್ತುತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಶೇಕಡವಾರು 31.67ರಷ್ಟು ಸಾಧನೆ ಮಾಡಿರುವುದು ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದರು. ಶಾಲೆಯಲ್ಲಿ ಒದಗಿಸಲಾದ ಧನಾತ್ಮಕ ಮತ್ತು ಪ್ರೇರಣಾದಾಯಕವಾದ ಶೈಕ್ಷಣಿಕ ವಾತಾವರಣದ ಪ್ರತಿಬಿಂಬಿವಾಗಿದೆ. ಶಾಲೆಯು ನಿರಂತರವಾಗಿ ಶೈಕ್ಷಣಿಕ ಉತ್ಕೃಷ್ಟತೆಗೆ ಆದ್ಯತೆ ನೀಡುವುದರೊಂದಿಗೆ, ಭಾರತೀಯ ಸಶಸ್ತ್ರ ಪಡೆಗಳಿಗೆ ಶಾಲಾ ವಿದ್ಯಾರ್ಥಿಗಳನ್ನು ಅಧಿಕಾರಿಗಳಾಗಿ ಸೇರ್ಪಡೆಗೊಳಿಸುವ ಸಿದ್ಧತೆಯನ್ನು ನಿರಂತರವಾಗಿ ನಡೆಸುತ್ತಿದೆ. ಪ್ರಸ್ತುತ ವರ್ಷ ಎನ್ ಡಿ ಎ ಪರೀಕ್ಷೆಗೆ ಸಂಬಂಧಿಸಿದಂತೆ ರಚನಾತ್ಮಕವಾಗಿ ಎನ್ ಡಿ ಎ ಪರೀಕ್ಷಾ ತರಬೇತಿ ಕಾರ್ಯಕ್ರಮವನ್ನು ಐದು ಹಂತಗಳಲ್ಲಿ ಅಳವಡಿಸಿ ಯಶಸ್ಸನ್ನು ಸಾಧಿಸಲಾಗಿದೆ. ಇದರೊಂದಿಗೆ ಶಾಲೆಯು ಯು.ಪಿ.ಎಸ್.ಸಿ, ಎನ್.ಡಿ.ಎ/ ಐ.ಎನ್.ಎ ಪಠ್ಯಕ್ರಮವನ್ನು ಸಮಗ್ರವಾಗಿ ಹೊಂದಿದ್ದು, ವಿದ್ಯಾರ್ಥಿಗಳ ಸಿದ್ಧತೆಗೆ ಅಗತ್ಯವಿರುವ ಎಲ್ಲಾ ಅಗತ್ಯ ಸಂಪನ್ಮೂಲಗಳನ್ನು ಹೊಂದಿರುವುದರೊಂದಿಗೆ ಶಾಲೆಯ ಕೇಂದ್ರೀಕೃತ ಹಾಗೂ ಸಂಘಟಿತ ಪ್ರಯತ್ನವು ಯಶಸ್ಸಿನ ಹೊಸ ಶಿಖರವನ್ನೇರಲು ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೊಡಗು ಸೈನಿಕ ಶಾಲೆ ಭಾರತೀಯ ಸಶಸ್ತ್ರ ಪಡೆಗಳ ವಿವಿಧ ತರಬೇತಿ ಅಕಾಡೆಮಿಗಳಿಗೆ ಉತ್ತಮ ಗುಣಮಟ್ಟದ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಲು ಬದ್ಧವಾಗಿದೆ ಎಂದರು.