ನಾಪೋಕ್ಲು ಜ.8 NEWS DESK : ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರಿಗೂ ಶಿಕ್ಷಕರಷ್ಟೇ ಜವಾಬ್ದಾರಿ ಇರುತ್ತದೆ. ಪೋಷಕರು ತಮ್ಮ ಮಕ್ಕಳ ಮೇಲೆ ಸದಾ ಕಾಳಜಿಯ ಕಣ್ಣಿಟ್ಟಿರಬೇಕು ಎಂದು ಮಡಿಕೇರಿಯ ಜಿಲ್ಲಾ ನ್ಯಾಯಾಲಯದ ವಕೀಲರು ಹಾಗೂ ಬಾರ್ ಕೌನ್ಸಿಲ್ ಅಧ್ಯಕ್ಷ ಎಂ.ಎ.ನಿರಂಜನ್ ಹೇಳಿದರು. ಮೂರ್ನಾಡಿನ ಮಾರುತಿ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಕ್ರೀಡೋತ್ಸವದ ಅಂಗವಾಗಿ ವಿದ್ಯಾರ್ಥಿ ನಾಯಕರಿಂದ ಗೌರವ ವಂದನೆ ಹಾಗೂ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ಸಂಪೂರ್ಣ ದೂರವಿರಬೇಕು. ದುಶ್ಚಟಗಳಿಗೆ ಬಲಿಯಾಗದಂತೆ ಉತ್ತಮ ಗೆಳೆಯರ ಒಡನಾಟವನ್ನು ಹೊಂದಿರಬೇಕು. ಶೈಕ್ಷಣಿಕವಾಗಿ ದೊರೆಯುವ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಮಾನವೀಯತೆಯೊಂದಿಗೆ ಬದುಕು ಮತ್ತು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮಾರುತಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಮುಂಡಂಡ ಕೆ.ಅಪ್ಪಚ್ಚು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ, ಪೋಷಕರ ನಿರಂತರ ಸಹಕಾರದಿಂದ ಶಾಲೆ ಪ್ರಗತಿಯನ್ನು ಹೊಂದುತ್ತಿದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಅವಧಿಯಲ್ಲಿ ಉತ್ತಮ ಹವ್ಯಾಸದ ಜೊತೆಗೆ ತಮ್ಮಲ್ಲಿರುವ ಪ್ರತಿಭೆಯನ್ನು ಬಳಸಿಕೊಂಡು ಮುಂದೆ ಬರಬೇಕು ಎಂದರು. ಈ ಸಂದರ್ಭ ವಿದ್ಯಾ ಸಂಸ್ಥೆ ಆಡಳಿತ ಮಂಡಳಿ ಉಪಾಧ್ಯಕ್ಷ ಸಿ.ಡಿ.ಗಿಲ್ ಸೋಮಯ್ಯ, ಗೌರವ ಕಾರ್ಯದರ್ಶಿ ಎಂ.ಎಂ.ಅರುಣ್ ಅಪ್ಪಚ್ಚು, ನಿರ್ದೇಶಕರಾದ ಬಡುವಂಡ ನೀಲಮ್ಮ ಮುದ್ದಪ್ಪ, ಮುಂಡಂಡ ನೀಲವ್ವ ಮುತ್ತಣ್ಣ, ಸದಸ್ಯರಾದ ಬಡುವಂಡ ಕನ್ನು ಅಪ್ಪಚ್ಚು, ಚೇದ್ರಿಮಾಡ ರೂಪ ಸೋಮಯ್ಯ, ಉಪಪ್ರಾಂಶುಪಾಲರಾದ ಎಂ.ಡಿ.ಹೇಮಾವತಿ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕ್ರೀಡೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಆಯೋಜಿಸಿದ ಸ್ಪರ್ಧೆಗಳಲ್ಲಿ ಮತ್ತು ಪಾಠದಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಟ್ರೋಫಿ ಹಾಗೂ ಪ್ರೋತ್ಸಾಹ ಬಹುಮಾನ, ಪದಕಗಳನ್ನು ನೀಡಿ ಪುರಸ್ಕರಿಸಲಾಯಿತು. ದಿನದ ಪ್ರಯುಕ್ತ ಸಂಸ್ಥೆಯ ಪೋಷಕರಿಗೆ ಪ್ರತ್ಯೇಕವಾಗಿ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ, ಪಥಸಂಚಲನ ನೆರೆದಿದ್ದವರು ಗಮನ ಸೆಳೆಯಿತು. ಸಂಸ್ಥೆಯ ಪ್ರಾಂಶುಪಾಲರಾದ ಎಂ.ಎಂ.ಸುಮಿತ ಸಂಸ್ಥೆಯ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳ ಸಾಧನೆಯ ವಾರ್ಷಿಕ ವರದಿಯನ್ನು ಮಂಡಿಸಿದರು.
ವರದಿ : ದುಗ್ಗಳ ಸದಾನಂದ.