ಸೋಮವಾರಪೇಟೆ ಜ.8 NEWS DESK : ಸೋಮವಾರಪೇಟೆ ತಾಲ್ಲೂಕು ಹೋಂಸ್ಟೇ ಅಸೋಸಿಯೇಷನ್ ಪದಾಧಿಕಾರಿಗಳು ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಶಾಸಕ ಡಾ.ಮಂತರ್ ಗೌಡ ಅವರೊಂದಿಗೆ ಚರ್ಚಿಸಿದರು. ಶಾಸಕ ಕಚೇರಿಯಲ್ಲಿ ಶಾಸಕರನ್ನು ಭೇಟಿ ಮಾಡಿದ ಅಸೋಸಿಯೇಷನ್ ಪ್ರಮುಖರು, ತಾಲ್ಲೂಕಿನಾದ್ಯಂತ ಇರುವ ಪ್ರವಾಸಿ ತಾಣಗಳಿಗೆ ಮೂಲಭೂತ ಸೌಕರ್ಯ, ರಸ್ತೆ ಸೇರಿದಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು. ಮಾಟ್ನಳ್ಳಿ ಗ್ರಾಮದಲ್ಲಿರುವ ಮೂಖ ಬೆಟ್ಟ ಅಭಿವೃದ್ಧಿ ಮತ್ತು ಸೂರ್ಯೋದಯ, ಸೂರ್ಯಾಸ್ತ ವೀಕ್ಷಣಾ ಗ್ಯಾಲರಿ, ರಸ್ತೆ ದರಸ್ತಿ ಮತ್ತು ರಸ್ತೆ ಅಭಿವೃದ್ಧಿ ಪಡಿಸಬೇಕು, ಕೋಟೆಬೆಟ್ಟದಲ್ಲಿ ಪ್ರೇಕ್ಷಣೀಯ ಸ್ಥಳಗಳ ನಾಮಫಲಕ ಅಳವಡಿಸಬೇಕು, ಅಲ್ಲಿನ ಸ್ವಚ್ಚತೆ ಕಾಪಾಡಲು ವ್ಯವಸ್ಥೆಗಳನ್ನು ಮಾಡಬೇಕು, ಪುಷ್ಪಗಿರಿ ಬೆಟ್ಟದಲ್ಲಿ ವೀಕ್ಷಣಾ ಗ್ಯಾಲರಿಯನ್ನು ಅಳವಡಿಸಬೇಕು, ಮಲ್ಲಳ್ಳಿ ಜಲಪಾತದಲ್ಲಿ ಸೂಚನಾ ಫಲಕ ಹಾಗೂ ಮೆಟ್ಟಿಲುಗಳ ಕಂಬಿಗಳನ್ನು ದುರಸ್ತಿ ಪಡಿಸಬೇಕು ಮತ್ತು ಜಿಪ್ ಲೈನ್ ಅನ್ನು ಅಳವಡಿಸಬೇಕು, ಕಿರಗಂದೂರು ಗ್ರಾಮದ ಮಕ್ಕಳ ಗುಡಿ ಬೆಟ್ಟದಲ್ಲಿ ವೀಕ್ಷಣಾ ಗ್ಯಾಲರಿಯನ್ನು ಅಳವಡಿ, ರಸ್ತೆಯನ್ನು ದುರಸ್ತಿ ಪಡಿಸಬೇಕು, ಕಲ್ಕಂದೂರು ಗ್ರಾಮದಲ್ಲಿ ಪುರಾತನ ಜೈನ ಮಂದಿರವಿದ್ದು ಅದರ ಜೀರ್ಣೋದ್ಧಾರಕ್ಕೆ ಕ್ರಮ ಕೈಗೊಳ್ಳಬೇಕು, ಸೋಮವಾರಪೇಟೆ ತಾಲೂಕಿನ ಪ್ರವಾಸಿ ತಾಣಗಳ ಸೂಚನಾ ಫಲಕಗಳನ್ನು ಅಳವಡಿಸಬೇಕು, ಬೇಳೂರು ಗಾಲ್ಫ್ ಮೈದಾನವನ್ನು ಕ್ಲಬ್ನ ಅನುಮತಿ ಪಡೆದು ಪ್ರವಾಸಿಗರಿಗೆ ನಿಗಧಿತ ಶುಲ್ಕವನ್ನು ವಿಧಿಸಿ ವೀಕ್ಷಣೆಗೆ ಮಾಡಲು ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರು. ಅಸೋಸಿಯೇಷನ್ ಅಧ್ಯಕ್ಷ ಸಿ.ಕೆ.ರೋಹಿತ್, ಉಪಾಧ್ಯಕ್ಷ ಯೋಗೇಶ್ ಪಟೇಲ್, ಕಾರ್ಯದರ್ಶಿ ಎಸ್.ಎಲ್.ಅಭಿನಂದನ್, ಖಜಾಂಚಿ ಡಿ.ಪಿ.ಪ್ರೀತಮ್ ಮತ್ತಿತರರು ಇದ್ದರು. ಮನವಿಗೆ ಪ್ರತಿಕ್ರಿಯೆ ನೀಡಿದ ಶಾಸಕರು, ಮಲ್ಲಳ್ಳಿ ಜಲಪಾತ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ಹಂತಹಂತವಾಗಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಅನುದಾನ ತರಲಾಗುವುದು. ಕೆಲ ಸೇತುವೆ, ರಸ್ತೆಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ನಿಯೋಗಕ್ಕೆ ಭರವಸೆ ನೀಡಿದರು.