ಮಡಿಕೇರಿ ಜ.21 NEWS DESK : ಪ್ರಸ್ತುತ ದಿನಗಳಲ್ಲಿ ಮಹಿಳಾ ಲೇಖಕಿಯರು ತಮ್ಮ ಬರಹದ ಮೂಲಕ ಸಮಾಜದ ಕಣ್ಣನ್ನು ತೆರೆಸುವ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ನಿರ್ಮಾಪಕಿ, ಲೇಖಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಅವರು ಬರೆದಿರುವ ಕೊಡವ ಮಕ್ಕಡ ಕೂಟ ಪ್ರಕಟಿಸಿರುವ ಕನ್ನಡ ಪುಸ್ತಕ “ಮುಖಾಮುಖಿ”ಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಪುಸ್ತಕಗಳನ್ನು ಓದಿ ಹೆಚ್ಚು ಜ್ಞಾನಾರ್ಜನೆಯನ್ನು ಪಡೆದುಕೊಂಡರೆ ಉನ್ನತ ಸ್ಥಾನಕ್ಕೇರಲು ಸಾಧ್ಯವಿದೆ. ಆದ್ದರಿಂದ ಪ್ರತಿಯೊಬ್ಬರು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಪುಸ್ತಕಗಳು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತವೆ. ಸಾಹಿತ್ಯದಲ್ಲಿ ಅಡಗಿರುವ ಸಾರಾಂಶ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಮುಖಾಮುಖಿ ಪುಸ್ತಕವು ಉತ್ತಮ ಸಂದೇಶವನ್ನು ಹೊಂದಿದ್ದು, ಲೇಖಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಅವರು ಚಲನಚಿತ್ರಗಳ ಮೂಲಕ ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಇದೀಗ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿದ್ದು, ಇವರ ಪ್ರಯತ್ನ ಮುಂದುವರೆಯಲಿ ಎಂದು ಶುಭ ಹಾರೈಸಿದರು. ಕೊಡವ ಮಕ್ಕಡ ಕೂಟಕ್ಕೆ ಅನೇಕ ಪುಸ್ತಕಗಳನ್ನು ಬಿಡುಗಡೆ ಮಾಡಿದ ಹೆಗ್ಗಳಿಗೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಡಿಕೇರಿ ಕೊಡವ ಸಮಾಜದ ಮಾಜಿ ಉಪಾಧ್ಯಕ್ಷೆ ಹಾಗೂ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‍ನ ನಿವೃತ್ತ ಉಪನ್ಯಾಸಕಿ ಕಲಿಯಂಡ ಸರಸ್ವತಿ ಚಂಗಪ್ಪ ಮಾತನಾಡಿ, ಪುಸ್ತಕಗಳು ಗುಣಮಟ್ಟದಿಂದ ಕೂಡಿರಬೇಕು ಮತ್ತು ಸಮಾಜಕ್ಕೆ ಯಾವ ಸಂದೇಶವನ್ನು ನೀಡುತ್ತಿದ್ದೇವೆ ಎಂಬುವುದನ್ನು ನಿಖರವಾಗಿ ಪ್ರತಿಬಿಂಬಿಸಬೇಕು. ಪುಸ್ತಕದಲ್ಲಿ ಶುದ್ಧ ಭಾಷೆಯನ್ನು ಬಳಸಬೇಕ, ಭಾಷೆಯಲ್ಲಿ ಸೌಂದರ್ಯವಿದೆ ಅದನ್ನು ಅನುಭವಿಸಲು ಬರಹಗಾರರು ಅವಕಾಶ ಕಲ್ಪಿಸಬೇಕು. ಬರವಣಿಗೆ ಉತ್ತಮ ರೀತಿಯಲ್ಲಿದ್ದರೆ ಪುಸ್ತಕ ಓದುಗರ ಸಂಖ್ಯೆಯು ಹೆಚ್ಚಾಗಲಿದೆ. ಪ್ರಸ್ತುತ ದಿನಗಳಲ್ಲಿ ಮಕ್ಕಳು ಓದುವ ಹವ್ಯಾಸವನ್ನು ಕಡಿಮೆ ಮಾಡಿದ್ದು, ಉತ್ತಮ ಬರಹಗಳು ಬಂದಲ್ಲಿ ಮಕ್ಕಳು ಕೂಡ ಓದುವ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ಹಿಂದಿನ ಕಾಲದಲ್ಲಿ ಕೊಡಗಿನಲ್ಲಿ ಬರಹಗಾರರಿಗೆ ಬಹಳ ಕೊರತೆ ಇತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಬರಹಗಾರರ ಸಂಖ್ಯೆ ಹೆಚ್ಚಿದ್ದು, ಕನ್ನಡ, ಕೊಡವ ಭಾಷೆಯಲ್ಲಿ ಕೃತಿಗಳನ್ನು ಬಿಡುಗಡೆ ಮಾಡುತ್ತಿರುವುದು ಶ್ಲಾಘನೀಯವೆಂದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಬಿ.ಆರ್.ಸವಿತಾ ರೈ ಮಾತನಾಡಿ, ಸಾಹಿತ್ಯ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಹೆಣ್ಣುಮಕ್ಕಳು ಗುರುತಿಸಿಕೊಳ್ಳುತ್ತಿದ್ದು, ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಇಂದು ಸಾಹಿತ್ಯಾಭಿರುಚಿ ಮೂಡಿಸುವ ಅಗತ್ಯವಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಇನ್ನಷ್ಟು ಮಂದಿ ಗುರುತಿಸಿಕೊಳ್ಳುವಂತಾಗಬೇಕು, ಓದುಗರ ಸಂಖ್ಯೆಯೂ ಹೆಚ್ಚಾಗಬೇಕು ಎಂದು ಹೇಳಿದರು.
ಕೊಡವ ಮಕ್ಕಡ ಕೂಟದ ಮೂಲಕ ಅನೇಕ ಸಾಹಿತಿಗಳು ತಮ್ಮ ಪುಸ್ತಕವನ್ನು ಪ್ರಕಟಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಅಲ್ಲದೇ ಕೃತಿಯನ್ನು ಅನಾವರಣಗೊಳಿಸಬೇಕು ಎಂಬ ಕನಸಿಗೆ ಕೊಡವ ಮಕ್ಕಡ ಕೂಟ ಸ್ಫೂರ್ತಿ ನೀಡುತ್ತಿದೆ ಎಂದರು. ಮುಖಾಮುಖಿ ಪುಸ್ತಕದ ಲೇಖಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಮಾತನಾಡಿ, ಮುಖಾಮುಖಿ ನನ್ನ ಚೊಚ್ಚಲ ಕೃತಿ, ಬದುಕಿನ ಸಣ್ಣ ಸಣ್ಣ ಸಂಗತಿಗಳನ್ನು ಕೂಡ ಹೆಕ್ಕಿ ಬರೆದಿದ್ದೇನೆ. ನಮ್ಮನ್ನೇ ನಾವು ಗೆಲ್ಲಲಾಗುವುದಿಲ್ಲ ಎನ್ನುವ ಸತ್ಯವನ್ನು ಯಾರೂ ಅರ್ಥ ಮಾಡಿಕೊಳ್ಳುವುದೇ ಇಲ್ಲ. ಮನೋರೋಗಕ್ಕೆ ಒಳಗಾದ ವ್ಯಕ್ತಿಯ ಕುರಿತು ಬರೆಯಲಾಗಿದ್ದು, ಜೀವನದ ಹಲವು ಮಜಲುಗಳನ್ನು ತೋರಿಸಲಾಗಿದೆ. ಅಲ್ಲದೇ ದಾಂಪತ್ಯ ಬದುಕಿನ ಹಲವು ಸತ್ಯ ಸಂಗತಿಗಳನ್ನು ಪರಿಪೂರ್ಣವಾಗಿ ದಾಖಲಿಸಲು ಪ್ರಯತ್ನಿಸಲಾಗಿದೆ. ಜೀವನದ ಜಂಜಾಟದಲ್ಲಿ ಕಳೆದು ಹೋಗುವ ನಮಗೆ ಪ್ರತಿ ಮುಂಜಾನೆಗೂ ಒಂದು ಉದ್ದೇಶವಿರಬೇಕು ಎನ್ನುವುದನ್ನು ತಿಳಿಸಲು ಪುಸ್ತಕದ ಮೂಲಕ ಪ್ರಯತ್ನಿಸಿರುವುದಾಗಿ ತಿಳಿಸಿದರು. ಕಲಾ ಪ್ರಪಂಚದಲ್ಲಿ ಗುರುತಿಸಿಕೊಂಡಿದ್ದ ನನಗೆ ಸಾಹಿತ್ಯ ಕ್ಷೇತ್ರಕ್ಕೂ ಪದಾರ್ಪಣೆ ಮಾಡಲು ಪತಿ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಸಹಕಾರ ನೀಡಿದ್ದಾರೆ. ಅಲ್ಲದೇ ಚೊಚ್ಚಲ ಪುಸ್ತಕವನ್ನು ಪ್ರಕಟಿಸಲು ಸಹಕಾರ ನೀಡಿದ ಕೊಡವ ಮಕ್ಕಡ ಕೂಟಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ (ಮಾಸ್ಟರ್ಸ್) ಆಟಗಾರ್ತಿ ತಾತಪಂಡ ಜ್ಯೋತಿ ಸೋಮಯ್ಯ ಹಾಗೂ ಕೊಡವ ಮಕ್ಕಡ ಕೂಟದ ನಿರ್ದೇಶಕಿ ಬೊಳ್ಳಜಿರ ಯಮುನಾ ಅಯ್ಯಪ್ಪ ಉಪಸ್ಥಿತರಿದ್ದರು.
::: ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಪರಿಚಯ ::: ಶಿರಂಗಳ್ಳಿ ಗ್ರಾಮದ ಮಂದೆಯಂಡ ಸಿ.ಅಯ್ಯಪ್ಪ ಮತ್ತು ರಾಧಾ ದಂಪತಿಯ ಪ್ರಥಮ ಪುತ್ರಿ. ಇವರು ಎಂ.ಕಾಂ ಪದವೀಧರೆ. ದೇವನೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಬಾಳೆಲೆ ಸರ್ಕಾರಿ ಶಾಲೆಯಲ್ಲಿ ಪ್ರೌಢಶಿಕ್ಷಣ, ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ಪಿಯುಸಿ, ಬಿ.ಕಾಂ ಪದವಿ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಕಾಂ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಪ್ರತಿಷ್ಠಿತ ಖಾಸಗಿ ಸಂಸ್ಥೆಯ ಆಡಳಿತ ವ್ಯವಸ್ಥಾಪಕಿ ಹಾಗೂ ಅಕೌಂಟೆಂಟ್ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಸಾಹಿತಿ, ನಟ, ನಿರ್ಮಾಪಕ, ನಿರ್ದೇಶಕ, ನಿವೃತ್ತ ಯೋಧ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರನ್ನು ವಿವಾಹವಾಗಿ ಇವರಿಗೆ ತೇಜಲ್ ಕಾರ್ಯಪ್ಪ ಮತ್ತು ತನಮ್ ಕಾರ್ಯಪ್ಪ ಎಂಬ ಇಬ್ಬರು ಪುತ್ರಿಯರಿದ್ದಾರೆ. “ರಂಗಪ್ರವೇಶ” ಚಿತ್ರಕ್ಕೆ ನಿರ್ದೇಶನ ಮಾಡುವುದರ ಮೂಲಕ ಯಶೋಧಾ ಪ್ರಕಾಶ್ ಕನ್ನಡ ಚಲನಚಿತ್ರ ನಿರ್ದೇಶನ ಮಾಡಿದ ಕೊಡಗಿನ ಪ್ರಥಮ ನಿರ್ದೇಶಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದು ಬೆಳದಿಂಗಳ ಬಾಲೆ ಪ್ರಖ್ಯಾತಿಯ ಸುಮನ್ ನಗರ್‍ಕರ್ ಹಾಗೂ ಮುರುಳಿ ಕೌಶಿಕ್ ಅಭಿನಯಿಸಿರುವ ಸಿನಿಮಾ. ಇವರು ಕರ್ನಾಟಕ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿತ “ಸ್ವಸ್ತಿಕ್ ಎಂಟರ್‍ಟೈನ್‍ಮೆಂಟ್” ಬ್ಯಾನರ್‍ನಲ್ಲಿ ಕೊಡವ, ಕನ್ನಡ ಚಲನಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. 2017ರಲ್ಲಿ ಬಾಕೆಮನೆ ಕೊಡವ ಚಲನಚಿತ್ರ ನಿರ್ಮಾಣ ಮಾಡಿದ್ದು, ಈ ಚಿತ್ರ ಕೊಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿವೆ. “ನಾಡ ಪೆದ ಆಶಾ” ಕೊಡವ ಸಿನಿಮಾದ ಸಹ ನಿರ್ಮಾಪಕಿಯಾಗಿದ್ದಾರೆ. ಈ ಚಿತ್ರವು ಹಲವು ಅಂತರಾಷ್ಟ್ರೀಯ ಫಿಲಂ ಫೆಸ್ಟಿವಲ್‍ಗಳಲ್ಲಿ ಪ್ರದರ್ಶನ ಕಂಡು ಹಲವು ಪ್ರಶಸ್ತಿಗಳಿಗೆ ಪಾತ್ರವಾಗಿದೆ. 2018ರಲ್ಲಿ “ಸ್ಮಶಾನ ಮೌನ” ಕನ್ನಡ ಚಿತ್ರ ನಿರ್ಮಿಸಿದ್ದು, ಈ ಚಿತ್ರ ಬೆಂಗಳೂರಿನ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಕನ್ನಡ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನ ಕಂಡಿದೆ. 2020ರಲ್ಲಿ ‘ದೀಕ್ಷಾ’ ಮಕ್ಕಳ ಚಿತ್ರವನ್ನು ನಿರ್ಮಿಸಿದ್ದಾರೆ. ‘ಪೊಮ್ಮಾಲೆ’ ಕೊಡಗು ಚಿತ್ರವನ್ನು ನಿರ್ಮಾಣ ಮಾಡಿದ್ದು, ಈ ಚಿತ್ರ ಎನ್‍ಎಫ್‍ಡಿಸಿ ಫಿಲಂ ಬಜಾರ್‍ನಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿತ್ತು. ನಂತರ ಕೊಲ್ಕೊತ್ತಾ ಇಂಟರ್‍ನ್ಯಾಷನಲ್ ಫಿಲಂ ಫೆಸ್ಟಿವಲ್‍ನಲ್ಲಿ ಏಷಿಯನ್ ವಿಭಾಗದ ಸ್ಪರ್ಧೆಗೆ ಆಯ್ಕೆಯಾಗಿತ್ತು. ಇವರ ನಿರ್ದೇಶನದ ‘ಕಂದೀಲು” ಸಿನಿಮಾ ಕೊಲ್ಕತ್ತಾ ಇಂಟರ್‍ನ್ಯಾಷನಲ್ ಫಿಲಂ ಫೆಸ್ಟಿವಲ್‍ನಲ್ಲಿ ಇಂಡಿಯನ್ ಸ್ಪರ್ಧಾ ವಿಭಾಗದಲ್ಲಿ ಆಯ್ಕೆಯಾಗಿ ನಂತರ ಬೆಂಗಳೂರು ಇಂಟರ್ ನ್ಯಾಷನಲ್ ಫೆಸ್ಟಿವಲ್‍ನಲ್ಲಿ ಕನ್ನಡ ಸ್ಪರ್ಧಾ ವಿಭಾಗದಲ್ಲಿ 2ನೇಯ ಅತ್ಯುತ್ತಮ ಕನ್ನಡ ಸಿನಿಮಾ ಎಂದು ಇಂಟರ್‍ನ್ಯಾಷನಲ್‍ನಲ್ಲಿ ಅವಾರ್ಡ್ ಪಡೆದ ಕೊಡಗಿನ ಮೊದಲನೆಯ ನಿರ್ದೇಶಕಿಯಾಗಿದ್ದಾರೆ. ‘ಕಾಂಗತ ಮೂಡ್’ ಕೊಡವ ಸಿನಿಮಾದ ಪಾಲುದಾರ ನಿರ್ಮಾಪಕಿಯಾಗಿದ್ದಾರೆ. ಅಲ್ಲದೆ ‘ಕೋಮುದಿ’ ಸತ್ಯ ಕಥೆ ಆಧಾರಿತ ಕನ್ನಡ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾ ಸಿ.ಬಿ.ಎಫ್.ಸಿ. ಮನ್ನಣೆ ಪಡೆದಿದೆ. ಅಲ್ಲದೆ ಇವರು ಹಲವು ಪ್ರಶಸ್ತಿ ಹಾಗೂ ಸನ್ಮಾನಗಳನ್ನು ಪಡೆದಿರುವುದು ಹೆಮ್ಮೆಯ ವಿಷಯ. “ಮುಖಾಮುಖಿ” ಇವರ ಚೊಚ್ಚಲ ಕನ್ನಡ ಕೃತಿಯಾಗಿದೆ.