ಮಡಿಕೇರಿ ಜ.8 NEWS DESK : ತಾನು ಮಾಡುವ ಸೇವೆ ಶಾಶ್ವತವಾಗಿ ಉಳಿಯಬೇಕು, ಬಡ ಕುಟುಂಬಕ್ಕೆ ಆಸರೆಯಾಗಬೇಕು ಎನ್ನುವ ಅಭಿಲಾಷೆಯಿಂದ ಅಪರೂಪದ ದಾನಿಯೊಬ್ಬರು ಬಡ ಕುಟುಂಬವೊಂದಕ್ಕೆ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಸಾಮಾಜಿಕ ಕಳಕಳಿಯೊಂದಿಗೆ ಹುಟ್ಟು ಹಬ್ಬದಂದು ಅದನ್ನು ಹಸ್ತಾಂತರ ಮಾಡಿದ ಅಪರೂಪದ ಕ್ಷಣಕ್ಕೆ ವಿರಾಜಪೇಟೆಯ ತೆರ್ಮೆಕಾಡು ಪೈಸಾರಿ ಸಾಕ್ಷಿಯಾಯಿತು. ಆರ್ಜಿ ಗ್ರಾಮದ ನಿವಾಸಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರು, ವಿದ್ಯುತ್ ಗುತ್ತಿಗೆದಾರರು ಮತ್ತು ತಾಲ್ಲೂಕು ಬಿಲ್ಲವ ಸೇವಾ ಸಂಘದ ಅದ್ಯಕ್ಷ ಬಿ.ಎಂ.ಗಣೇಶ್ ಅವರು ತಮ್ಮ ಹುಟ್ಟು ಹಬ್ಬದ ದಿನದಂದು ತೆರ್ಮೆಕಾಡು ಪೈಸಾರಿಯ ಶಂಕ್ರು ಹಾಗೂ ವಾಸಂತಿ ಕುಟುಂಬಕ್ಕೆ ತಾವು ನಿರ್ಮಿಸಿಕೊಟ್ಟ ಮನೆಯನ್ನು ಕೀಲಿ ಕೈ ನೀಡುವ ಮೂಲಕ ಹಸ್ತಾಂತರಿಸಿದರು. ಇದು ಇವರು ಬಡ ಮಂದಿಗೆ ನೀಡುತ್ತಿರುವ ಮೂರನೇ ಮನೆಯಾಗಿದೆ. ಈ ಹಿಂದೆ ಪೆರುಂಬಾಡಿ ಗ್ರಾಮದ ಕಾಳ ಮತ್ತು ಕೆದಮುಳ್ಳೂರು ಗ್ರಾಮ ಪಂಚಾಯ್ತಿಯ ತೆರ್ಮೆಮೊಟ್ಟೆ ಗ್ರಾಮದ ನಿವಾಸಿ ಬಿ.ಎಂ.ಕಮಲ ಅವರುಗಳಿಗೆ ಮನೆ ನಿರ್ಮಿಸಿ ಸಾರ್ವಜನಿಕರ ಸಮ್ಮುಖದಲ್ಲಿ ಹಸ್ತಾಂತರ ಮಾಡಿದ್ದರು. ಅಲ್ಲದೆ ಒಟ್ಟು 6 ಮನೆಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ಕೂಡ ಕಲ್ಪಸಿಕೊಟ್ಟಿದ್ದಾರೆ. ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರ್ಮೆಕಾಡು ಪೈಸಾರಿಯ ದಿನಕೂಲಿ ಕಾರ್ಮಿಕರಾದ ವೈ.ಎಂ.ಶಂಕ್ರು ಹಾಗೂ ವೈ.ಎಸ್.ವಾಸಂತಿ ದಂಪತಿ ಮೂವರು ಮಕ್ಕಳೊಂದಿಗೆ ಬಡತನದ ಬದುಕು ಸಾಗಿಸುತ್ತಿದ್ದಾರೆ. ಮಣ್ಣಿನ ಗೋಡೆ, ಪ್ಲಾಸ್ಟಿಕ್ ಹೊದಿಕೆಯೊಂದಿಗೆ ನಿರ್ಮಿಸಲಾಗಿದ್ದ ಮನೆಯಲ್ಲಿ ಇವರು ವಾಸವಿದ್ದರು. ಇದನ್ನು ಮನಗಂಡ ಬಿ.ಎಂ.ಗಣೇಶ್ ಅವರು 1.60 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿ ಬಡ ಕುಟುಂಬಕ್ಕೆ ಹುಟ್ಟು ಹಬ್ಬದ ಕೊಡುಗೆಯಾಗಿ ಹಸ್ತಾಂತರ ಮಾಡಿದರು. ಈ ಸಂದರ್ಭ ಮಾತನಾಡಿದ ಬಿ.ಎಂ.ಗಣೇಶ್ ಅವರು ನನ್ನ 50 ನೇ ಹುಟ್ಟು ಹಬ್ಬದ ಆಚರಣೆ ಜೀವನದ ಸ್ಮರಣೀಯ ದಿನವಾಗಬೇಕು ಎಂಬ ಉದ್ದೇಶದಿಂದ ಬಡ ಕುಟುಂಬಕ್ಕೆ ಮನೆ ನಿರ್ಮಾಣ ಮಾಡಿಕೊಟ್ಟಿದ್ದೇನೆ. ಅಸಹಾಯಕರನ್ನು ಸಮಾಜ ಗುರುತಿಸುವಂತಾಗಬೇಕು, ಸಮಾಜವು ಸಹಾಯಹಸ್ತ ನೀಡುವಂತಾಗಬೇಕು ಎಂದು ಹೇಳಿದರು. ಮನೆ ಹಸ್ತಾಂತರ ಮಾಡಿದ ನಂತರ ವಿದ್ಯಾ ವಿನಾಯಕ ಸೇವಾ ಸಮಿತಿಯ ಸದಸ್ಯರು, ಸ್ನೇಹಿತರು ಹಾಗೂ ಕುಟುಂಬ ವರ್ಗದವರೊಂದಿಗೆ ಗಣೇಶ್ ಅವರು ಸಿಹಿ ಹಂಚಿ ಹುಟ್ಟು ಹಬ್ಬ ಆಚರಿಸಿಕೊಂಡರು. ಬಿ.ಎಂ.ಗಣೇಶ್ ಅವರ ತಂದೆ ಬಿ.ಆರ್.ಮಂಜಪ್ಪ, ತಾಯಿ ಬಿ.ಎಂ.ಪಾರ್ವತಿ, ಪತ್ನಿ ಎನ್.ಪಿ.ಸುಮಾ, ತಮ್ಮ ಬಿ.ಎಂ.ರಮೇಶ್, ಗ್ರಾಮದ ಹಿರಿಯರಾದ ಟಿ.ಕೆ.ದೇವಯ್ಯ, ಆರ್ಜಿ ಗ್ರಾ.ಪಂ ಸದಸ್ಯ ಸುನೀತಾ ಹರಿದಾಸ್ ಮತ್ತಿತರರು ಹಾಜರಿದ್ದರು.