ಮಡಿಕೇರಿ ಜ.17 NEWS DESK : ಅಯ್ಯಂಗೇರಿ ಕಲಾಂ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಫೆ.25 ರಿಂದ 27ರ ವರೆಗೆ ಅಯ್ಯಂಗೇರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದು ಕ್ಲಬ್‍ನ ಅಧ್ಯಕ್ಷ ಪಿ.ಎಂ.ಅಬ್ದುಲ್ ರಶೀದ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯ್ಯಂಗೇರಿ ಕೊಲಂಬೋ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 9ನೇ ವರ್ಷದ ಪಂದ್ಯಾವಳಿಯು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಮಾದರಿಯಲ್ಲಿ ನಡೆಯಲಿದೆ ಎಂದರು. ರಾಯಲ್ ಸ್ಟೈಕರ್ಸ್, ಯೂನೈಟೆಡ್ ಬಕ್ಕಾ, ಕ್ರೋಬ್ರಾ, ಬ್ಲಾಕ್ ಕ್ಯಾಪ್ಸ್, ಫೈಟಿಂಗ್ ಬ್ರದರ್ಸ್, ಸೂಪರ್ ಸಿಕ್ಸರ್ಸ್, ಎ.ಆರ್.ಎಂ.ಸ್ಟ್ರಾಂಗ್, ಟೆಂಡರ್ಸ್ ಸ್ಟೈಕರ್ಸ್, ಸೂಪರ್ ಸಿಕ್ಸ್ ತಂಡಗಳ ನಡುವೆ ಪಂದ್ಯಾವಳಿ ನಡೆಯಲಿದ್ದು, ಪ್ರಥಮ ವಿಜೇತರಿಗೆ 51,555 ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ವಿಜೇತರಿಗೆ 27,000 ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಜ.19 ರಂದು ನಾಪೋಕ್ಲುವಿನ ಬೆಕಾಚಿ ಹೊಟೇಲ್‍ನಲ್ಲಿ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು. ಸಣ್ಣಪುಲಿಕೋಟು, ಅಯ್ಯಂಗೇರಿ ಮತ್ತು ದೊಡ್ಡಪುಲಿಕೋಟು ಗ್ರಾಮಗಳ ಕ್ರೀಡಾಪಟುಗಳು ಸೇರಿದಂತೆ ಸುಮಾರು 170ಕ್ಕೂ ಹೆಚ್ಚು ಆಟಗಾರರು ನೋಂದಾವಣೆ ಮಾಡಿಕೊಂಡಿದ್ದಾರೆ ಎಂದು ಅಬ್ದುಲ್ ಮಾಹಿತಿ ನೀಡಿದರು. ಜ.28 ರಂದು ಇದೇ ತಂಡಗಳ ನಡುವೆ ವಾಲಿಬಾಲ್ ಮತ್ತು ಫುಟ್ಬಾಲ್ ಪಂದ್ಯಾವಳಿ ನಡೆಯಲಿದ್ದು, ಪ್ರಥಮ ವಿಜೇತರಿಗೆ 15,000 ನಗದು ಮತ್ತು ಟ್ರೋಫಿ, ದ್ವಿತೀಯ ವಿಜೇತ ತಂಡಕ್ಕೆ 10,000 ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು ಎಂದು ತಿಳಿಸಿದರು. ಸದಸ್ಯ ಪೆಬ್ಬಟ್ಟೀರ ಯತೀಶ್ ಮಾತನಾಡಿ, ಎಲ್ಲಾ ಜನಾಂಗವನ್ನು ಒಗ್ಗೂಡಿಸುವ ಸಲುವಾಗಿ ಪಂದ್ಯಾವಳಿಯನ್ನು ಆಯೋಜಿಲಾಗಿದ್ದು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕ್ರೀಡಾಕೂಟವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಪಿ.ಎಂ.ನೌಶದ್, ಪಿ.ಎಂ.ಮುತಾಲಿಬ್, ಬಿ.ಎ.ಜುನೈದ್ ಉಪಸ್ಥಿತರಿದ್ದರು.