ಕುಶಾಲನಗರ ಜ.6 NEWS DESK : ಜೀವಪರವಾದ ಹೋರಾಟಗಳ ಸಾಹಿತ್ಯ ಕೃಷಿ ಮಾಡುವ ಮೂಲಕ ಜನಸಾಮಾನ್ಯರ ಗಟ್ಟಿಧ್ವನಿಯಾಗಿದ್ದ ಸಾಹಿತಿ ನಾ.ಡಿಸೋಜಾ ಅವರ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಎಂದು ಕೊಡಗಿನ ಹಿರಿಯ ಸಾಹಿತಿ ಬಾಚರಣಿಯಂಡ ಪಿ.ಅಪ್ಪಣ್ಣ ಹೇಳಿದರು. ಸಾಹಿತ್ಯಾಸಕ್ತರ ವೇದಿಕೆ ವತಿಯಿಂದ ಕುಶಾಲನಗರದ ಅನುಗ್ರಹ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು, ನಾ.ಡಿಸೋಜಾ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, 60 ರ ದಶಕದಲ್ಲಿ ಪಾಟೀಲ್ ಪುಟ್ಟಪ್ಪ ಅವರ ಪ್ರಪಂಚ ಪತ್ರಿಕೆಯಲ್ಲಿ ನಿರಂತರವಾಗಿ ನಾ.ಡಿಸೋಜಾ ಅವರು ಬರೆಯುತ್ತಿದ್ದ ಲೇಖನಗಳಿಗಾಗಿ ಓದುಗರು ಕಾತರದಿಂದ ಕಾಯುತ್ತಿದ್ದರು. ಮಲೆನಾಡಿನ ಪ್ರಕೃತಿ ರಮಣೀಯ ಹಸಿರು ಹೊದಿಕೆಗೆ ಘಾಸಿಯಾಗದಂತೆ ಸದಾ ಕಾಲ ಕಾವಲುಗಾರನಂತಿದ್ದು ಪರಿಸರ ಸಂರಕ್ಷಕರಾಗಿದ್ದರು. ಕವಿ, ಸಾಹಿತಿ, ಕಥೆಗಾರ, ಕಾದಂಬರಿಕಾರ ಹೀಗೆ ಸಾಹಿತ್ಯದ ಹಲವು ಆಯಾಮಗಳನ್ನು ತನ್ನಲ್ಲಿ ಅವ್ಯಕ್ತಗೊಳಿಸಿದ್ದ ನಾ.ಡಿಸೋಜ ಶರಾವತಿ ಹಿನ್ನೀರಿನಿಂದಾಗಿ ಜನ ಅನುಭವಿಸುತ್ತಿದ್ದ ಸಂಕಷ್ಟಗಳನ್ನು ತಮ್ಮ ಲೇಖನಿಯ ಮೂಲಕವೇ ಪ್ರತಿರೋಧಿಸುತ್ತಾ ಆಳುವ ಸರ್ಕಾರಗಳಿಗೆ ಎಚ್ಚರಿಕೆಯ ಘಂಟೆಯಾಗಿದ್ದರು ಎಂದು ಬಾಚರಣಿ ಅಪ್ಪಣ್ಣ ಹೇಳಿದರು. ಅನುಗ್ರಹ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಪ್ರೊ.ಹೆಚ್.ಬಿ.ಲಿಂಗಮೂರ್ತಿ ಮಾತನಾಡಿ, ಸಾಹಿತಿ ನಾ.ಡಿಸೋಜಾ ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕದ ಕೊಂಡಿ ಕಳಚಿದೆ. ಸಾಹಿತ್ಯದತ್ತ ಒಲವಿರುವಂತಹ ವಿದ್ಯಾರ್ಥಿಗಳು ಹಾಗೂ ಯುವಜನಾಂಗಕ್ಕೆ ನಾ.ಡಿಸೋಜಾ ಅವರ ಸಾಹಿತ್ಯ ಕೃಷಿ ಹಾಗೂ ಜನಪರ ಹೋರಾಟ ಮಾದರಿಯಾಗಬೇಕಿದೆ ಎಂದರು. ಸಾಹಿತ್ಯಾಸಕ್ತರ ವೇದಿಕೆಯ ಸಂಚಾಲಕ ಕೆ.ಎಸ್.ಮೂರ್ತಿ ಮಾತನಾಡಿ, ಆಳುವ ಸರ್ಕಾರದ ಯೋಜನೆಗಳು ಜನರ ಹಿತಾಸಕ್ತಿಗೆ ಮಾರಕವಾಗುತ್ತಿದ್ದ ಸಂದರ್ಭ ತಮ್ಮ ಬರಹಗಳ ಮೂಲಕವೇ ಆಳುವವರಿಗೆ ಎಚ್ಚರಿಕೆ ನೀಡುತ್ತಿದ್ದ ನಾ.ಡಿಸೋಜಾ ಅವರ ಸಾಹಿತ್ಯ ದೊಂದಿಗಿನ ಹೋರಾಟ ಹಾಗೂ ಬರಹ ಇಂದಿನ ತಲೆಮಾರಿನ ಸಾಹಿತ್ಯ ಪ್ರೇಮಿಗಳು, ವಿದ್ಯಾರ್ಥಿಗಳು ಹಾಗೂ ಮಕ್ಕಳಿಗೆ ಪ್ರೇರಣೆಯಾಗಬೇಕಿದೆ ಎಂದರು.
ಸಾಹಿತಿ ಲೀಲಾವತಿ ತೊಡಿಕಾನ ನಾ.ಡಿಸೋಜಾ ಅವರ ಕುರಿತು ಮಾತನಾಡಿದರು. ಉಪನ್ಯಾಸಕರಾದ ಶ್ರೀವಾಣಿ, ಪೃಥ್ವಿ, ಶ್ವೇತಾ, ಸೀಮಾ, ರಕ್ಷಾಪ್ರಿಯ, ಪ್ರವೀಣ್, ಪುನೀತ್, ಅನಿತಾ, ರೇಷ್ಮಾ, ಸೌಮ್ಯ ಇದ್ದರು.