ನಾಪೋಕ್ಲು ಜ.7 NEWS DESK : ಸಂಘಟನೆಯಿಂದ ಶಕ್ತರಾಗಿರಿ ವಿದ್ಯೆಯಿಂದ ಪ್ರಬುದ್ಧರಾಗಿರಿ ಎಂಬ ಶ್ರೀ ನಾರಾಯಣ ಗುರುಗಳ ಧ್ಯೇಯೋದ್ದೇಶವನ್ನು ಸಾಕಾರಗೊಳಿಸುವಲ್ಲಿ ಎಸ್‍ಎನ್‍ಡಿಪಿ ಕಾರ್ಯನಿರ್ವಹಿಸುತ್ತಿದೆ ಎಂದು ಎಸ್‍ಎನ್‍ಡಿಪಿ ಜಿಲ್ಲಾಧ್ಯಕ್ಷ ವಿ.ಕೆ.ಲೋಕೇಶ್ ಹೇಳಿದರು. ನಾಪೋಕ್ಲುವಿನಲ್ಲಿ ಆಯೋಜಿಸಲಾಗಿದ್ದ ಎಸ್‍ಎನ್‍ಡಿಪಿ ಶಾಖೆಯ ಸಂಘಟನಾ ಪುನರ್ ರಚನಾ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರು ಸಂಘಟನೆಯ ಸದಸ್ಯರಾಗಬೇಕು. ನಾರಾಯಣ ಗುರು ನಮ್ಮ ಜೀವನ ಹೀಗಿರಬೇಕು ಎಂದು ಚೌಕಟ್ಟನ್ನು ರೂಪಿಸಿದರು. ಆ ಚೌಕಟ್ಟಿನ ಒಳಗಡೆ ಸಂಘಟನೆ ಸದಸ್ಯರು ಕಾರ್ಯನಿರ್ವಹಿಸಬೇಕು ಎಂದರು. ವಿವಿಧ ಕ್ಷೇತ್ರಗಳಲ್ಲಿ ಸಮಾಜದ ಮಂದಿ ಸಾಧನೆ ಮಾಡಿದ್ದಾರೆ. ಆರ್ಥಿಕವಾಗಿ ಸದೃಢರಾಗಲು ಗುರುಗಳು ಹಾಕಿ ಕೊಟ್ಟ ಮೇಲ್ಪಂಕ್ತಿಯನ್ನು ಅನುಸರಿಸಬೇಕು ಎಂದರು. ಸೈನ್ಯ ಕೃಷಿ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸುವಂತಾಗಬೇಕು ಎಂದು ಹೇಳಿದರು. ಜಿಲ್ಲೆಯ ನಿವಾಸಿಗಳ ಜೊತೆಯಲ್ಲಿ ಉತ್ತಮ ಸಂಬಂಧವನ್ನು ರೂಢಿಸಿಕೊಂಡು ಎಸ್‍ಎನ್‍ಡಿಪಿ ಸದಸ್ಯರು ಜೀವನವನ್ನು ರೂಪಿಸಿಕೊಂಡು ಹೋಗುತ್ತಿದ್ದಾರೆ. ಎಂದ ಅವರು ನಮ್ಮ ಸಂಘಟನೆಯಿಂದ ಇನ್ನಷ್ಟು ಜನಪರ ಕೆಲಸಗಳು ಆಗಬೇಕಾಗಿದ್ದು, ಸಂಘಟನೆಗೆ ಪ್ರತಿಯೊಬ್ಬರ ಸಹಕಾರ ಅತಿ ಮುಖ್ಯವೆಂದರು. ಎಸ್‍ಎನ್‍ಡಿಪಿ ಕೊಡಗು ಜಿಲ್ಲಾ ಮಹಿಳಾ ಯೂನಿಯನ್ ಹಾಗೂ ಬ್ಯಾಂಕ್ ಅಧ್ಯಕ್ಷ ರಿಷ ಸುರೇಂದ್ರನ್ ಮಾತನಾಡಿ, ನಾಪೋಕ್ಲು ವ್ಯಾಪ್ತಿಯ ಎಸ್‍ಎನ್‍ಡಿಪಿ ಸಂಘಟನೆಯ ಮೂಲಕ ವಿವಿಧ ಸ್ವಸಹಾಯ ಸಂಘಗಳು ರಚನೆಯಾಗಬೇಕು. ಇದರಿಂದ ಸಮಾಜದ ಜನರಿಗೆ ಉಪಯೋಗವಾಗಲಿದೆ ಎಂದು ಸಲಹೆ ಸೂಚನೆಗಳನ್ನು ನೀಡಿದರು. ಪೊನ್ನು ಮುತ್ತಪ್ಪ ದೇವಾಲಯ ಹಾಗೂ ಎಸ್‍ಎನ್‍ಡಿಪಿ ಮಾಜಿ ಅಧ್ಯಕ್ಷ ಎ.ಕೆ.ಚಂದ್ರನ್ ಮಾತನಾಡಿ, ಸಂಘಟನೆ ಉತ್ತಮ ರೀತಿಯಲ್ಲಿ ಬೆಳೆದು ಜನರಿಗೆ ಪ್ರಯೋಜನವಾಗಬೇಕು. ಜನಾಂಗದ ಬೆಳವಣಿಗೆಗೆ ಇಂದು ಸಂಘಟನೆ ಅನಿವಾರ್ಯ. ಆದುದರಿಂದ ಪ್ರತಿಯೊಬ್ಬರೂ ಸದಸ್ಯರಾಗುವುದರ ಮೂಲಕ ಸಂಘಟನೆಯನ್ನು ಬಲಪಡಿಸಬೇಕು ಎಂದರು. ಸಂಘದ ಅಧ್ಯಕ್ಷ ಟಿ.ಸಿ.ರಾಜೀವ್ ಅಧ್ಯಕ್ಷತೆ ವಹಿಸಿ ಪ್ರಸ್ತಾರವಿಕವಾಗಿ ಮತನಾಡಿದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಎಸ್‍ಎನ್‍ಡಿಪಿ ಗೌರವ ಕಾರ್ಯದರ್ಶಿ ಪ್ರೇಮಾನಂದ, ನಾಪೋಕ್ಲು ವಿಎಸ್‍ಎಸ್‍ಎನ್ ನಿರ್ದೇಶಕ ಟಿ.ಎ.ಮಿಟ್ಟು, ನಾಪೋಕ್ಲು ಶಾಖೆಯ ಉಪಾಧ್ಯಕ್ಷ ಟಿ.ಆರ್.ಮಣಿ, ಕಬಡಕೇರಿ ಹಾಗೂ ಶಾಖೆಯ ನಿರ್ದೇಶಕರು, ಸದಸ್ಯರು ಪಾಲ್ಗೊಂಡಿದ್ದರು. ರವಿ ಓಂಕಾರ್ ಪ್ರಾರ್ಥಿಸಿದರು. ನಿರ್ದೇಶಕ ವಿನಿಲ್ ಪಪ್ಪು ನಿರೂಪಿಸಿದರು. ಗೌರವ ಕಾರ್ಯದರ್ಶಿ ಟಿ.ಕೆ.ರಘು ವಂದಿಸಿದರು. ಬಳಿಕ ಜರುಗಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯಿತು.
ವರದಿ : ದುಗ್ಗಳ ಸದಾನಂದ.