ಮಡಿಕೇರಿ ಜ.8 NEWS DESK : ದೊಡ್ಡಬಳ್ಳಾಪುರದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಕಬಡ್ಡಿ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲೆಯ ನೈಜ ಪ್ರತಿಭಾನ್ವಿತ ಕಬಡ್ಡಿ ಆಟಗಾರರಿಗೆ ಆಟವಾಡಲು ಅವಕಾಶ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಕುಶಾಲನಗರ ಫ್ರೆಂಡ್ಸ್ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಎಸ್.ಆದಂ ಹಾಗೂ ಕಬಡ್ಡಿ ಆಟಗಾರರು ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಆದಂ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ಜನವರಿ 6ರಿಂದ 8 ರವರೆಗೆ ದೊಡ್ಡಬಳ್ಳಾಪುರದಲ್ಲಿ ರಾಜ್ಯ ಮಟ್ಟದ ಕಬಡ್ಡಿ ಚಾಂಪಿಯನ್ ಶಿಪ್ ಪಂದ್ಯಾವಳಿ ನಡೆದಿದೆ. ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಕೊಡಗಿನ ಪ್ರತಿಭಾವಂತ ಕಬಡ್ಡಿ ಆಟಗಾರರು ಉತ್ಸುಕರಾಗಿದ್ದರು. ಆದರೆ ಆಟಗಾರರ ಆಯ್ಕೆಯು ನಿಯಮಬಾಹಿರವಾಗಿ ನಡೆದಿರುವುದರಿಂದ ಸ್ಥಳೀಯ ಆಟಗಾರರಿಗೆ ಅನ್ಯಾಯವಾಗಿದೆ. ಕೊಡಗಿನ ಆಸಕ್ತ ಆಟಗಾರರು ಕುಶಾಲನಗರದ ಜ್ಞಾನ ಭಾರತಿ ಶಾಲಾ ಮೈದಾನಕ್ಕೆ ತೆರಳಿ ಕೊಡಗು ಜಿಲ್ಲೆಯ ಕಬಡ್ಡಿ ಅಸೋಸಿಯೇಷನ್ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಉತ್ತಮವಾಗಿ ಆಟವಾಡುವ ಆಟಗಾರರನ್ನು ಆಯ್ಕೆ ಮಾಡದೆ ಮತ್ತು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸದ ಆಟಗಾರರನ್ನು ನಿಯಮಬಾಹಿರವಾಗಿ ಕೊಡಗು ತಂಡದ ಆಟಗಾರರೆಂದು ಪ್ರತಿಬಿಂಬಿಸಿ ದೊಡ್ಡಬಳ್ಳಾಪುರಕ್ಕೆ ಕರೆದುಕೊಂಡು ಹೋಗಿ ಆಟವಾಡಿಸಿದ್ದಾರೆ ಎಂದು ಆರೋಪಿಸಿದರು. ಕೊಡಗು ಜಿಲ್ಲೆಯ ನೈಜ ಪ್ರತಿಭಾವಂತ ಆಟಗಾರರಿಗೆ ಆಗಿರುವ ಅನ್ಯಾಯದ ಕುರಿತು ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸಹಕಾರಿ ನೋಂದಣಾಧಿಕಾರಿಗಳಿಗೆ ದೂರು ನೀಡಲಾಗುವುದು. ಪ್ರತಿಭಾನ್ವಿತ ಆಟಗಾರರಿಗೆ ಅನ್ಯಾಯ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಲಾಗುವುದು ಎಂದು ಎಸ್.ಆದಂ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಸಚಿನ್ ಪೂವಯ್ಯ, ಸಿದ್ದಾಪುರದ ವಿ7 ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಹೆಚ್.ಎಸ್.ಸಂತೋಷ್ ಹಾಗೂ ಸದಸ್ಯ ಸಂದೇಶ್ ಪಿ.ವೈ ಉಪಸ್ಥಿತರಿದ್ದರು.