ಮಡಿಕೇರಿ ಜ.16 NEWS DESK : ಸುಂಟಿಕೊಪ್ಪ ಸರಕಾರಿ ಆಸ್ಪತ್ರೆಯಲ್ಲಿ ಹಗಲು ಮತ್ತು ರಾತ್ರಿ ಕರ್ತವ್ಯ ನಿರ್ವಹಣೆಗೆ ಖಾಯಂ ವೈದ್ಯರುಗಳನ್ನು ನೇಮಿಸಬೇಕು ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಕೊಡಗು ಜಿಲ್ಲಾ ಪ್ರಜಾ ಪರಿವರ್ತನಾ ವೇದಿಕೆ ಒತ್ತಾಯಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ಹೆಚ್.ಎಸ್.ಮುತ್ತಪ್ಪ, ಕೊಡಗು ಜಿಲ್ಲೆಯ ಸುಂಟಿಕೊಪ್ಪ ಪಟ್ಟಣ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಟೀಕಿಸಿದರು. ಸುಂಟಿಕೊಪ್ಪ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳೀಯ ಸರಕಾರಿ ಆಸ್ಪತ್ರೆಯನ್ನೇ ಅವಲಂಭಿಸಿದ್ದಾರೆ. ಆದರೆ ಆಸ್ಪತ್ರೆಯನ್ನು ಖಾಯಂ ವೈದ್ಯರ ಕೊರತೆ ಕಾಡುತ್ತಿದೆ, ರಾತ್ರಿ ವೇಳೆ ಯಾವುದೇ ವೈದ್ಯರು ಲಭ್ಯವಿಲ್ಲ. ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಪ್ರವಾಸಿಗರ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿರುತ್ತವೆ. ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಕರೆ ತಂದರೆ ಚಿಕಿತ್ಸೆ ನೀಡಲು ವೈದ್ಯರು ಹಾಗೂ ಶುಶ್ರೂಷಕಿಯರು ಇಲ್ಲದ ಪರಿಸ್ಥಿತಿ ಇದೆ.
ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ವ್ಯವಸ್ಥೆ ಇಲ್ಲದೇ ಇರುವುದರಿಂದ ಸಾಮಾನ್ಯ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಹೋಬಳಿ ಹಂತದ ಆಸ್ಪತ್ರೆಗಳಲ್ಲಿ ಮರಣೋತ್ತರ ಪರೀಕ್ಷೆಯ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು. ಮಡಿಕೇರಿ, ಕುಶಾಲನಗರ ಮೂಲಕ ಹಾದು ಹೋಗುವ ಹೆದ್ದಾರಿಯಲ್ಲಿ ಪ್ರತಿದಿನ ಸಾವಿರಾರು ಪ್ರವಾಸಿ ವಾಹನಗಳು ಸಂಚರಿಸುತ್ತಿರುತ್ತವೆ. ಆದರೆ ಈ ರಸ್ತೆಯ ಎರಡು ಬದಿಗಳು ಕಾಡು ಗಿಡಗಳಿಂದ ಕೂಡಿದೆ. ಇದರಿಂದಾಗಿ ಪಾದಾಚಾರಿಗಳು ರಸ್ತೆ ಬದಿಯಲ್ಲಿ ಹೋಗಲು ಸಾಧ್ಯವಾಗದೆ ಭಯದಿಂದ ರಸ್ತೆಯಲ್ಲೇ ನಡೆಯುವಂತ್ತಾಗಿದೆ. ಹಲವು ಬಾರಿ ಪಾದಾಚಾರಿಗಳಿಗೆ ಅಪಘಾತವಾಗಿರುವುದಲ್ಲದೇ ಪ್ರಾಣಹಾನಿಯೂ ಸಂಭವಿಸಿದೆ. ಆದ್ದರಿಂದ ಸಂಬಂಧಿಸಿದ ಇಲಾಖೆಗಳು ಮತ್ತು ಗ್ರಾ.ಪಂ ರಸ್ತೆ ಬದಿಯ ಕಾಡುಗಳನ್ನು ಕಡಿಸಿ, ಪಾದಾಚಾರಿಗಳಿಗೆ ನಡೆದಾಡಲು ಅವಕಾಶ ಕಲ್ಪಿಸಬೇಕು, ರಸ್ತೆ ಬದಿಯ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
2018ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ಈಗಾಗಲೇ ಹಂಚಿಕೆ ಮಾಡಿರುವ ಮನೆಗಳ ಕೆಲವು ನಿವಾಸಿಗಳು ಬೇರೆ ಕಡೆ ವಾಸಿಸುತ್ತಿದ್ದಾರೆ. ಅಂತಹ ಮನೆಗಳನ್ನು ಪುನಃ ಪರಿಶೀಲನೆ ಮಾಡಿ, ಜಿಲ್ಲೆಯಲ್ಲಿರುವ ಇತರೆ ವಸತಿ ರಹಿತ ಬಡ ಕುಟುಂಬಕ್ಕೆ ನೀಡಲು ಕ್ರಮ ಕೈಗೊಳ್ಳಬೇಕು ಎಂದರು. ಈಗಾಗಲೇ ಬೇಡಿಕೆಗಳ ಕುರಿತು ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಸಚಿವರುಗಳಿಗೆ ಮನವಿ ಸಲ್ಲಿಸಲಾಗಿದೆ. ಶೀಘ್ರ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ಹೆಚ್.ಎಸ್.ಮುತ್ತಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಉಪಾಧ್ಯಕ್ಷ ಎಂ.ಆರ್.ಫಿರೋಜ್ ಖಾನ್, ಕಾರ್ಯದರ್ಶಿ ಹೆಚ್.ಟಿ.ಬೋಜಪ್ಪ, ಕುಶಾಲನಗರ ತಾಲ್ಲೂಕು ಅಧ್ಯಕ್ಷ ಎನ್.ವಿ.ಸಿದ್ದರಾಜು ಹಾಗೂ ಸುಂಟಿಕೊಪ್ಪ ವಿಭಾಗದ ಅಧ್ಯಕ್ಷ ಹೆಚ್.ಎಸ್.ಖಲೀಲ್ ಉಪಸ್ಥಿತರಿದ್ದರು.