ಮಡಿಕೇರಿ NEWS DESK ಡಿ.10 : ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಗೌರವ ತೋರಿದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಕೊಡಗು ಸರ್ವ ಜನಾಂಗಗಳ ಒಕ್ಕೂಟ ಡಿ.12 ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಕೊಡಗು ಬಂದ್ ಗೆ ಕರೆ ನೀಡಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕ ಚೊಟ್ಟೆಕ್ ಮಾಡ ರಾಜೀವ್ ಬೋಪಯ್ಯ ಶಾಂತಿ ಮತ್ತು ಸಹಬಾಳ್ವೆಗೆ ಹೆಸರಾಗಿದ್ದ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಜಾತೀಯ ಮತ್ತು ಮತೀಯ ಸಂಘರ್ಷ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಂಡು ಬರುತ್ತಿದೆ. ಇಂದು ನಾವು ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದಿನ ಪೀಳಿಗೆ ಕೊಡಗಿನಲ್ಲಿ ಕೇವಲ ದ್ವೇಷ ಮತ್ತು ಅಸೂಯೆಯ ವಾತಾವರಣದಲ್ಲಿ ಬದುಕಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗುವ ಸಂಭವವಿದೆ. ಈ ರೀತಿಯ ಪರಿಸ್ಥಿತಿ ಪುನರಾವರ್ತನೆಯಾಗಬಾರದು ಎನ್ನುವ ಉದ್ದೇಶದಿಂದ ಎಲ್ಲಾ ಜಾತಿ ಜನಾಂಗದವರನ್ನು ಒಗ್ಗೂಡಿಸಿ ಕೊಡಗು ಸರ್ವ ಜನಾಂಗಗಳ ಒಕ್ಕೂಟವನ್ನು ರಚಿಸಿದ್ದು, ಇದರ ಮೂಲಕ ಒಗ್ಗಟ್ಟಿನ ಹೋರಾಟವನ್ನು ರೂಪಿಸಲಾಗುವುದು ಎಂದರು. ಈ ಸಂಘಟನೆಯ ಮೊದಲ ಕಾರ್ಯಕ್ರಮವಾಗಿ ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸಿರುವ ವ್ಯಕ್ತಿಯನ್ನು ಕನಿಷ್ಠ ಆರು ತಿಂಗಳ ಕಾಲ ಕೊಡಗು ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಡಿ.12 ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಕೊಡಗು ಬಂದ್ ಗೆ ಕರೆ ನೀಡುತ್ತಿರುವುದಾಗಿ ತಿಳಿಸಿದರು. ಕೊಡಗು ಜಿಲ್ಲಾ ಬಂದ್ ಆಚರಿಸುವ ಮೂಲಕ ಜಿಲ್ಲೆಯ ಶಾಂತಿಗೆ ಧಕ್ಕೆ ತರುವ ಪ್ರಯತ್ನಗಳು ಮುಂದೆಂದೂ ಆಗಬಾರದು ಎನ್ನುವ ಸಂದೇಶವನ್ನು ನೀಡುತ್ತಿದ್ದೇವೆ. ಜಿಲ್ಲೆಯ ವಿವಿಧ ಜಾತಿಯ ಸಂಘಟನೆಗಳು, ಸಾರ್ವಜನಿಕ ಸಂಘ ಸಂಸ್ಥೆಗಳು, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್, ಜಿಲ್ಲಾ ಆಟೋ ಚಾಲಕರ ಸಂಘ, ಮಾಜಿ ಸೈನಿಕರ ಸಂಘ, ವಿವಿಧ ಧಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಕೊಡಗು ಬಂದ್ ಸಂದರ್ಭ ಕೊಡಗು ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವಂತೆ ಸರಕಾರಕ್ಕೆ ಈ ಮೂಲಕ ಮನವಿ ಮಾಡುತ್ತಿದ್ದೇವೆ. ಕೊಡಗು ಜಿಲ್ಲಾ ಬಸ್ ಮಾಲೀಕರ ಸಂಘ, ಆಟೋ ಚಾಲಕರು ಮತ್ತು ಮಾಲೀಕರ ಸಂಘ, ಲಾರಿ ಮಾಲೀಕರು ಮತ್ತು ಚಾಲಕರ ಸಂಘ, ಕಾರು ಮಾಲೀಕರು ಮತ್ತು ಚಾಲಕರ ಸಂಘ ಸೇರಿದಂತೆ ಎಲ್ಲಾ ಸಾರ್ವಜನಿಕ ಸಂಪರ್ಕ ವಾಹನಗಳ ಸಂಘಟನೆಗಳನ್ನು, ಜಿಲ್ಲೆಯ ಎಲ್ಲಾ ಅಂಗಡಿ ವಹಿವಾಟು ಮಾಲೀಕರನ್ನು, ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರನ್ನು, ಶಿಕ್ಷಣ ಸಂಸ್ಥೆಗಳ ಪ್ರಮುಖರನ್ನು, ಎಲ್ಲಾ ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತರನ್ನು, ಹಾಗೂ ಸಾರ್ವಜನಿಕರನ್ನು ಸಾಂಕೇತಿಕ ಬಂದ್ ಗೆ ಬೆಂಬಲ ನೀಡುವಂತೆ ಕೋರುವುದಾಗಿ ರಾಜೀವ್ ಬೋಪಯ್ಯ ಹೇಳಿದರು. ಈ ಬಂದ್ ವೀರ ಸೇನಾನಿಗಳಿಗೆ ಗೌರವ ಸೂಚಕವೂ ಆಗಿದ್ದು, ಸರಕಾರದ ಗಮನ ಸೆಳೆಯುವ ಪ್ರಯತ್ನವೂ ಆಗಿದೆ. ವೀರ ಸೇನಾನಿಗಳನ್ನು ಅವಮಾನ ಮಾಡಿದ ವ್ಯಕ್ತಿಯ ವಿರುದ್ಧ ಒಕ್ಕೂಟ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸಲಿದೆ ಎಂದು ಸ್ಪಷ್ಟಪಡಿಸಿದರು.
::: ಸೌಹಾರ್ದತೆ ಸ್ಥಾಪನೆಯಾಗಬೇಕು :::
ಕೊಡಗಿನ ಎಲ್ಲಾ ಸಂಘಟನೆಗಳನ್ನು ಒಗ್ಗೂಡಿಸಿ ಸಾಮಾಜಿಕ ಶಾಂತಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಒಕ್ಕೂಟ ಕಾರ್ಯನಿರ್ವಹಿಸಲಿದೆ. ಜಾತಿ ಮತ್ತು ಮತಗಳ ನಡುವಿನ ವೈಮನಸ್ಯ ದೂರವಾಗಬೇಕು, ಕೋಮು ಸೌಹಾರ್ದತೆ ಸ್ಥಾಪನೆಯಾಗಬೇಕು, ಪ್ರೀತಿ, ವಾತ್ಸಲ್ಯ, ನಂಬಿಕೆ, ಸಾಮರಸ್ಯದ ಬದುಕು ಕಂಡು ಬರಬೇಕು ಎಂಬ ನಿಟ್ಟಿನಲ್ಲಿ ಎಲ್ಲಾ ಜಾತಿ ಮತ ಧರ್ಮದವರನ್ನು ಒಂದೆಡೆ ಸೇರಿಸಿ ಕೊಡಗು ಸರ್ವ ಜನಾಂಗದ ಒಕ್ಕೂಟವನ್ನು ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ಜನಾಂಗ, ಯಾವುದೇ ಧರ್ಮಗಳ ವಿರುದ್ಧ ಯಾರೇ ಆದರೂ ಸಾರ್ವಜನಿಕವಾಗಿ ನಿಂದಿಸಿದರೆ, ಮಾಧ್ಯಮ ಹೇಳಿಕೆಗಳನ್ನು ನೀಡಿದರೆ, ಸಾಮಾಜಿಕ ಜಾಲತಾಣವನ್ನು ಬಳಸಿ ಶಾಂತಿ ಕದಡುವ ಪ್ರಯತ್ನ ಮಾಡಿದರೆ ಇವುಗಳ ವಿರುದ್ಧ ಒಕ್ಕೂಟ ಕಾರ್ಯನಿರ್ವಹಿಸಲಿದೆ. ಮುಂದಿನ ದಿನಗಳಲ್ಲಿ ಉತ್ತಮ ರೂಪರೇಷೆಯನ್ನು ಕಲ್ಪಿಸಿ ಈ ಸಂಘಟನೆಯನ್ನು ಬಲಿಷ್ಠಗೊಳಿಸಲು ಸರ್ವ ಜನಾಂಗಗಳ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ರಾಜೀವ್ ಬೋಪಯ್ಯ ತಿಳಿಸಿದರು.
ಚೇಂಬರ್ ಆಫ್ ಕಾಮರ್ಸ್ ಜಿಲ್ಲಾಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್, ಬಂಟರ ಸಂಘದ ಜಿಲ್ಲಾಧ್ಯಕ್ಷ ಜಗದೀಶ್ ರೈ, ಹೊಟೇಲ್ ಅಸೋಸಿಯೇಷನ್ ಉಪಾಧ್ಯಕ್ಷ ಜಾಹಿರ್, ಆಟೋ ಮಾಲೀಕರ, ಚಾಲಕರ ಸಂಘದ ಅಧ್ಯಕ್ಷ ಡಿ.ಹೆಚ್.ಮೇದಪ್ಪ ಹಾಗೂ ಪೊನ್ನಂಪೇಟೆ ಕೊಡವ ಸಮಾಜದ ಮಾಜಿ ನಿರ್ದೇಶಕ ಪ್ರಭು ಪೂಣಚ್ಚ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದು ವೀರ ಸೇನಾನಿಗಳಿಗೆ ಅಗೌರವ ತೋರಿದ ಪ್ರಕರಣವನ್ನು ತೀವ್ರವಾಗಿ ಖಂಡಿಸಿದರು.
Breaking News
- *ದಕ್ಷಿಣ ಕೊಡಗಿನಲ್ಲಿ ಸಣ್ಣ ಕೈಗಾರಿಕಾ ಪ್ರದೇಶಾಭಿವೃದ್ಧಿ : 50 ಏಕರೆ ಭೂಮಿ ಮಂಜೂರಾತಿಗೆ ಆಪ್ ಮನವಿ*
- *ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು : 8ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ಕೊಡಗಿನ ವಿಶ್ವಜಿತ್ ಹಾಗೂ ಪೂಜಿತ್ ಆಯ್ಕೆ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ದೃಶ್ಯ ಅಚ್ಚಪ್ಪ ಆಯ್ಕೆ*
- *ಹೆಬ್ಬಾಲೆ : ಜ.23 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
- *ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿಯಿಂದ ಮಡಿಕೇರಿಯಲ್ಲಿ ಅನ್ನದಾನ*
- *ಜ.26 ರಂದು ಲೋಕಾಪ೯ಣೆಯಾಗಲಿದೆ ಮತ್ತೆ ವಸಂತ*
- *ಹೆಗ್ಗಳ ಗ್ರಾಮದ ಸರ್ಕಾರಿ ಶಾಲೆಗೆ ಕಂಪ್ಯೂಟರ್ ಕೊಡುಗೆ*
- *ಎನ್.ಯು.ನಾಚಪ್ಪ ವಿರುದ್ಧ ಪ್ರಕರಣ : ಮಡಿಕೇರಿ ಕೊಡವ ಸಮಾಜ ಖಂಡನೆ*
- *ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿಗೆ ಪಿ.ಹೆಚ್.ಡಿ ಪದವಿ*