ಮಡಿಕೇರಿ ಜ.8 NEWS DESK : ನಗರಸಭೆ ವ್ಯಾಪ್ತಿಯ ಕರ್ಣಂಗೇರಿ ಗ್ರಾಮ ಬಳಿಯ ಉಕ್ಕುಡದಲ್ಲಿ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ಶಾಸಕರಾದ ಡಾ.ಮಂತರ್ ಗೌಡ ಅವರು ಬುಧವಾರ ಚಾಲನೆ ನೀಡಿದರು. ಗೃಹಭಾಗ್ಯ ಯೋಜನೆಯಡಿ ತಲಾ 7.50 ಲಕ್ಷ ರೂ. ವೆಚ್ಚದಲ್ಲಿ 12 ಮನೆಗಳಿಗೆ ಸುಮಾರು 90 ಲಕ್ಷ ರೂ. ವೆಚ್ಚದಲ್ಲಿ ನೆಲಮಹಡಿ ಸೇರಿ ಮೂರು ಅಂತಸ್ತಿನ ಹನ್ನೆರಡು ಮನೆಗಳನ್ನು ಒಳಗೊಂಡ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಗೆ ಶಾಸಕರಾದ ಮಂತರ್ ಗೌಡ ಅವರು ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಮಂತರ್ ಗೌಡ ಅವರು ಸರ್ಕಾರ ಪೌರಕಾರ್ಮಿಕರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸಿದೆ. ಪೌರಕಾರ್ಮಿಕರು ಪ್ರತಿ ನಿತ್ಯ ನಗರ ಪಟ್ಟಣ ಪ್ರದೇಶದಲ್ಲಿ ಸ್ವಚ್ಛತೆಗೆ ದುಡಿಯುತ್ತಾರೆ. ಇವರಿಗೆ ಮೂಲಸೌಲಭ್ಯ ಕಲ್ಪಿಸುವುದು ಹೆಚ್ಚಿನ ಆದ್ಯತೆಯಾಗಿದೆ. ಆ ನಿಟ್ಟಿನಲ್ಲಿ ಶೀಘ್ರ ಮನೆ ನಿರ್ಮಾಣದ ಕಾಮಗಾರಿ ಆರಂಭಿಸಿ, ಪೂರ್ಣಗೊಳಿ¸ಬೇಕು ಎಂದು ಡಾ.ಮಂತರ್ ಗೌಡ ಅವರು ತಾಕೀತು ಮಾಡಿದರು. ಸರ್ಕಾರ ಎಲ್ಲಾ ವರ್ಗದ ಜನರಿಗೆ ಕನಿಷ್ಠ ಮೂಲ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಿದೆ. ಆ ನಿಟ್ಟಿನಲ್ಲಿ ಪೌರಕಾರ್ಮಿಕರಿಗೆ ಆದ್ಯತೆ ಮೇಲೆ ವಸತಿ ಹಾಗೂ ಇತರೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.
ಉಕ್ಕುಡದಲ್ಲಿ ಅಂಬೇಡ್ಕರ್ ಭವನವನ್ನು ಸಹ ನಿರ್ಮಿಸಬೇಕಿದೆ. ಆ ನಿಟ್ಟಿನಲ್ಲಿ 2 ಎಕರೆ ಜಾಗವನ್ನು ಕಾಯ್ದಿರಿಸಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು. ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಭೇಟಿ ಮಾಡಿ ಹೆಚ್ಚಿನ ಅನುದಾನ ಬಿಡುಗಡೆಗೆ ಮನವಿ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಶಾಸಕರು ತಿಳಿಸಿದರು. ಉಕ್ಕುಡ ಜಾಗಕ್ಕೆ ಬರುವ ರಸ್ತೆ ಮಾರ್ಗವನ್ನು ಅಗಲೀಕರಣ ಮಾಡಬೇಕು. ಈಗಾಗಲೇ ಪೈಸಾರಿ ಜಾಗದಲ್ಲಿ ವಾಸಿಸುತ್ತಿರುವವರಿಗೆ ಜಾಗ ಹಕ್ಕುಪತ್ರ ನೀಡುವಂತಾಗಬೇಕು. ನಿವೇಶನ ರಹಿತರಿಗೂ ನಿವೇಶನ ಒದಗಿಸುವಂತಾಗಬೇಕು ಎಂದು ಸಲಹೆ ನೀಡಿದರು. ಬಳಿಕ ನಗರೋತ್ಥಾನ 4ನೇ ಹಂತದಡಿ ಪಿಕೆಜಿಬಿ ನಿವೇಶನಕ್ಕೆ ಸಂಪರ್ಕ ಕಲ್ಪಿಸುವ ಸಿಸಿರಸ್ತೆ 218 ಮೀ. ಉದ್ದ 12 ಲಕ್ಷ ರೂ.. ಪಿಕೆಜಿಬಿ ಜಾಗಕ್ಕೆ ಸಂಪರ್ಕ ಕಲ್ಪಿಸುವ ಸಿಸಿಉಪರಸ್ತೆ 120 ಮೀ. ಉದ್ದ 6.75 ಲಕ್ಷ ರೂ. ಪಿಕೆಜಿಬಿ ಸೈಟ್ ವ್ಯಾಪ್ತಿಯಲ್ಲಿ ಮಳೆ ನೀರು ಚರಂಡಿ ನಿರ್ಮಾಣ ಕಾಮಗಾರಿ 200 ಮೀ., 10 ಲಕ್ಷ ರೂ. ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ 5 ಲಕ್ಷ ರೂ. ಗೃಹಭಾಗ್ಯ ಸೇರಿದಂತೆ ಒಟ್ಟು 123.75 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಶಾಸಕರಾದ ಡಾ.ಮಂತರ್ಗೌಡ ಅವರು ಚಾಲನೆ ನೀಡಿದರು. ನಗರದ ಗೌಳಿಬೀದಿಯಲ್ಲಿರುವ ಚೆರಿಯಮನೆ ಪೊನ್ನಪ್ಪ ಅವರ ಆಟದ ಮೈದಾನ/ ಉದ್ಯಾನವನ ಅಭಿವೃದ್ಧಿಗೆ ಶಾಸಕರು ಚಾಲನೆ ನೀಡಿದರು. ಈಗಾಗಲೇ ನಗರಸಭೆ ವತಿಯಿಂದ 2.50 ಲಕ್ಷ ರೂ.ಗೆ ಅನುಮೋದನೆ ದೊರೆತಿದೆ. ಹಾಗೆಯೇ ಶಾಸಕರ ನಿಧಿಯಡಿ 5 ಲಕ್ಷ ರೂ.ವನ್ನು ಬಿಡುಗಡೆ ಮಾಡಲಾಗುವುದು. ಚೆರಿಯಮನೆ ಪೊನ್ನಪ್ಪ ಅವರು ಆಟದ ಮೈದಾನಕ್ಕೆ ಜಾಗ ನೀಡಿದ್ದಾರೆ. ಆ ನಿಟ್ಟಿನಲ್ಲಿ ಈ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗುವುದು. ಸ್ಥಳೀಯರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಮಲ್ಲಳ್ಳಿ ಜಲಪಾತ ಅಭಿವೃದ್ಧಿ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕರಾದ ಡಾ.ಮಂತರ್ ಗೌಡ ಅವರು ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ ಅವರ ಜತೆ ಈಗಾಗಲೇ ಚರ್ಚಿಸಲಾಗಿದೆ. ಆ ನಿಟ್ಟಿನಲ್ಲಿ ಕೇಬಲ್ ಕಾರ್ ಅಳವಡಿಕೆಗೆ ಅವಕಾಶವಿದ್ದು, ಪಿಪಿಟಿ ಮಾದರಿಯಲ್ಲಿ ಅನುಷ್ಠಾನಗೊಳಿಸಬೇಕಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ವಿಧಾನಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ನಗರಸಭಾ ಸದಸ್ಯರಾದ ಅರುಣ್ ಶೆಟ್ಟಿ, ಸತೀಶ್, ಸಬಿತಾ, ಜಗದೀಶ್, ಸದಾ, ಮುಡಾ ಸದಸ್ಯರಾದ ಚಂದ್ರಶೇಖರ್, ನಗರಸಭೆ ಮಾಜಿ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಜುಲೈಕಾಬಿ, ಪ್ರಮುಖರಾದ ಟಿ.ಪಿ.ರಮೇಶ್, ಸುರಯ್ಯ ಅಬ್ರಾರ್, ನವೀನ್ ಅಂಬೆಕಲ್ಲು, ಪೌರಾಯುಕ್ತರಾದ ಎಚ್.ಆರ್.ರಮೇಶ್, ನಗರಸಭೆ ಎಂಜಿನಿಯರ್ ಸತೀಶ್, ಹೇಮಂತ್, ಇತರರು ಇದ್ದರು.