ಸುಂಟಿಕೊಪ್ಪ NEWS DESK ಡಿ15 : ಸುಂಟಿಕೊಪ್ಪದ ಶ್ರೀ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಸ್ಥಾನ ಸಮಿತಿ ವತಿಯಿಂದ ಭಾನುವಾರ ರಾತ್ರಿ ಮುತ್ತಪ್ಪ ದೇವರ ಪುತ್ತರಿ ವೆಳ್ಳಾಟಂ ಶ್ರದ್ಧಾಭಕ್ತಿಯಿಂದ ನಡೆಯಿತು. ಹೋಬಳಿ ವ್ಯಾಪ್ತಿಯ ಕೆದಕಲ್, ಏಳನೇ ಹೊಸಕೋಟೆ, ಕೊಡಗರಹಳ್ಳಿ, ಅತ್ತೂರು, ಬಾಳೆಕಾಡು, ಶ್ರೀದೇವಿಗಳಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ಭಕ್ತರು ಹರಕೆ ಸಲ್ಲಿಸಿದರು. ರಾತ್ರಿ ಕುಂದನ್ ನೃತ್ಯಾಲಯ ತಂಡದಿಂದ ವೈವಿಧ್ಯಮಯ ನೃತ್ಯ ಪ್ರದರ್ಶನ ಮತ್ತು ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ನಂತರ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಾಲಯದಲ್ಲಿ ವಿಶೇಷ ಪೂಜೆ, ಮಹಾ ಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಾಲಯ ಸಮಿತಿಯ ಪಟ್ಟೆಮನೆ ಉದಯಕುಮಾರ್, ರಮೇಶ್ ಪಿಳ್ಳೈಜಿ.ಪಿ.ಅನಿಲ್ ಕುಮಾರ್, ಯಂಕನ ಕೌಶಿಕ್, ಮುತ್ತಪ್ಪ ದೇವಾಲಯದ ಪೂಜಾರಿ ಶಿವರಾಮು, ಚಾಮುಂಡೇಶ್ವರಿ ದೇವಾಲಯದ ಮುಖ್ಯ ಅರ್ಚಕ ಮಂಜುನಾಥ್ ಉಡುಪ ಸೇರಿದಂತೆ ಸಮಿತಿ ಸದಸ್ಯರು ಇದ್ದರು.