ಕುಶಾಲನಗರ ಜ.8 NEWS DESK : ಅನುಗ್ರಹ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವವು ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಕೂಡಿಗೆಯ ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎನ್.ಪುಷ್ಪ ಮಾತನಾಡಿ, ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಸಂಸ್ಕಾರ ಮತ್ತು ವಿನಯತೆಯನ್ನು ಬೆಳೆಸಿಕೊಂಡಾಗ ಮಾತ್ರ ಕಲಿತ ವಿದ್ಯೆ ಸಾರ್ಥಕವಾಗಿ ಸಮಾಜದಲ್ಲಿ ಅತ್ಯುತ್ತಮ ಪ್ರಜೆಯಾಗುವುದಕ್ಕೆ ಸಾಧ್ಯ.ಶಿಕ್ಷಣವು ಅಂಕ ಆಧಾರಿತವಾಗುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಕಾಲೇಜಿನ ವಿದ್ಯಾರ್ಥಿಗಳು ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಾಡಿದ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅನುಗ್ರಹ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷ ಎಸ್.ಕೆ.ಸತೀಶ್, ವಿದ್ಯಾರ್ಥಿಗಳು ಕೀಳರಿಮೆಯಿಂದ ಹೊರಬಂದು ಆತ್ಮವಿಶ್ವಾಸವನ್ನು ಬೆಳೆಸಿಕೊಂಡಾಗ ಮಾತ್ರ ಮುಂದೆ ಸಮಾಜದಲ್ಲಿ ಅತ್ತ್ಯುನ್ನತ ಹುದ್ದೆಯನ್ನು ಅಲಂಕರಿಸುವುದಕ್ಕೆ ಸಾಧ್ಯ. ವಿದ್ಯಾರ್ಥಿಗಳು ಕೇವಲ ಅಂಕ ಪಡೆಯುವ ಯಂತ್ರಗಳಾಗದೆ, ವ್ಯಕ್ತಿತ್ವವನ್ನು ವಿಕಸನ ಮಾಡಿಕೊಳ್ಳಬೇಕಾಸ ಅಗತ್ಯವನ್ನು ನೀತಿ ಕಥೆಯ ಮೂಲಕ ಸಾದರ ಪಡಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಹೆಚ್ ಬಿ.ಲಿಂಗಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಉಪಪ್ರಾಂಶುಪಾಲೆ ಹರ್ಷಿತ, ಪದವಿ ಪೂರ್ವ ವಿಭಾಗದ ಉಪಪ್ರಾಂಶುಪಾಲೆ ಶ್ವೇತ, ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಸೀಮಾ, ವಿದ್ಯಾರ್ಥಿ ಸಮಿತಿಯ ಸಂಚಾಲಕಿ ಸೌಮ್ಯ ಉಪಸ್ಥಿತರಿದ್ದರು. ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿ, ವರ್ಷದ ಅತ್ಯುತ್ತಮ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಗೌರವಿಸಲಾಯಿತು. ಕಾಲೇಜಿನ ವಾರ್ಷಿಕ ವರದಿಯನ್ನು ಕನ್ನಡ ಉಪನ್ಯಾಸಕಿ ಪೃಥ್ವಿ ಮಂಡಿಸಿದರು. ಬಹುಮಾನ ವಿಜೇತರ ಪಟ್ಟಿಯನ್ನು ಪ್ರವೀಣ ಮತ್ತು ಅಭಿಷೇಕ್ ವಾಚಿಸಿದರು. ಶ್ವೇತಾ ಸ್ವಾಗತಿಸಿ, ರೇಷ್ಮ ವಂದಿಸಿದರು. ಉಪನ್ಯಾಸಕಿ ರಕ್ಷಾಪ್ರಿಯ ನಿರೂಪಿದರು.