ಮಡಿಕೇರಿ ಜ.17 NEWS DESK : ಆದಿವಾಸಿಗಳ ಹೆಸರಿನಲ್ಲಿ ಸರಕಾರಗಳು ಕೋಟಿ ಕೋಟಿ ಅನುದಾನ ಘೋಷಣೆ ಮಾಡುತ್ತಿವೆ, ಆದರೆ ಯಾವುದೇ ಸೌಲಭ್ಯಗಳು ನೈಜ ಆದಿವಾಸಿಗಳ ಪಾಲಾಗುತ್ತಿಲ್ಲ. ನಮ್ಮನ್ನು ಮೊದಲಿನಂತೆ ಗಾಳಿ ಬೆಳಕಿನೊಂದಿಗೆ ಸ್ವಚ್ಛಂದವಾಗಿ ಬದುಕಲು ಬಿಡಿ ಎಂದು ಅರಣ್ಯ ಹಕ್ಕು ಸಮಿತಿ ಹಾಗೂ ಕೊಡಗಿನ ಆದಿವಾಸಿ ಮುಖಂಡರು ಆಗ್ರಹಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಡಗು ಜಿಲ್ಲಾ ಆದಿವಾಸಿ ಮುಖಂಡ ಆರ್.ಕೆ.ಚಂದ್ರು ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳೇ ಕಳೆದಿದ್ದರೂ ಆದಿವಾಸಿಗಳಿಗೆ ಇಂದಿಗೂ ಟಾರ್ಪಲ್ ಗಳನ್ನು ವಿತರಿಸಲಾಗುತ್ತಿದೆ. ನಮಗೆ ಟಾರ್ಪಲ್ ನ ಅವಶ್ಯಕತೆ ಇಲ್ಲ, ಈ ಸೌಲಭ್ಯವನ್ನು ರದ್ದುಗೊಳಿಸಿ ಎಂದು ಒತ್ತಾಯಿಸಿದರೂ ರದ್ದುಗೊಳಿಸುತ್ತಿಲ್ಲ. ಇರುವ ಗುಡಿಸಲುಗಳಿಗೆ ವಿದ್ಯುತ್ ಬೆಳಕಿನ ವ್ಯವಸ್ಥೆಯಿಲ್ಲ. ಪ್ರತಿವರ್ಷ ಸರಕಾರಗಳು ಆದಿವಾಸಿಗಳ ಹೆಸರಿನಲ್ಲಿ ಕೋಟಿ ಕೋಟಿ ಅನುದಾನದ ಮಾತನಾಡುತ್ತವೆ. ಆದರೆ ನಮಗೇನು ದೊರೆಯುತ್ತಿಲ್ಲ, ಸರಕಾರದ ಯಾವುದೇ ಅನುದಾನ ನಮಗೆ ಬೇಕಿಲ್ಲ. ನಾವಿರುವ ಅರಣ್ಯ ಮತ್ತು ಅರಣ್ಯದ ಅಂಚಿನಲ್ಲಿ ಪ್ರಕೃತಿಯ ಗಾಳಿ, ಬೆಳಕಿನೊಂದಿಗೆ ನೆಮ್ಮದಿಯಾಗಿ ಜೀವಿಸಲು ಅವಕಾಶ ನೀಡಲಿ. ಸರಕಾರದ ನಿರ್ಲಕ್ಷ್ಯದಿಂದ ನಮಗೆ ಕಣ್ಣೀರು ಹಾಕಲು ಕೂಡ ಕಣ್ಣಿನಲ್ಲಿ ನೀರು ಇಲ್ಲದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಅರಣ್ಯದಲ್ಲಿ ಹೋಂಸ್ಟೇಗಳನ್ನು ನಿರ್ಮಿಸಲು ಅವಕಾಶ ನೀಡುವ ಆಡಳಿತ ವ್ಯವಸ್ಥೆ ತಲೆತಲಾಂತರಗಳಿಂದ ಅರಣ್ಯದಲ್ಲೇ ಹುಟ್ಟಿ ಬೆಳೆದ ನಮಗೆ ಬದುಕಲು ಅವಕಾಶ ನೀಡುತ್ತಿಲ್ಲ. 2006 ರಲ್ಲಿ ಜಾರಿಗೆ ಬಂದ ಅರಣ್ಯ ಹಕ್ಕು ಮಸೂದೆ ಇನ್ನೂ ಕೂಡ ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಭೂಮಿಯ ಹಕ್ಕುಪತ್ರವನ್ನು ಮಾತ್ರ ನೀಡಲಾಗಿದ್ದು, ಆರ್‍ಟಿಸಿ ಮಂಜೂರು ಮಾಡದೆ ಇರುವುದರಿಂದ ಜೇನು ಕುರುಬ ಸೇರಿದಂತೆ ಆದಿವಾಸಿ ಸಮುದಾಯಕ್ಕೆ ಸರಕಾರ ಮತ್ತು ಬ್ಯಾಂಕ್ ನ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಹಣ ಇರುವವರು ಆರ್‍ಟಿಸಿ ಮಾಡಿಕೊಂಡಿದ್ದಾರೆ, ಹಣವಿಲ್ಲದ ಆದಿವಾಸಿಗಳು ಅತಂತ್ರ ಬದುಕು ಸಾಗಿಸುತ್ತಿದ್ದಾರೆ. ಆದಿವಾಸಿಗಳ ಮಕ್ಕಳು ಪಿಯುಸಿ, ಪದವಿ ಶಿಕ್ಷಣ ಪಡೆದಿದ್ದರೂ ಯಾರೊಬ್ಬರಿಗೂ ಇಲ್ಲಿಯವರೆಗೆ ಸರಕಾರಿ ಹುದ್ದೆ ದೊರೆತ್ತಿಲ್ಲ. ಚುನಾವಣೆ ಸಂದರ್ಭ ಮಾತ್ರ ರಾಜಕಾರಣಿಗಳು ನಮ್ಮ ಬಳಿ ಬರುತ್ತಾರೆ. ಇತ್ತೀಚೆಗೆ ಮುಖ್ಯಮಂತ್ರಿಗಳು ಅಧಿಕಾರಿಗಳ ಸಭೆ ನಡೆಸಿ ಆದಿವಾಸಿಗಳಿಗೆ ಎಲ್ಲಾ ಸೌಲಭ್ಯಗಳನ್ನು ನೀಡಬೇಕೆಂದು ಸೂಚನೆ ನೀಡಿದ್ದಾರೆ. ಆದರೆ ಅಧಿಕಾರಿಗಳು ಇಂದಿಗೂ ಸೌಲಭ್ಯ ನೀಡಲು ಮುಂದಾಗಿಲ್ಲ. ನಕಲಿ ಜಾತಿ ಪ್ರಮಾಣ ಪತ್ರ ಇರುವವರಿಗೆ ಎಲ್ಲಾ ಸೌಲಭ್ಯ ದೊರೆಯುತ್ತಿದೆ ಎಂದು ಆರ್.ಕೆ.ಚಂದ್ರು ಆರೋಪಿಸಿದರು.
::: ಅರಣ್ಯ ಹಕ್ಕು ಗ್ರಾಮಸಭೆ :::
ಅರಣ್ಯ ಹಕ್ಕು ಮಸೂದೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಆಡಳಿತ ವ್ಯವಸ್ಥೆಯ ಗಮನ ಸೆಳೆಯಲು ಜ.21 ರಂದು ಕುಶಾಲನಗರ ತಾಲ್ಲೂಕಿನ ಚಿಕ್ಲಿಹೊಳೆ ಕಟ್ಟೆಹಾಡಿಯಲ್ಲಿ ಗ್ರಾಮಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಗೆ ಸಂಬಂಧಪಟ್ಟ ಅಧಿಕಾರಿಗಳು ಖುದ್ದು ಹಾಜರಾಗಬೇಕೆಂದು ಒತ್ತಾಯ ಮಾಡುತ್ತೇವೆಯೇ ಹೊರತು ಮನವಿ ಮಾಡುವುದಿಲ್ಲ. ಒಂದು ವೇಳೆ ಹಾಜರಾಗದಿದ್ದಲ್ಲಿ ಜಿಲ್ಲಾವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಜೇನು ಕುರುಬರ ಅಭಿವೃದ್ಧಿ ಸಂಘದ ಸಂಘಟನಾ ಕಾರ್ಯದರ್ಶಿ ಜೆ.ಟಿ.ಕಾಳಿಂಗ ಮಾತನಾಡಿ 2006ರಲ್ಲಿ ಅರಣ್ಯ ಹಕ್ಕು ಕಾಯ್ದೆ ಜಾರಿಯಾಗಿದೆ, ವೈಯಕ್ತಿಕ ಹಕ್ಕು ಹಾಗೂ ಸಮುದಾಯದ ಹಕ್ಕಿಗಾಗಿ ಎಲ್ಲಾ ದಾಖಲೆಗಳನ್ನು ನೀಡಿದ್ದರೂ ಕೂಡ ಹಕ್ಕುಪತ್ರ ವಿತರಿಸದೆ ಸತಾಯಿಸಲಾಗುತ್ತಿದೆ. ಸರಕಾರದ ನಿರಾಸಕ್ತಿಯಿಂದ ಆದಿವಾಸಿ ಕುಟುಂಬಗಳು ಸಂಕಷ್ಟದ ಬದುಕು ಸಾಗಿಸುತ್ತಿವೆ ಎಂದು ಆರೋಪಿಸಿದರು. ಅರಣ್ಯ ಹಕ್ಕುಪತ್ರ ಜಮೀನನ್ನು ಕಂದಾಯ ಜಮೀನಾಗಿ ಪರಿವರ್ತಿಸಿ ಭೂ ಒಡೆತನ ನೀಡಬೇಕು. ಪಿಯುಸಿ ಮತ್ತು ಪದವಿ ವ್ಯಾಸಂಗ ಮಾಡಿರುವ ಆದಿವಾಸಿ ವಿದ್ಯಾರ್ಥಿಗಳಿಗೆ ಸರಕಾರಿ ಉದ್ಯೋಗ ನೀಡಬೇಕು. ಎಲ್ಲಾ ಹಾಡಿಗಳಿಗೆ ಸಮುದಾಯದ ಹಕ್ಕು ಒದಗಿಸಬೇಕು. ಆದಿವಾಸಿ ಸಮುದಾಯಗಳ ಹೆಸರಿನಲ್ಲಿ ಬರುವ ಕಾಮಗಾರಿಗಳು ದುರುಪಯೋಗವಾಗದಂತೆ ಕ್ರಮ ಕೈಗೊಳ್ಳಬೇಕು. ಸೇರಿದಂತೆ ಆದಿವಾಸಿಗಳ ಎಲ್ಲಾ ಬೇಡಿಕೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಈಡೇರಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಅರಣ್ಯ ಹಕ್ಕು ಸಮಿತಿಯಿಂದ ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ತೀವ್ರ ರೀತಿಯ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾವಿನಹಳ್ಳ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಜೆ.ಎಂ.ನಾಗೇಶ, ಉಪಾಧ್ಯಕ್ಷ ಜೆ.ಪಿ.ಚಂದ್ರಪ್ಪ ಹಾಗೂ ಕಟ್ಟೆಹಾಡಿ ಅಧ್ಯಕ್ಷ ಜೆ.ಕೆ.ಅಪ್ಪು ಉಪಸ್ಥಿತರಿದ್ದರು.