ಸೋಮವಾರಪೇಟೆ ಜ.8 NEWS DESK : ಸಮಾಜಸೇವೆಯಿಂದ ಸಿಗುವ ಸಂತೃಪ್ತಿ ಬೇರೆ ಯಾವುದೇ ವೃತ್ತಿಯಲ್ಲಿ ಸಿಗುವುದಿಲ್ಲ ಎಂದು ಇನ್ನರ್ ವ್ಹೀಲ್ ಕ್ಲಬ್ನ ಜಿಲ್ಲಾಧ್ಯಕ್ಷೆ ವೈಶಾಲಿ ಕುಡ್ವಾ ಹೇಳಿದರು. ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಗೆ ಭೇಟಿ ನೀಡಿ ನಂತರ ಒಕ್ಕಲಿಗರ ಸಂಘದ ಶ್ರೀಗಂಧಹಾಲ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಸಂಪಾದಿಸಿದ ಹಣದಲ್ಲಿ ಒಂದಷ್ಟು ಭಾಗವನ್ನು ಸಮಾಜಸೇವೆಗೆ ಬಳಸಬೇಕು. ತಾಯಿಯಂದಿರು ಗಂಡು ಮಕ್ಕಳಿಗೆ ಸಭ್ಯತೆ ಹಾಗೂ ಮೌಲ್ಯಧಾರಿತ ಬದುಕು ಕಟ್ಟಿಕೊಳ್ಳುವ ಪಾಠವನ್ನು ಹೇಳಿಕೊಡಬೇಕು ಎಂದು ಮನವಿ ಮಾಡಿದ ಅವರು, ಹೆಣ್ಣು ಮಕ್ಕಳು ತಮ್ಮ ರಕ್ಷಣೆಗೆಬೇಕಾದ ವಿದ್ಯೆಯನ್ನು ಕಲಿತುಕೊಳ್ಳಬೇಕು. ಪೋಷಕರು ಅಂತಹ ವಿದ್ಯೆ ಕಲಿಯಲು ಪ್ರೋತ್ಸಾಹ ನೀಡಬೇಕು. ಅತ್ಯಾಚಾರದಂತಹ ಘಟನೆಗಳು ನಡೆದಾಗ ಪ್ರತಿಭಟನೆ ಮಾಡಿ ಪ್ರಯೋಜನವಿಲ್ಲ. ಬಲಿಷ್ಠ ಕಾನೂನು ಅವಶ್ಯಕವಾಗಿದೆ ಎಂದು ಹೇಳಿದರು. ಸೋಮವಾರಪೇಟೆ ಕ್ಲಬ್ ಉತ್ತಮ ಜನಪರ ಕಾರ್ಯಕ್ರಮಗಳನ್ನು ನಿರ್ವಹಿಸಿದೆ ಎಂದು ಶ್ಲಾಘೀಸಿದರು. ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಅಳವಡಿಸಲಾಗಿದ್ದ ಡಿಜಿಟಲ್ ಗಡಿಯಾರ ಹಾಗೂ ಫೋಕಸ್ ಲೈಟ್ ಗೆ ಚಾಲನೆ ನೀಡಲಾಯಿತು. ಕ್ಲಬ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ವೇದಿಕೆಯಲ್ಲಿ ಕ್ಲಬ್ ಅಧ್ಯಕ್ಷೆ ಸಂಗೀತ ದಿನೇಶ್, ಉಪಾಧ್ಯಕ್ಷೆ ತನ್ಮಯಿ ಪ್ರವೀಣ್, ಕಾರ್ಯದರ್ಶಿ ಸುಮಲತ, ಪುರುಷೋತ್ತಮ, ಖಜಾಂಚಿ ಸೌಮ್ಯ ಸತೀಶ್, ಐಎಸ್ಒ ಅಮೃತ ಕಿರಣ್, ಪದಾಧಿಕಾರಿಗಳಾದ ಲತಾ ನಾಗೇಶ್, ಲತಾ ಮಂಜು, ಆಶಾ ಮೋಹನ್ ಇದ್ದರು.