ಮಡಿಕೇರಿ ಜ.6 NEWS DESK : ಬುದ್ಧ, ಬಸವ, ಅಂಬೇಡ್ಕರ್ ಅವರ ಆಶಯ ಮತ್ತು ಚಿಂತನೆಗಳನ್ನು ಒಳಗೊಂಡ ಸಚಿವ ಸತೀಶ್ ಜಾರಕಿಹೊಳಿ ಅವರ ಸಾರಥ್ಯದಲ್ಲಿ ಪ್ರಾರಂಭವಾಗಿರುವ ಮಾನವ ಬಂಧುತ್ವ ವೇದಿಕೆಯು ದಶಮಾನೋತ್ಸವದ ಸಂಭ್ರಮದಲ್ಲಿದ್ದು, ಫೆ.2 ರಂದು ದಾವಣಗೆರೆಯಲ್ಲಿ ನಡೆಯಲಿರುವ ಬೃಹತ್ ಸಮಾವೇಶಕ್ಕೆ ಕೊಡಗಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವೇದಿಕೆಯ ಜಿಲ್ಲಾ ಸಂಚಾಲಕ ಜೆ.ಎಲ್.ಜನಾರ್ಧನ್ ಮನವಿ ಮಾಡಿದರು. ನಗರದ ಸುದರ್ಶನ ಅಥಿತಿ ಗೃಹದಲ್ಲಿ ಕಾರ್ಯಕ್ರಮದ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಿ, ಮಾತನಾಡಿದರು. ಸಭೆಯಲ್ಲಿ ರಾಜ್ಯ ಮಹಿಳಾ ಒಕ್ಕೂಟದ ಸಂಚಾಲಕಿ ಡಾ.ಲೀಲಾ ಸಂಪಿಗೆ, ಮಂಗಳೂರು ವಿಭಾಗೀಯ ಸಂಚಾಲಕ ಕೆ.ಎಸ್.ಸತೀಶ್ ಕುಮಾರ್, ರಾಜ್ಯ ಸಮಿತಿ ಸದಸ್ಯ ರಮನಾಥ್, ಜಿಲ್ಲಾ ಮಹಿಳಾ ಸಮಿತಿಯ ಸಂಚಾಲಕಿ ಡಾ.ಹೆಚ್.ಎಂ.ಕಾವೇರಿ, ಸದಸ್ಯರಾದ ನೆರವಂಡ ಉಮೇಶ್, ಸಾಮಾಜಿಕ ಹೋರಾಟಗಾರ ಟಿ.ಪಿ.ರಮೇಶ್ ಮಾತನಾಡಿ, ಎಲ್ಲಾ ಸದಸ್ಯರ ಅಭಿಪ್ರಾಯಗಳನ್ನು ಪಡೆದುಕೊಂಡು ಕೊಡಗು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಂದ ತಲಾ ಎರಡು ಬಸ್ಸುಗಳಂತೆ ಚಳುವಳಿಗಾರರು, ಸಂವಿಧಾನವನ್ನು ಗೌರವಿಸುವ ಮತ್ತು ಉಳಿಸುವ ಮಹತ್ವಕಾಂಕ್ಷೆ ಹೊಂದಿರುವ ಬುದ್ಧ, ಬಸವ, ಅಂಬೇಡ್ಕರ್ ಅನುಯಾಯಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುಖಾಂತರ ಸಂವಿಧಾನವನ್ನು ಉಳಿಸಲು ಮುಂದಾಗಬೇಕು ಎಂದರು. ಜಿಲ್ಲೆಯಿಂದ ಕಾರ್ಯಕ್ರಮಕ್ಕೆ ತೆರಳುವ ಕಾರ್ಯಕರ್ತರಿಗೆ ವಾಹನದ ಸೌಲಭ್ಯ ಹಾಗೂ ತಿಂಡಿ ಮತ್ತು ಊಟದ ವ್ಯವಸ್ಥೆಗಳನ್ನು ಮಾಡುವ ಬಗ್ಗೆ ಚರ್ಚಿಸಿ, ಎಲ್ಲಾ ತಾಲ್ಲೂಕು ಕೇಂದ್ರಗಳ ಸಂಚಾಲಕರುಗಳು ಜವಾಬ್ದಾರಿ ತೆಗೆದುಕೊಂಡು ಅತಿ ಹೆಚ್ಚು ಮಹಿಳೆಯರನ್ನು, ವಿದ್ಯಾರ್ಥಿಗಳನ್ನು ಸೇರಿದಂತೆ ಸಂವಿಧಾನವಾದಿ ಕಾರ್ಯಕರ್ತರನ್ನು ಕರೆ ತರುವಂತೆ ಮಾನವ ಬಂಧುತ್ವ ವೇದಿಕೆ ಸದಸ್ಯರುಗಳಿಗೆ ಜವಾಬ್ದಾರಿ ನೀಡಲಾಯಿತು. ಮಹಿಳಾ ಸಂಚಾಲಕರುಗಳು ಸಹ ಭಾಗವಹಿಸಿ ಗ್ರಾಮ ಸಮಿತಿಗಳ ಮುಖಾಂತರ ಪ್ರತಿ ಹಳ್ಳಿಗಳಿಂದಲೂ ಕನಿಷ್ಠ ಐದು ಜನರನ್ನು ಹೊರಡಿಸುವ ಜವಾಬ್ದಾರಿಯನ್ನು ತೆಗೆದುಕೊಂಡರು.
ಮುಂದಿನ ದಿನಗಳಲ್ಲಿ ಮಾನವ ಬಂಧುತ್ವ ವೇದಿಕೆಗೆ ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಸದಸ್ಯರನ್ನು ನೋಂದಾವಣೆ ಮಾಡುವ ಮೂಲಕ ವೇದಿಕೆಯನ್ನು ಪ್ರಬಲಗೊಳಿಸಿ, ಜಿಲ್ಲೆಯ ಜನರಿಗೆ ವೈಜ್ಞಾನಿಕ ಬುದ್ಧ ಬಸವ ಅಂಬೇಡ್ಕರ್ ಅವರ ಆಶಯಗಳನ್ನು ಪಸರಿಸುವ ಕೆಲಸಕ್ಕೆ ಕೈಜೋಡಿಸುವಂತೆ ತೀರ್ಮಾನಿಸಲಾಯಿತು. ಸಭೆಯಲ್ಲಿ ನಿವೃತ್ತ ಉಪನ್ಯಾಸಕಿ ರೇವತಿ, ಮಡಿಕೇರಿ ಮಹಿಳಾ ಸಂಚಾಲಕಿ ಕೆ.ಜಿ.ರಮ್ಯಾ, ಸೋಮವಾರಪೇಟೆ ತಾಲ್ಲೂಕು ಸಂಚಾಲಕರಾದ ಎಂ.ಎಸ್.ವೀರೇಂದ್ರ, ವಿರಾಜಪೇಟೆ ಮಹಿಳಾ ಒಕ್ಕೂಟದ ಸಂಚಾಲಕಿ ವಿ.ಪಿ.ಲಿಖಿತ, ರಾಜ್ಯ ಸಮಿತಿ ಸದಸ್ಯ ಕರುಣಾಕರ, ಸದಸ್ಯರಾದ ಬಸೀರ್, ರಾಜು, ಎಂ.ಪಿ.ವಿಶ್ವ, ಮಂಜುನಾಥ್ ಮಾದ್ರೆ, ಪೃಥ್ವಿರಾಜ್, ವಿರಾಜಪೇಟೆ, ಮಡಿಕೇರಿ, ಸೋಮವಾರಪೇಟೆ ತಾಲ್ಲೂಕು ಸಂಚಾಲಕರು ಹಾಜರಿದ್ದರು. ಗೆಜ್ಜೆಹಣಕೋಡು ಮಹೇಶ್ ಕ್ರಾಂತಿ ಗೀತೆ ಹಾಡಿದರು.