ವಿರಾಜಪೇಟೆ ಜ.13 NEWS DESK : ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್.ಎಸ್.ಎಸ್ ಘಟಕ ಹಾಗೂ ಎಂ.ಕಾಂ ಸ್ನಾತಕೋತ್ತರ ವಿಭಾಗದ ವತಿಯಿಂದ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು. ಸಂತ ಅನ್ನಮ್ಮ ಪಿ.ಯು.ಕಾಲೇಜಿನ ಪ್ರಾಂಶುಪಾಲ ಹಾಗೂ ಪದವಿ ಕಾಲೇಜಿನ ವ್ಯವಸ್ಥಾಪಕ ರೆ.ಫಾ.ಮದಲೈ ಮುತ್ತು ಕಾರ್ಯಕ್ರಮ ಉದ್ಘಾಟಿಸಿದರು.ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಬಿ.ಡಿ.ಹೇಮ ಮಾತನಾಡಿ, ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಮಾರ್ಗದರ್ಶನ ಹಾಗೂ ತತ್ವಗಳನ್ನು ಅನುಸರಿಸುವುದರ ಮೂಲಕ ಅವರ ದ್ಯೇಯ ಉದ್ದೇಶಗಳನ್ನುಸಾಕಾರಗೊಳಿಸಿ ರಾಷ್ಟ್ರದ ಪ್ರಗತಿಗೆ ಶ್ರಮಿಸಬೇಕೆಂದು ಕರೆ ಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಸ್ವಾಮಿ ವಿವೇಕಾನಂದರು ಯುವಕರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು. ಇಂದು ರಾಷ್ಟ್ರವು ವಿಕಸಿತ ಭಾರತದ ಪರಿಕಲ್ಪನೆಯನ್ನು ಹೊಂದಿದ್ದು, ಆರ್ಥಿಕ ಅಭಿವೃದ್ಧಿ ಆಗುವತ್ತ ಗುರಿಯನ್ನು ಮುಟ್ಟುತ್ತಿದೆ. ಆ ಗುರಿ ಸಾಕಾರಗೊಳ್ಳಲು ಯುವಕರ ಪಾತ್ರ ಅತೀ ಪ್ರಮುಖವಾಗಿದ್ದು, ಯುವಕರು ತನ್ನದೇಯಾದ ಕೊಡುಗೆಯನ್ನು ರಾಷ್ಟ್ರಕ್ಕೆ ನೀಡಬೇಕೆಂದರು. ಕಾಲೇಜಿನ ಎನ್.ಎಸ್.ಎಸ್. ಘಟಕದ ಅಧಿಕಾರಿ ಬಿ.ಎನ್.ಶಾಂತಿಭೂಷಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಅರ್ಜುನ್, ವಿಲೀನ ಗೋನ್ಸಾಲ್ವೇಸ್, ಪದವಿ ಕಾಲೇಜಿನ ಎನ್. ಎಸ್. ಎಸ್. ವಿದ್ಯಾರ್ಥಿಗಳು ಹಾಗೂ ಎಂ.ಕಾಂ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು. ಎಂ.ಕಾಂ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಹಾಗೂ ಸ್ವಾಮಿ ವಿವೇಕಾನಂದರ ಸಂದೇಶವನ್ನು ನೀಡುವ ಕಿರು ಪ್ರಹಸನ ಪ್ರದರ್ಶನ ನಡೆಯಿತು.