ಮಡಿಕೇರಿ ಜ.4 NEWS DESK : ಮಾನವ ಬಂಧುತ್ವ ವೇದಿಕೆ ಕೊಡಗು ಜಿಲ್ಲಾ ಶಾಖೆ ವತಿಯಿಂದ ಸೋಮವಾರಪೇಟೆ ತಾಲ್ಲೂಕು ಕೊಡ್ಲಿಪೇಟೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಸಾವಿತ್ರಿ ಬಾಯಿಫುಲೆ ಅವರ ಜನ್ಮದಿನದ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳು ಸಾವಿತ್ರಿ ಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಜೆ.ಎಲ್.ಜನಾರ್ದನ್, ಸಾಮಾಜಿಕ ಅನಿಷ್ಟ ಹಾಗೂ ಗೊಡ್ಡು ಸಂಪ್ರದಾಯಗಳ ನಡುವೆ, ಪುರುಷರಂತೆ ಮಹಿಳೆಯರಿಗೆ ಶಿಕ್ಷಣ, ಉದ್ಯೋಗ ಸಿಗಬೇಕು ಎಂದು ಹೋರಾಟ ಮಾಡಿದ್ದಾರೆ ಎಂದರು. ಮಾನವ ಬಂಧುತ್ವ ನಡೆದುಕೊಂಡ ಬಂದ ದಾರಿಯ ಬಗ್ಗೆ ವಿವರಿಸಿದರು. ವಿಜ್ಞಾನವೇ ನಮ್ಮ ನಡೆ ಮೌಡ್ಯದಿಂದ ಹೊರಬನ್ನಿ ಎಂದು ಹೇಳಿದರು. ಮಲ್ಲಿಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಚಂದ್ರಕಲಾ ಮಾತನಾಡಿ, ಸಾವಿತ್ರಿಬಾಯಿಫುಲೆ ಹೆಣ್ಣುಮಕ್ಕಳಿಗೆ ಹಾಗೂ ಮಹಿಳೆಯರಿಗೆ ಶಿಕ್ಷಣ ಸಿಗಬೇಕು, ಮುಖ್ಯವಾಹಿನಿಗೆ ಬರಬೇಕು. ಹೆಣ್ಣು ಅಬಲೆ ಅಲ್ಲ ಸಬಲೆ ಎಂದು ಪ್ರಾತಿಪಾದಿಸಿದ್ದಾರೆ ಎಂದ ಅವರು, ಮಹಿಳೆಯರಿಗೆ ಅವರು ದೊರಕಿಸಿಕೊಟ್ಟ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಸೋಮವಾರಪೇಟೆ ತಾಲ್ಲೂಕಿನ ಸಂಚಾಲಕ ಎಂ.ಎಸ್.ವೀರೇಂದ್ರ ಮಾತನಾಡಿ, ಸಾವಿತ್ರಿ ಬಾಯಿಫುಲೆ ಅವರ ಜೀವನ ಚರಿತ್ರೆ, ಸಾಧನೆ ಬಗ್ಗೆ ವಿವರಿಸಿದರು. ಶಾಲೆಯ ಪ್ರಾಂಶುಪಾಲ ಮಹೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾನವ ಬಂಧುತ್ವ ವೇದಿಕೆಯ ಸದಸ್ಯ ಎಂ.ಪಿ.ವಿಶ್ವ, ವೀರಭದ್ರ ದೊಡ್ಡಕೊಡ್ಲಿ, ಶಾಲಾ ಶಿಕ್ಷಕರು ಹಾಜರಿದ್ದರು. ಶಿಕ್ಷಕ ಸತೀಶ್ ಕಾರ್ಯಕ್ರಮ ನಿರೂಪಿಸಿದರು.