ಮಡಿಕೇರಿ NEWS DESK ಜ.13 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ವಿರುದ್ಧ ವಿನಾಕಾರಣ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ಬಂಧಿಸಿದರೆ ಪ್ರತಿಭಟನೆ ನಡೆಸುವುದಾಗಿ ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೇರ ದಿನೇಶ್ ಬೆಳ್ಯಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೇವಲ ದ್ವೇಷ ಮತ್ತು ವಿಷಯಾಂತರದ ಕಾರಣಕ್ಕಾಗಿ ನಾಚಪ್ಪ ಅವರ ವಿರುದ್ಧ ದೂರು ನೀಡಿ ಬಂಧನಕ್ಕಾಗಿ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ನಾಚಪ್ಪ ಅವರನ್ನು ಬಂಧನಕ್ಕೆ ಒಳಪಡಿಸಿದರೆ ಅವರ ಹೋರಾಟ ಮತ್ತು ಧ್ವನಿಯನ್ನು ಅಡಗಿಸಿ ಕೊಡವರ ಬಲ ಕುಗ್ಗಿಸಬಹುದು ಎನ್ನುವುದು ಭ್ರಮೆ. ನಾಚಪ್ಪ ಅವರ ಹೋರಾಟ ಕೊಡವ ಜನಾಂಗದ ಪರವಾಗಿದ್ದು, ಕಾನೂನುಬದ್ಧ ಹಕ್ಕನ್ನು ಪ್ರತಿಪಾದಿಸಿದ್ದಾರೆಯೆ ಹೊರತು ಯಾರದ್ದೇ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರ ಮಾಡಿಲ್ಲ. ಅವರ ವಿರುದ್ಧದ ದೂರಿನಲ್ಲಿ ಹುರುಳಿಲ್ಲ ಎನ್ನುವ ಅರಿವಿದ್ದರೂ ಇಲಾಖೆ ಪ್ರಕರಣ ದಾಖಲಿಸಿರುವುದನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ನಾಚಪ್ಪ ಅವರನ್ನ ಬಂಧಿಸಿ ಅವಮಾನ ಮಾಡಿದರೆ, ಇಡೀ ಕೊಡವ ಸಮುದಾಯ ಪ್ರತಿಭಟಿಸಲಿದೆ ಎಂದು ತಿಳಿಸಿರುವ ದಿನೇಶ್ ಬೆಳ್ಯಪ್ಪ, ಪ್ರಕರಣವನ್ನು ತಕ್ಷಣ ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.