ವಿರಾಜಪೇಟೆ ಜ.13 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್, ವಿರಾಜಪೇಟೆ ಸ್ವಸಹಾಯ ಸಂಘಗಳ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಹೈನುಗಾರಿಕೆ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು. ಗೋಣಿಕೊಪ್ಪಲು ವಲಯದ ಹರಿಶ್ಚಂದ್ರಪುರ ಕಾರ್ಯಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಿನು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ತಂಡದ ಸದಸ್ಯ ಯೋಜನೆಯ ಕಿರು ಆರ್ಥಿಕ ಪ್ರಗತಿ ನಿಧಿ ಪಡೆದುಕೊಂಡು ಪ್ರಾರಂಭದಲ್ಲಿ ಒಂದು ಹಸುವನ್ನು ಖರೀದಿ ಮಾಡಿ ಈಗ 10 ಹಸುಗಳನ್ನು ಹೊಂದಿದ್ದಾರೆ. ದಿನಕ್ಕೆ 84 ಲೀಟರ್ ಹಾಲು ನೀಡುತ್ತಿದೆ. ಇದರಿಂದ ದಿನಕ್ಕೆ 2,500 ರೂ ಆದಾಯ ಬರುತ್ತಿದ್ದು, ನಮ್ಮ ಗೋಣಿಕೊಪ್ಪಲಿನಲ್ಲಿ ಹಾಲಿನ ಡೈರಿ ಇಲ್ಲದ ಕಾರಣ ತುಂಬಾ ಸಮಸ್ಯೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೈನುಗಾರಿಕೆ ಮಾಡುತ್ತೇನೆ, ಹೈನುಗಾರಿಕೆ ಒಂದು ಲಾಭದಾಯಕವಾಗಿದೆ ಎಂದರಲ್ಲದೆ ಹಲವು ಹಸುಗಳ ತಳಿಗಳ ಬಗ್ಗೆ ಮಾಹಿತಿ ನೀಡಿ, ಗೊಬ್ಬರದಿಂದ ಆದಾಯ ಬರುತ್ತದೆ, ಹೈನುಗಾರಿಕೆಯಿಂದ ಕುಟುಂಬವನ್ನು ನಿರ್ವಹಣೆ ಮಾಡಬಹುದು ಎಂದರು. ಕೃಷಿ ಅಧಿಕಾರಿ ವಸಂತ್ ಮಾತನಾಡಿ, ಹೈನುಗಾರಿಕೆಯಿಂದ ಉತ್ತಮ ಆದಾಯವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಹೈನುಗಾರಿಕೆಯನ್ನು ಮಾಡಿ ಹೈನುಗಾರಿಕೆಯಿಂದ ಕೃಷಿಗೂ ಪೂರಕ ಹಾಗೂ ಉತ್ತಮ ತಳಿಯ ಹಸುಗಳನ್ನು ಖರೀದಿ ಮಾಡಿ ಅದರಿಂದ ಉತ್ತಮ ಆದಾಯವನ್ನು ಪಡೆದುಕೊಳ್ಳಬಹುದು ಎಂದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿ ರಾಜೇಶ್ವರಿ, ಸುನಿತಾ, ಜಾನ್ಸಿ, ಆಶಾ, ಸೇವಾ ಪ್ರತಿನಿಧಿ ಸರಿತಾ ಹಾಗೂ ಊರಿನ ಗ್ರಾಮಸ್ಥರು, ಸಂಘದ ಸದಸ್ಯರು ಪಾಲ್ಗೊಂಡಿದ್ದರು.