ಮಡಿಕೇರಿ NEWS DESK ಡಿ.1 : ಮಾನಸಿಕವಾಗಿ ಹೆಚ್ಚುತ್ತಿರುವ ಒತ್ತಡದಿಂದಾಗಿ ಹಲವರಲ್ಲಿ ಕಂಡು ಬರುತ್ತಿರುವ ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಯು ಮಾನಸಿಕ ಚಿಕಿತ್ಸೆ ಸಂಬಂಧಿತ ಯೋಜನೆ ರೂಪಿಸಿದೆ ಎಂದು ರೋಟರಿ ಜಿಲ್ಲೆ 3181 ನ ಗವರ್ನರ್ ವಿಕ್ರಂದತ್ತ ಹೇಳಿದ್ದಾರೆ. ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಮಡಿಕೇರಿ ವುಡ್ಸ್ ವತಿಯಿಂದ ಆಯೋಜಿತ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಕ್ರಂದತ್ತ, ರೋಟರಿಯು ಈ ಸಾಲಿನಲ್ಲಿ ಅನೇಕ ವಿಶೇಷ ಯೋಜನೆಗಳನ್ನು ಜಾರಿಗೊಳಿಸಿದೆ, ಮಹಿಳೆಯರನ್ನು ಕಾಡುತ್ತಿರುವ ಗರ್ಭಕಂಠ ಕ್ಯಾನ್ಸರ್ ಗೆ ರಿಯಾಯಿತಿ ದರದಲ್ಲಿ ಲಸಿಕೆ ನೀಡಲಾಗುತ್ತಿದೆ, ಮಾನಸಿಕ ಒತ್ತಡದಿಂದಾಗಿ ಕಂಡುಬರುತ್ತಿರುವ ಮಾನಸಿಕ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೂ ಶಿಬಿರಗಳ ಮೂಲಕ ತಜ್ಞರಿಂದ ಚಿಕಿತ್ಸೆ ನೀಡಲಾಗುತ್ತಿದೆ, ಸಂಧ್ಯಾಸುರಕ್ಷಾ ಯೋಜನೆ ಮೂಲಕ ಹಿರಿಯ ನಾಗರಿಕರಿಗೆ ಅಗತ್ಯ ಸೌಲಭ್ಯವನ್ನೂ ಕಲ್ಪಿಸಲಾಗುತ್ತಿದೆ ಎಂದರು. ಹೆಚ್ಚುತ್ತಿರುವ ಶಿಶುಮರಣ ತಪ್ಪಿಸುವ ನಿಟ್ಟಿನಲ್ಲಿ ಮಂಗಳೂರು, ಮೈಸೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ರೋಟರಿ ಸಹಭಾಗಿತ್ವದಲ್ಲಿ ಶಿಶುಸಂರಕ್ಷಣಾ ಯೋಜನೆಗೆ ಆಸ್ಪತ್ರೆಗಳು ಕಾರ್ಯಕ್ರಮ ರೂಪಿಸುತ್ತಿದೆ ಎಂದು ಮಾಹಿತಿ ನೀಡಿದ ವಿಕ್ರಂದತ್ತ, ಸಾಮಾಜಿಕ ಭದ್ದತೆಯೊಂದಿಗೆ ಸಮಾಜಕ್ಕೆ ಅಗತ್ಯವಾದ ಯೋಜನೆಗಳು ರೋಟರಿ ಮೂಲಕ ಜಾರಿಯಾಗುತ್ತಿದೆ ಎಂದು ಹೇಳಿದರು. ರೋಟರಿಯು ಅನೇಕ ಶ್ರೇಷ್ಟ ಸದಸ್ಯರನ್ನು ಹೊಂದುವ ಮೂಲಕ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಾ ಬಂದಿದೆ. ಜೆಆರ್ ಡಿ ಟಾಟಾ, ರತನ್ ಟಾಟಾ ಸೇರಿದಂತೆ ದೇಶದ ಅನೇಕ ಗಣ್ಯರೂ ರೋಟರಿ ಸದಸ್ಯರಾಗುವ ಮೂಲಕ ರೋಟರಿಯ ಸಾಮಾಜಿಕ ಸೇವಾ ಕಾರ್ಯಯೋಜನೆಗಳಿಗೆ ಶಕ್ತಿ ತುಂಬಿದ್ದರು ಎಂದೂ ವಿಕ್ರಂದತ್ತ ಸ್ಮರಿಸಿಕೊಂಡರು. ರೋಟರಿ ವುಡ್ಸ್ ಅಧ್ಯಕ್ಷ ಹರೀಶ್ ಕಿಗ್ಗಾಲು ಮಾತನಾಡಿ, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ರೋಟರಿ ವುಡ್ಸ್ ವತಿಯಿಂದ 1,25 ಲಕ್ಷ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಕೈಗೊಳ್ಳಲಾಗುತ್ತದೆ ಎಂದರು. ರೋಟರಿ ವುಡ್ಸ್ ವತಿಯಿಂದ ಆರೋಗ್ಯ ಕ್ಷೇತ್ರದಲ್ಲಿನ ಸೇವೆಗಾಗಿ ಮಡಿಕೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಆರೋಗ್ಯ ಶುಶ್ರೂಶಕಿಯರಾದ ಲೋವಿಸ್ ಸಬಾಸ್ಟಿನ್, ಶಾರದಾ, ಅವರಿಗೆ ಆರೋಗ್ಯ ರತ್ನ, ಯುವ ಪ್ರತಿಭೆ ಪ್ರಗತಿ ಕೇಡನ ಅವರಿಗೆ ಕಲಾಕುಸುಮ, ಮತ್ತು ಮೂರ್ನಾಡು ಗ್ರಾ ಪಂ ನ ಪೌರಸಿಬ್ಬಂದಿ ದೊರೆ ಅವರಿಗೆ ಪೌರಸೇವಾರತ್ನ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ರೋಟರಿ ಸಹಾಯಕ ಗವರ್ನರ್ ದೇವಣಿರ ಕಿರಣ್ ರೋಟರಿ ವುಡ್ಸ್ ನ ವಾರ್ತಾ ಸಂಚಿಕೆ ಬಿಡುಗಡೆಗೊಳಿಸಿದರು, ರೋಟರಿ ವಲಯ ಸೇನಾನಿ ಅನಿತಾ ಪೂವಯ್ಯ, ರೋಟರಿ ವುಡ್ಸ್ ಕಾರ್ಯದರ್ಶಿ ಕಿರಣ್ ಕುಂದರ್ ವೇದಿಕೆಯಲ್ಲಿದ್ದರು, ವಸಂತ್ ಕುಮಾರ್, ಪ್ರಮಿಳಾ ಶೆಟ್ಟಿ, ದಿವಾಕರ್ ಕೆ.ಜೆ, ಎನ್.ಸಿ.ನವೀನ್, ಗೀತಾಸೂರ್ಯ, ವಿಶಾಲಾಕ್ಷಿ, ನಿರ್ವಹಿಸಿದರು. ಇದೇ ಸಂದರ್ಭ ಚೇಂದ್ರಿಮಾಂಡ ವಿನು, ಸೋಮಶೇಖರ್ ಮತ್ತು ಲೋವಿಸ್ ಸಬಾಸ್ಟಿನ್, ಅವರನ್ನು ರೋಟರಿ ವುಡ್ಸ್ ಸದಸ್ಯರನ್ನಾಗಿ ಸೇರ್ಪಡೆ ಮಾಡಲಾಯಿತು, ರೋಟರಿ ಜಿಲ್ಲೆ 3181 ನ ನಿಯೋಜಿತ ಗವರ್ನರ್ ಸತೀಶ್ ಬೊಳಾರ್, ಮಾಜಿ ಗವನ9ರ್ ಗಳಾದ ಮಾತಂಡ ಸುರೇಶ್ ಚಂಗಪ್ಪ, ರವೀಂದ್ರ ಭಟ್, ಹಿರಿಯ ಸದಸ್ಯರಾದ ಡಾ ಪಾಟ್ಕರ್, ಜಯಲಕ್ಷ್ಮಿ ಪಾಟ್ಕರ್, ಮೇಜರ್ ರಾಘವ, ಸೇರಿದಂತೆ ಜಿಲ್ಲೆಯ ವಿವಿಧ ರೋಟರಿ ಸಂಸ್ಥೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.












