ಕುಶಾಲನಗರ NEWS DESK ಡಿ.15 : ಸ್ವಚ್ಛ ಶೌಚಾಲಯ ಸ್ವಚ್ಛ ಪರಿಸರ’ ಧ್ಯೇಯದಡಿ ಪ್ರತಿಯೊಬ್ಬರೂ ಶೌಚಾಲಯವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಉತ್ತಮ ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರೂ ಆದ ಕೊಡಗು ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಯೋಜಕ ಟಿ.ಜಿ. ಪ್ರೇಮ್‍ಕುಮಾರ್ ಹೇಳಿದರು. ಕೊಡಗು ಜಿಲ್ಲಾ ಪಂಚಾಯಿತಿ, ಕುಶಾಲನಗರ ತಾಲ್ಲೂಕು ಪಂಚಾಯಿತಿ, ಭಾರತ್ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಕುಶಾಲನಗರ ತಾಲ್ಲೂಕು ಸ್ಥಳೀಯ ಸಂಸ್ಥೆ, ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಸಹಯೋಗದೊಂದಿಗೆ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ ( ಎನ್.ಎಸ್.ಎಸ್.) ಸ್ವಚ್ಛ ಭಾರತ ಅಭಿಯಾನದಡಿ ಕೂಡ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಕೋ ಕ್ಲಬ್ ಆಶ್ರಯದಲ್ಲಿ ಕೂಡಿಗೆ ಕ್ಲಸ್ಟರ್ ಮಟ್ಟದಲ್ಲಿ *ನಮ್ಮ ಶೌಚಾಲಯ: ನಮ್ಮ ಗೌರವ* ಎಂಬ ಧ್ಯೇಯದೊಂದಿಗೆ ಪ್ರಾಥಮಿಕ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದ ಸಂದರ್ಭದಲ್ಲಿ ವಿಶ್ವ ಶೌಚಾಲಯ ದಿನ -2024 ರ ಪರಿಸರ ಜಾಗೃತಿ ಆಂದೋಲನ ಕಾರ್ಯಕ್ರಮದಲ್ಲಿ ವಿಶ್ವ ಶೌಚಾಲಯ ದಿನದ ಮಹತ್ವ ಹಾಗೂ ಸ್ವಚ್ಛತೆ ಕುರಿತು ಮಾತನಾಡಿದ ಅವರು, ಶೌಚಾಲಯ ಸ್ವಚ್ಛವಾಗಿದ್ದರೆ ಗ್ರಾಮ ಸ್ವಚ್ಛವಾಗಿದ್ದು ಆರೋಗ್ಯವಾಗಿರುತ್ತದೆ ಎಂದರು. ಪ್ರತಿಯೊಬ್ಬರೂ ತಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛ ಭಾರತ ಅಭಿಯಾನಕ್ಕೆ ಕೈಜೋಡಿಸಬೇಕೆಂದರು. ಪ್ರತಿಯೊಬ್ಬರು ಸ್ವಚ್ಛತೆ ಕಾಪಾಡುವ ಮುಲಕ ಸ್ವಚ್ಛ ಭಾರತ ನಿರ್ಮಾಣ ಸಂಕಲ್ಪ ಮಾಡಬೇಕೆಂದರು. ಶೌಚಾಲಯ ಸ್ವಚ್ಛತೆ ಕುರಿತು ಟಿ.ಜಿ.ಪ್ರೇಮಕುಮಾರ್ ಪ್ರತಿಜ್ಞಾ ವಿಧಿ ಬೋಧಿಸಿದರು. ಶೌಚಾಲಯದ ಸ್ವಚ್ಛತೆ ಮತ್ತು ಬಳಕೆ ಕುರಿತು ಮಾತನಾಡಿದರು. ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ( ಡಯಟ್ ) ಯ ಉಪನ್ಯಾಸಕ ಎಂ.ಕೃಷ್ಣಪ್ಪ ಮಾತನಾಡಿ, ಶೌಚಾಲಯ ಸ್ವಚ್ಛತೆ ಬಗ್ಗೆ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು ಎಂದರು. ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯ ಎನ್ನೆಸ್ಸೆಸ್ ಅಧಿಕಾರಿ ಕೆ.ಟಿ.ಸೌಮ್ಯ, ಕೂಡ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಚ್.ಎಸ್.ಸುಜಾತ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಟಿ.ಈ.ಮಂಜುನಾಥ್, ಸಂತೋಷ್, ಟಿ.ಈ.ವಿಶ್ವನಾಥ್, ವೈಶಾಲಿ, ಸೀಮಾ, ವಿವಿಧ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಂತರ ನಡೆದ ಜಾಗೃತಿ ಜಾಥಾದಲ್ಲ್ಲಿ ವಿದ್ಯಾರ್ಥಿಗಳು ಸ್ವಚ್ಛ ಗ್ರಾಮ – ಸ್ವಚ್ಛ ಭಾರತ, ಬಯಲು ಶೌಚಮುಕ್ತ ಗ್ರಾಮ ನಮ್ಮ ಗುರಿ, ಶೌಚಾಲಯವೇ ಆರೋಗ್ಯಾಲಯ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿ , ಸ್ವಚ್ಛತೆಯೇ ಸೇವೆ, ಸ್ವಚ್ಚತೆ ಎಲ್ಲಿದೆಯೋ ಅಲ್ಲಿದೆ ಆರೋಗ್ಯ, ಶೌಚಾಲಯಗಳಿರಲಿ ಮನೆ ಮನೆಗಳಲ್ಲಿ, ಬಯಲು ಶೌಚಮುಕ್ತ ಭಾರತ ನಮ್ಮ ಗುರಿ ಎಂಬಿತ್ಯಾದಿ ಶೌಚಾಲಯ ಸ್ವಚ್ಛತೆ ಎಂಬಿತ್ಯಾದಿ ಪರಿಸರ ಘೋಷಣೆಗಳನ್ನು ಪ್ರಚುರಪಡಿಸಿದರು.