ಸೋಮವಾರಪೇಟೆ ಜ.8 NEWS DESK : ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಎಸ್.ಬಿ.ಭರತ್ ಕುಮಾರ್ ಮತ್ತು ಉಪಾಧ್ಯಕ್ಷರಾಗಿ ಹೆಚ್.ಎಸ್.ನೇತ್ರಾವತಿ ಆಯ್ಕೆಯಾಗಿದ್ದಾರೆ. ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಭರತ್ ಕುಮಾರ್ ಮತ್ತು ಕಾಂಗ್ರೆಸ್ ಬೆಂಬಲಿತ ಹೆಚ್.ಆರ್.ಸುರೇಶ್ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ನೇತ್ರಾವತಿ ಮತ್ತು ಪಕ್ಷೇತರವಾಗಿ ಸ್ಪರ್ಧಿಸಿ ಗೆಲವು ಸಾಧಿಸಿದ್ದ ಬಿ.ಪಿ.ಮೊಗಪ್ಪ ನಾಮಪತ್ರ ಸಲ್ಲಿಸಿದ್ದರು. ಆಕಾಂಕ್ಷಿಗಳು ನಾಮಪತ್ರ ವಾಪಾಸ್ಸು ಪಡೆಯದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಬಿ.ಜೆ.ಸಂದೀಪ್ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 8-5 ಮತಗಳ ಅಂತರದಿಂದ ಗೆಲವು ಸಾಧಿಸಿದರು. ಕಳೆದ ಸಾಲಿನ ಅಧ್ಯಕ್ಷರಾಗಿದ್ದ ಹೆಚ್.ಆರ್.ಸುರೇಶ್ ಕೂಡ 5 ಮತಗಳನ್ನು ಪಡೆದರು. 13 ಸದಸ್ಯರನ್ನು ಹೊಂದಿರುವ ಆಡಳಿತ ಮಂಡಳಿಗೆ 8 ಬಿಜೆಪಿ, 4 ಕಾಂಗ್ರೆಸ್ ಬೆಂಬಲಿತರು ಹಾಗೂ ಓರ್ವ ಪಕ್ಷೇತರರು ಆಯ್ಕೆಯಾಗಿದ್ದರು. ಚುನಾವಣೆಯ ಸಂದರ್ಭ ಆಡಳಿತ ಮಂಡಳಿ ನಿರ್ದೇಶಕರುಗಳಾದ ಕೆ.ಕೆ.ಶಿವಪ್ರಕಾಶ್, ಜಿ.ಎಂ.ಹೂವಯ್ಯ, ಎ.ಎಸ್.ನವೀನ್ ಕುಮಾರ್, ಜಿ.ಎಸ್.ಪ್ರಸನ್ನ, ಎಸ್.ಸಿ.ಸುನಿತಾ, ಕೆ.ಜಿ.ದಿನೇಶ್, ಜಿ.ಬಿ.ಗಿರೀಶ್, ಜಿ.ಈ.ಸುರೇಶ್, ಕೆ.ಎಲ್.ರಕ್ಷಿತ್, ಸಿಇಒ ಕಿರಣ್ ಇದ್ದರು. ನೂತನ ಅಧ್ಯಕ್ಷ ಎಸ್.ಬಿ.ಭರತ್ ಕುಮಾರ್ ಮಾತನಾಡಿ, ಸಹಕಾರ ಸಂಘ ಮುಂದಿನ ದಿನಗಳಲ್ಲೂ ರೈತಸ್ನೇಹಿಯಾಗಿರುತ್ತದೆ. ಸಂಘದ ಸದಸ್ಯರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.