ವಿರಾಜಪೇಟೆ ಡಿ.28 NEWS DESK : ಆರ್ಜಿ ಗ್ರಾಮದ ಶ್ರೀ ಸ್ವಾಮಿ ಅಯ್ಯಪ್ಪ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪ ಸ್ಪಾಮಿಯ ವಾರ್ಷಿಕ ಮಂಡಲ ಪೂಜಾ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ಮುಂಜಾನೆಯಿಂದಲೇ ಗಣಪತಿ ಹೋಮ ಸೇರಿದಂತೆ ವಿವಿಧ ಪೂಜೆ ಹಾಗೂ ಭಜನೆ ಜರುಗಿತು. ಮಧ್ಯಾಹ್ನ ಮಹಾಪೂಜೆ ಬಳಿಕ ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಸಂಜೆ ಭಜನಮಂದಿರಲ್ಲಿ ದೀಪಾರಾಧನೆ ನಡೆಯಿತು. ಶ್ರೀ ಸ್ವಾಮಿಯ ಭಾವಚಿತ್ರವಿರಿಸಿದ ಪಲ್ಲಕ್ಕಿಯೊಂದಿಗೆ ಅಯ್ಯಪ್ಪ ಮಾಲದಾರಿಗಳು ಭಜನ ಮಂದಿರದಿಂದ ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆಯಲ್ಲಿ ಮಹಿಳೆಯರು ಸೇರಿದಂತೆ ಮಕ್ಕಳು ದೀಪ ಹೊತ್ತು ಮೆರವಣಿಗೆಗೆ ಮೆರಗು ನೀಡಿದರು. ಶ್ರೀ ಅಯ್ಯಪ್ಪ ಸ್ವಾಮಿ ಬೇಟೆಗೆ ಹೊರಡುವ ವಿರಾಟ್ ರೂಪದ ಸ್ತಬ್ಧ ಚಿತ್ರ ಶೋಭ ಯಾತ್ರೆಯ ಪ್ರಮುಖ ಆಕರ್ಷಣೆಯಾಗಿತ್ತು. ಈ ಸಂದರ್ಭ ಶ್ರೀ ಸ್ವಾಮಿ ಅಯ್ಯಪ್ಪ ಭಜನಾ ಮಂದಿರದ ಆಡಳಿತ ಮಂಡಳಿಯ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ಶಿವಪ್ಪ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಪೆರುಂಬಾಡಿ, ಆರ್ಜಿ ಗ್ರಾಮ ಬಾಳುಗೋಡು, ಬಿಟ್ಟಂಗಾಲ ಸೇರಿದಂತೆ ನಗರದ ಹಲವು ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ