ಮಡಿಕೇರಿ ಜ.13 NEWS DESK : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ವಿರುದ್ಧ ಪ್ರಕರಣ ದಾಖಲಾಗಿರುವ ವಿಚಾರ ತಿಳಿದು ಬಂದಿದ್ದು, ಇದನ್ನು ತೀವ್ರವಾಗಿ ಖಂಡಿಸುವುದಾಗಿ ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ನ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡವರ ಹಕ್ಕುಗಳ ಪರ ಹೋರಾಟ ನಡೆಸುತ್ತಿರುವ ನಾಚಪ್ಪ ಅವರು ಕೊಡವರ ಧ್ವನಿಯಾಗಿದ್ದಾರೆ. ಕೊಡಗಿನ ಹಳ್ಳಿಯಿಂದ ದೆಹಲಿಯ ಸಂಸತ್ ವರೆಗೆ ಕೊಡವರ ಪರ ಹೋರಾಟವನ್ನು ಕೊಂಡೊಯ್ದಿದ್ದಾರೆ. ಸುಳ್ಳು ದೂರು ನೀಡಿ ಇವರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿದೆ. ಇದನ್ನು ತೀವ್ರವಾಗಿ ವಿರೋಧಿಸುವುದಲ್ಲದೆ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸುವುದಾಗಿ ಹೇಳಿದ್ದಾರೆ. ಅತ್ಯಂತ ಸೂಕ್ಷ್ಮ ಮತ್ತು ವಿಶಿಷ್ಟ ಜನಾಂಗವಾಗಿರುವ ಕೊಡವರ ಹಕ್ಕುಗಳಿಗಾಗಿ ನಾಚಪ್ಪ ಅವರು ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಕೊಡವ ಲ್ಯಾಂಡ್ ಸ್ವಾಯತ್ತತೆ, ಕೊಡವರಿಗೆ ಎಸ್‍ಟಿ ಟ್ಯಾಗ್, ಕೊಡವ ಭಾಷೆಯನ್ನು 8ನೇ ಶೆಡ್ಯೂಲ್ ಗೆ ಸೇರಿಸುವುದು, ಕೋವಿಯ ಹಕ್ಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಿಸ್ವಾರ್ಥದಿಂದ ಹೋರಾಟ ನಡೆಸುತ್ತಿದ್ದಾರೆ. ನಾಚಪ್ಪ ಅವರು ಕೊಡವರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆಯೇ ಹೊರತು ಯಾರನ್ನೂ ವಿರೋಧಿಸುತ್ತಿಲ್ಲ ಮತ್ತು ನಿಂದಿಸುತ್ತಿಲ್ಲ. ಆದ್ದರಿಂದ ನಾಚಪ್ಪ ಅವರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಮನು ಮುದ್ದಪ್ಪ ಒತ್ತಾಯಿಸಿದ್ದಾರೆ.