ಕೊಡ್ಲಿಪೇಟೆ ಡಿ.27 NEWS DESK : ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಸಮೀಪದ ಶಾಲಾ ಆವರಣದಲ್ಲಿರುವ ಕಿರಿಕೊಡ್ಲಿ ಮಠದ ಶ್ರೀ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಲೋಕಕಲ್ಯಾಣಾರ್ಥವಾಗಿ ಶ್ರೀ ಕ್ಷೇತ್ರ ಕಿರಿಕೊಡ್ಲಿ ಮಠದ ಪೂಜ್ಯರಾದ ಲಿಂಗೈಕ್ಯ ಶ್ರೀ ಗುರುಸಿದ್ದ ಸ್ವಾಮಿಯ ಸಂಸ್ಮರಣ ಧಾರ್ಮಿಕ ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು. ಲೋಕಕಲ್ಯಾಣಾರ್ಥವಾಗಿ ರುದ್ರಾಭಿಷೇಕ, ಗಣಪತಿ ಹೋಮ, ರುದ್ರ ಹೋಮ,ಸಹಸ್ರ ಬಿಲ್ವಾರ್ಚನ ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯ ನಡೆಯಿತು. ಕಿರಿಕೊಡ್ಲಿ ಮಠದ ಮಠಾಧ್ಯಕ್ಷ ಸದಾಶಿವ ಸ್ವಾಮೀಜಿಗಳ ನೇತೃತ್ವದಲ್ಲಿ ಹಲವು ಮಠಾಧೀಶರುಗಳು ಚರ ಮೂರ್ತಿಗಳು ಪಾಲ್ಗೊಂಡು ಧಾರ್ಮಿಕ ಕೈಂಕೈರ್ಯಗಳನ್ನು ನೆರವೇರಿಸಿದರು. ಸ್ವಸ್ತಿ ಶ್ರೀ ವಿಜಯ ಅಭ್ಯುದಯ ಶಾಲಿವಾಹನ ಶಕ1946 ನೇನೇ ಕ್ರೋಧಿನಾಮ ಸಂವತ್ಸರ ದಕ್ಷಿಣ ಯಾಣೆ ಹೇಮಂತ ಋತು ಮಾರ್ಗಶಿರ ಮಾಸ ಕೃಷ್ಣ ಪಕ್ಷ ದ್ವಾದಶಿ ತಿಥಿ ಶುಕ್ರವಾರ ವಿಶಾಖ ನಕ್ಷತ್ರ ದೃಥಿನಾಮ ಯೋಗ ಅಂಗವಾಗಿ ಬೆಳಿಗ್ಗೆ ಗಂಗಾ ಪೂಜೆ ಹಾಗೂ ಗಣಪತಿ ಪೂಜೆಯೊಂದಿಗೆ ಸ್ವಾಮಿಗೆ ರುದ್ರಾಭಿಷೇಕ ನಡೆಯಿತು. ದೇವರಿಗೆ ವಿವಿಧ ಧಾರ್ಮಿಕ ಪೂಜೆಗಳೊಂದಿಗೆ ಧಾನ್ಯಗಳನ್ನು ಇಟ್ಟು ಪೂಜಿಸಲಾಯಿತು. ಕಿರಿಕೊಡ್ಲಿಮಠದ ಶ್ರೀ ಕ್ಷೇತ್ರ ಪೀಠಾಧಿಪತಿ ಶ್ರೀ ಸದಾಶಿವ ಸ್ವಾಮೀಜಿಯವರ ಸಮ್ಮುಖದಲ್ಲಿ ವೇದ ಬ್ರಹ್ಮ ಸೋಮಶೇಖರ ಶಾಸ್ತ್ರಿಗಳು, ಶಂಕರಯ್ಯ ಶಾಸ್ತ್ರಿಗಳು ಮೃತ್ಯುಂಜಯ ಶಾಸ್ತ್ರಿಗಳು, ಮೋಹನ ಮೂರ್ತಿ ಶಾಸ್ತ್ರಿಗಳು , ಶ್ರೀ ರಮೇಶ ಶಾಸ್ತ್ರಿಗಳು ಮತ್ತು ಸಂಗಡಿಗರು ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿದರು. ವಿರಾಜಪೇಟೆ ಅರಮೇರಿ – ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಹಾಸನ ತಣ್ಣೀರು ಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ಕೆಸವತ್ತೂರು ಮಠಾಧೀಶರಾದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಮನೆಹಳ್ಳಿ ಮಠಾಧೀಶರಾದ ಶ್ರೀಮಹಾಂತ ಶಿವಲಿಂಗ ಸ್ವಾಮೀಜಿ, ಶಿಡಿಗಡಲೆ ಮಠಾಧೀಶರಾದ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಮುದ್ದಿನ ಕಟ್ಟೆ ಮಠಾಧೀಶರಾದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ತೊರೆನೂರು ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಅರಕಲಗೂಡು ಚಿಲುಮೆ ಮಠಾಧೀಶರಾದ ಶ್ರೀಜಯದೇವ ಸ್ವಾಮೀಜಿ, ಶಿರಗನಹಳ್ಳಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಬಸವಪಟ್ಟಣ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮೀಜಿ ಮತ್ತಿತರ ಗಣ್ಯರು, ಮಠಾಧಿಪತಿಗಳು ಸೇರಿದಂತೆ ಕೊಡ್ಲಿಪೇಟೆ, ಹಾಸನ ಮತ್ತು ಕೊಡಗು ಜಿಲ್ಲೆಯ ಗಡಿಭಾಗಗಳಿಂದ ಹೆಚ್ಚಿನ ಭಕ್ತಾದಿಗಳು ಪಾಲ್ಗೊಂಡು ಪೂಜಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಭಾಗವಹಿಸಿದ್ದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು. ಇದಕ್ಕೂ ಮುನ್ನ ದೇಶದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ರವರ ನಿಧನದ ಹಿನ್ನೆಲೆಯಲ್ಲಿ ಮಠದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶಾಲಾ ವಾರ್ಷಿಕೋತ್ಸವ ಮುಂದೂಡಿಕೆ :: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ರವರ ನಿಧನದ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಬೇಕಿದ್ದ ಶಾಲಾ ವಾರ್ಷಿಕೋತ್ಸವವನ್ನು ಮುಂದೂಡಲಾಯಿತು.