ಮಡಿಕೇರಿ ಜ.11 NEWS DESK : ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸಮಿತಿ ವತಿಯಿಂದ ನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿ 35ನೇ ವರ್ಷದ ಮಕರ ಸಂಕ್ರಾಂತಿ ಮಹೋತ್ಸವ ಜ.14 ರಂದು ನಡೆಯಲಿದೆ ಎಂದು ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ.ಸುಧೀರ್ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.14ರಂದು ನಡೆಯುವ ಮಕರ ಸಂಕ್ರಾಂತಿ ಮಹೋತ್ಸವಕ್ಕೆ ಜಿಲ್ಲೆಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿಕೊಡಬೇಕು ಎಂದು ಮನವಿ ಮಾಡಿದರು. ಜ.13ರಂದು ಬೆಳಗ್ಗೆ 8 ಗಂಟೆಗೆ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ತುಪ್ಪಾಭಿಶೇಕ ಇತ್ಯಾದಿ ಸೇವೆ ನಡೆಯಲಿದೆ. ಜ.14ರ ಬೆಳಗ್ಗೆ 6.30 ಗಂಟೆಗೆ ನಿರ್ಮಾಲ್ಯ ವಿಸರ್ಜನೆ, ಉಷಾಪೂಜೆ, 7 ಗಂಟೆಗೆ ಮುತ್ತಪ್ಪ ಮತ್ತು ಸುಬ್ರಹ್ಮಣ್ಯ ದೇವರ ಪೂಜೆ, 7.30ರಿಂದ ಪಂಚಾಮೃತಾಭಿಷೇಕ, ತುಪ್ಪಾಭಿಷೇಕ, ಕ್ಷೀರಾಭಿಷೇಕ, ಭಸ್ಮಾಭಿಷೇಕ, ಎಳನೀರಭಿಷೇಕ, ಪುಷ್ಪಾರ್ಚನೆ ನಡೆಯಲಿದೆ. ಬೆಳಿಗ್ಗೆ 8.30ಕ್ಕೆ ಶ್ರೀ ಕುಟ್ಟಿಚಾತನ್ ವೆಳ್ಳಾಟಂ, 9 ಗಂಟೆಗೆ ಮುತ್ತಪ್ಪ ವೆಳ್ಳಾಟಂ, 10 ಗಂಟೆಗೆ ಶ್ರೀ ಪೋದಿ ದೇವರ ವೆಳ್ಳಾಟಂ ನಡೆಯಲಿದೆ ಎಂದು ಮಾಹಿತಿ ನೀಡಿದರು. ಬೆಳಗ್ಗೆ 10.30ಕ್ಕೆ ಶ್ರೀ ಅಯ್ಯಪ್ಪ ದೇವರ ಅಲಂಕಾರ ಪೂಜೆ, 11 ಗಂಟೆಗೆ ಉತ್ಸವ ಮೂರ್ತಿಯ ಕ್ಷೇತ್ರ ಪ್ರದಕ್ಷಿಣೆ ನಡೆಯಲಿಗು, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6ರಿಂದ ಭಜನೆ, 7ರಿಂದ ಅಲಂಕಾರ ಪೂಜೆ ಮತ್ತು ಪಡಿಪೂಜೆ ಹಾಗೂ ರಾತ್ತಿ 8 ಗಂಟೆಗೆ ದೀಪಾರಾಧನೆಯ ಬಳಿಕ ಪ್ರಸಾದ ವಿತರಣೆ ನಡೆಯಲಿದೆ ಎಂದು ಸುಧೀರ್ ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ದೇವಾಲಯದ ಸ್ಥಾಪಕ ಡಾ.ಮನೋಹರ್.ಜಿ.ಪಾಟ್ಕರ್, ಮುತ್ತಪ್ಪ ಉತ್ಸವ ಸಮಿತಿ ಅಧ್ಯಕ್ಷ ಬಿ.ಕೆ.ರವೀಂದ್ರ ರೈ, ಅಯ್ಯಪ್ಪ ಉತ್ಸವ ಸಮಿತಿ ಅಧ್ಯಕ್ಷ ವಿ.ಎಸ್.ವಿನೋದ್, ಕೋಶಾಧಿಕಾರಿ ಸದಾಶಿವ ಶೆಟ್ಟಿ, ಸದಸ್ಯರಾದ ಬಿ.ಎಂ.ಪೂವಪ್ಪ ಹಾಜರಿದ್ದರು.