ಮಡಿಕೇರಿ ಡಿ.26 NEWS DESK : ನಮ್ಮ ಪೂರ್ವಜರು ಕಷ್ಟಪಟ್ಟು ಪದ್ದತಿ ಪರಂಪರೆ ಆಚಾರ, ವಿಚಾರ, ಸಹಬಾಳ್ವೆ ಸಂಸ್ಕಾರಗಳನ್ನು ನಮಗೆ ಕೊಟ್ಟು ಹೋಗಿದ್ದಾರೆ. ಅವುಗಳನ್ನು ನಮ್ಮ ಮುಂದಿನ ಪೀಳಗೆಯತ್ತ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಸಮಾಜಗಳು, ಸಂಘ ಸಂಸ್ಥೆಗಳು ಜಾಗರೂಕತೆಯಿಂದ ಹೆಜ್ಜೆ ಇಡಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಕರೆ ನೀಡಿದರು. ಸೋಮವಾರಪೇಟೆ ಕೊಡವ ಸಮಾಜದಲ್ಲಿ ನಡೆದ ಸುವರ್ಣ ಮಹೋತ್ಸವ ( ಪೊನ್ನ್ ನಮ್ಮೆ) ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಜಗತ್ತಿನಲ್ಲಿಯೇ ಕೊಡವ ಜನಾಂಗದ ಆಚಾರ ವಿಚಾರಗಳು, ಆಹಾರ ಪದ್ದತಿಗಳು, ಉಡುಗೆ, ತೊಡುಗೆಗಳು ವಿಶಿಷ್ಟವಾಗಿ ಇದ್ದು ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ತುಂಬಾ ಕಷ್ಟ ಪಟ್ಟು ಆಧುನಿಕತೆಯ ಕನಿಷ್ಠ ಸಂಪರ್ಕ ಇಲ್ಲದ ಕಾಲದಲ್ಲಿ ಇಂತಹ ಭವ್ಯ ಪರಂಪರೆಯನ್ನು ಬಳುವಳಿಯಾಗಿ ಉಳಿಸಿ ಹೋಗಿದ್ದಾರೆ.ಇವು ಶಾಶ್ವತವಾಗಿ ಉಳಿದರೇ ಮಾತ್ರ ಜನಾಂಗದ ಅಸ್ಮಿತೆ ಉಳಿಯುತ್ತದೆ. ಈ ನಿಟ್ಟಿನಲ್ಲಿ ಕೊಡವ ಸಮಾಜಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ ಎಂದು ಶ್ಲಾಘಿಸಿದರು. ಸಂಸದ ಯದುವೀರ್ ಒಡೆಯರ್ ಮಾತನಾಡಿ, ಮೈಸೂರು ಸಂಸ್ಥಾನ ಮತ್ತು ಕೊಡಗಿಗೆ ಪ್ರಾಚೀನ ಕಾಲದಿಂದಲೂ ಅವಿನಾಭಾವ ಸಂಭಂದ ಇದ್ದು, ಕಾವೇರಿ ನದಿಯ ಕಾರಣದಿಂದ ಮೈಸೂರು ಜನತೆ ಕೊಡಗಿನ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದಾರೆ ಎಂದು ತಿಳಿಸಿದರು. ಕೊಡವ ಸಮಾಜಗಳು ತಮ್ಮ ಜನಾಂಗದ ಏಳ್ಗೆಗಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಚೆಪ್ಪುಡಿರ ಪೂಣಚ್ಚ ಮಾತನಾಡಿ, ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಕೊಡವ ಜನಾಂಗ ಸೈನ್ಯ, ಕ್ರೀಡೆ, ಕಾನೂನು, ರಾಜಕೀಯ ಮುಂತಾದ ಕ್ಷೇತ್ರದಲ್ಲಿ ಗುರುತಿಸಿಕೊಂಡು ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು. ಸೋಮವಾರಪೇಟೆ ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯು ಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿ ಐವತ್ತು ವರ್ಷಗಳಿಂದ ಕೊಡವ ಸಮಾಜ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು. ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ, ಮಾಜಿ ಸಚಿವರಾದ ಅಪ್ಪಚ್ಚು ರಂಜನ್, ಮಾಜಿ ಎಂ.ಎಲ್.ಸಿ ಎಸ್.ಜಿ ಮೇದಪ್ಪ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.