ಪಾಲಿಬೆಟ್ಟ ಫೆ.5 NEWS DESK : ಭಾವೈಕ್ಯತೆಯ ಧಾರ್ಮಿಕ ಕೇಂದ್ರ ಎಂದೇ ಇತಿಹಾಸ ಪ್ರಸಿದ್ಧಿಯಾಗಿರುವ ಪಾಲಿಬೆಟ್ಥ ಆರ್ಕಾಡ್ ಪಟ್ಟಾಣ್ ಬಾಬಾ ಶಾಹ್ ವಲಿಯವರ ಉರೂಸ್ ಸಮಾರಂಭದ ಸಮಾರೋಪ ಹಾಗೂ ಸರ್ವಧರ್ಮ ಸಮ್ಮೇಳನ ದರ್ಗಾ ಆವರಣದಲ್ಲಿ ನಡೆಯಿತು. ಮನೆಹಳ್ಳಿಮಠದ ಶ್ರೀ ತಪೋ ಕ್ಷೇತ್ರ ಮಹಾಂತ ಶಿವಲಿಂಗ ಸ್ವಾಮಿಜಿ ಮಾತನಾಡಿ ಸರ್ವಧರ್ಮದ ಸಮನ್ವಯ ಕೇಂದ್ರಗಳಿಂದ ಶಾಂತಿ ಸಹ ಬಾಳ್ವೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಲಿದ್ದು, ಇಂತಹ ಸರ್ವಧರ್ಮ ಸಮ್ಮೇಳನಗಳ ಮೂಲಕ ಭಾವೈಕ್ಯತೆಯೊಂದಿಗೆ ಒಗ್ಗೂಡಿ ಆಚರಣೆಗಳು ಮಾಡಿದ್ದಲ್ಲಿ ಸಹೋದರತ್ವ ನಿರ್ಮಾಣವಾಗಲು ಸಾಧ್ಯವಾಗಲಿದೆ. ಪಾಲಿಬೆಟ್ಟ ಉರೂಸ್ ಸರ್ವ ಧರ್ಮಿಯರನ್ನು ಒಗ್ಗೂಡಿಸಿ ಇತಿಹಾಸದಿಂದಲೂ ಆಚರಣೆ ಮಾಡಿಕೊಂಡು ಬರುವ ಮೂಲಕ ಸೌಹಾರ್ದತೆ ಸಾರುತ್ತಿರುವುದು ಉರೂಸ್ ನಲ್ಲಿ ಪಾಲ್ಗೊಳ್ಳುತ್ತಿರುವ ಭಕ್ತ ಸಮೂಹವೇ ಸಾಕ್ಷಿಯಾಗಿದೆ. ನಾವು ನಡೆಯುವ ದಾರಿಗಳು ಬೇರೆ ಇರಬಹುದು ಆದರೆ ತಲುಪುವ ಗುರಿ ಮಾತ್ರ ಭಗವಂತನ ಸನ್ನಿಧಿಗೆ. ಕೆಡುಕಿನಿಂದ ದೂರವಾಗಿ ಒಳಿತನ್ನ ಬಯಸಿ ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆದಲ್ಲಿ ಸೌಹಾರ್ದ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದರು. ಪಾಲಿಬೆಟ್ಟ ಲೂರ್ಡ್ಸ್ ಚರ್ಚ್ ರೆ| ಫಾ. ಮರಿಯಾ ರಾಜ್ ಜಾರ್ಜ್ ಮಾತನಾಡಿ, ದೇವರು ಮಾನವನ ರೂಪದಲ್ಲಿ ಬದುಕಲು ಅವಕಾಶ ಕಲ್ಪಿಸಿದೆ ನಾವೆಲ್ಲರೂ ಶಾಂತಿ ಸಹ ಬಾಳ್ವೆಯಾ ಸಹೋದರತ್ವದೊಂದಿಗೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಲಿದ್ದು, ಎಲ್ಲಾ ಧರ್ಮಗಳ ಬೋಧನೆಯನ್ನು ಅನುಸರಿಸಿದರೆ ನಾವು ಯಾರನ್ನು ದ್ವೇಷಿಸುವುದಿಲ್ಲ ಎಲ್ಲ ಧರ್ಮಗಳ ಸಾರಾಂಶ ಒಂದೇ ಶಾಂತಿ ಸಹ ಬಾಳ್ವೆಯ ಸಂಕೇತವಾಗಿದೆ. ಇಂತಹ ಸರ್ವಧರ್ಮ ಸಮ್ಮೇಳನಗಳ ಮೂಲಕ ಗುರು ಹಿರಿಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದರು. ಜಿಲ್ಲಾ ವಕ್ಫ್ ಬೋರ್ಡ್ ಮಂಡಳಿ ಉಪಾಧ್ಯಕ್ಷ ಶಾಪಿ ಸಹದಿ ಮಾತನಾಡಿ ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಭಾವೈಕ್ಯತೆಯಿಂದ ಬಾಳಿದಲ್ಲಿ ಯಾವುದೇ ಕಾರಣಕ್ಕೂ ನಮ್ಮನ್ನ ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ
ರಾಜಕೀಯ ಲಾಭಕ್ಕಾಗಿ ಮಂದಿರ ಮಸೀದಿಗಳನ್ನು ಬಳಸಿಕೊಂಡು ಕೋಮು ಭಾವನೆಗಳೊಂದಿಗೆ ಅಶಾಂತಿ ಸೃಷ್ಟಿಸಲು ಮುಂದಾಗುತ್ತಿರುವುದು ವಿಷಾದನೀಯ. ಈ ಜಗತ್ತಿನಲ್ಲಿ ಸರ್ವಧರ್ಮೀಯರು ಒಂದಾಗಿ ಜೀವನ ನಡೆಸುತ್ತಿರುವ ದೇಶ ಭಾರತವಾಗಿದೆ. ಸೂಫಿ ಸಂತರ ಶರಣರ ಋಷಿಮುನಿಗಳ ಇತಿಹಾಸ ಈ ಭಾರತದಲ್ಲಿದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲ್ಲಾ ಧರ್ಮಿಯರು ಒಗ್ಗೂಡಿ ಭವಿಷ್ಯದ ದೇಶವನ್ನು ಕಟ್ಟಿದ್ದಾರೆ. ಸೂಫಿ ಸಂತರು ಶರಣರು ಒಟ್ಟಾಗಿ ಜೀವನ ಮಾಡುತ್ತಿದ್ದರು. ಹಾಗಾಗಿ ಎಲ್ಲಾ ಆಚರಣೆಗಳು ಸೌಹಾರ್ದತವಾಗಿಯೇ ನಡೆಯುತ್ತಿತ್ತು. ಇಂದು ಒಂದು ವರ್ಗವನ್ನೇ ದ್ವೇಷಿಸುವ ಮೂಲಕ ಅವರ ಹಕ್ಕುಗಳನ್ನ ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಭಾರತ ಸಂವಿಧಾನದ ಆಸೆಯದಂತೆ ಪ್ರತಿಯೊಬ್ಬರು ತಮ್ಮದೇ ಆದ ಬದುಕನ್ನ ಕಟ್ಟಿಕೊಂಡು ಮುನ್ನಡೆಯುತ್ತಿದ್ದು ಆಚಾರ ವಿಚಾರ ಸಂಸ್ಕೃತಿ ಪರಂಪರೆಯೊಂದಿಗೆ ಜೀವನ ನಡೆಸುತ್ತಿದ್ದು, ನಾವೆಲ್ಲರೂ ಒಗ್ಗಟ್ಟಿನ ಮೂಲಕ ಸೌಹಾರ್ದ ಸಮಾಜ ನಿರ್ಮಾಣ ಮಾಡಲು ಮುಂದಾಗ ಬೇಕಾಗಿದೆ ಎಂದರು. ಸಮಸ್ತ ಕೇಂದ್ರ ಮುಶಾವರ ಸದಸ್ಯ ಹಾಗೂ ಕೊಡಗು ಜಿಲ್ಲಾ ಖಾಝಿ ಎಂ.ಎಂ.ಅಬ್ದುಲ್ಲ ಫೈಜಿ ಮಾತನಾಡಿ ಧಾರ್ಮಿಕ ಕೇಂದ್ರಗಳು ಸೌಹಾರ್ದತೆಯ ಸಂಕೇತದ ಮೂಲಕ ಭಾವೈಕ್ಯತೆಯ ಕೇಂದ್ರಗಳಿಗೆ ಎಲ್ಲರೂ ಪಾಲ್ಗೊಳ್ಳುತ್ತಿರುವುದರಿಂದಲೇ ಗ್ರಾಮಗಳಲ್ಲಿ ಸೌಹಾರ್ದ ಸಮಾಜ ನಿರ್ಮಾಣವಾಗುತ್ತಿದೆ. ನಾವೆಲ್ಲರೂ ಪರಸ್ಪರ ಸ್ನೇಹ ಭಾವನೆಯೊಂದಿಗೆ ಆಚಾರ ವಿಚಾರ ಸಂಸ್ಕೃತಿ ಪರಂಪರೆಯೊಂದಿಗೆ ಸೌಹಾರ್ದತವಾಗಿ ಮುನ್ನಡೆಯಬೇಕಾಗಿದೆ ಎಂದರು. ಜುಮಾ ಮಸೀದಿಯ ಅಧ್ಯಕ್ಷ ಪಿ.ಕೆ ಇಸ್ಮಾಯಿಲ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ, ಪಾಲಿಬೆಟ್ಟ ವಿ ಎಸ್ ಎಸ್ ಎನ್ ಅಧ್ಯಕ್ಷ ಅಜಿತ್ ಕರುಂಬಯ್ಯ, ವಕ್ಫ್ ಬೋರ್ಡ್ ಜಿಲ್ಲಾ ಅಧ್ಯಕ್ಷ ಪಿ.ಎಂ.ಹಕೀಂ ಮಾಜಿ ಅಧ್ಯಕ್ಷ ಕೆ ಎ ಯಾಕುಬ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪಿ ಎಂ ಅಬ್ದುಲ್ ಲತೀಪ್, ಗ್ರಾಮ ಪಂಚಾಯತಿ ಸದಸ್ಯರಾದ ಅಬ್ದುಲ್ ನಾಸರ್, ವೆಂಕಟೇಶ್, ಜುಮಾ ಮಸೀದಿ ಕಮಿಟಿ ಉಪಾಧ್ಯಕ್ಷ ಸೈನುದ್ದೀನ್, ಕಾರ್ಯದರ್ಶಿ ಸಮೀರ್ ಮುನ್ನ, ಸಹ ಕಾರ್ಯದರ್ಶಿ ಫಜಲ್ ರೆಹಮಾನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್, ಜುಮಾ ಮಸೀದಿ ಖತೀಬ್ ಜುಬೇರ್ ಸಖಾಫಿ, ಸೇರಿದಂತೆ ಮತ್ತಿತರರು ಹಾಜರಿದ್ದರು . ಜಿಲ್ಲೆ, ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣಾ ಕಾರ್ಯ ಮಾಡಲಾಯಿತು. ಡಿವೈಎಸ್ಪಿ ಸೂರಜ್, ಸರ್ಕಲ್ ಇನ್ಸ್ಪೆಕ್ಟರ್ ಪಿ.ಕೆ.ರಾಜು,
ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ, ಅಪರಾಧ ಪತ್ತೆದಳದ ಅಧಿಕಾರಿ ಶಿವಣ್ಣ ಸೇರಿದಂತೆ 80ಕ್ಕೊ ಹೆಚ್ಚು ಪೊಲೀಸ್ ಬಿಗಿ ಬಂದೋಬಸ್ತ್ ನೊಂದಿಗೆ ಸುಗಮ ಸಂಚಾರ ವ್ಯವಸ್ಥೆ ಮಾಡಲಾಗಿತ್ತು. ಕೇರಳದ ಹಲ್ವಾ ಸೇರಿದಂತೆ ಆಕರ್ಷಕ ತಿಂಡಿ ತಿನಿಸುಗಳು ಆಟಿಕೆ ಸಾಮಗ್ರಿಗಳ ಮಾರಾಟ ಎಂದಿನಂತೆ ಇತ್ತು
ಉರೂಸ್ ನಲ್ಲಿ ಮಹಿಳೆಯರು, ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಜಾತಿ ಮತ ಭೇದವಿಲ್ಲದೆ ಎಲ್ಲ ಭಕ್ತಾದಿಗಳು ತಮ್ಮ ಇಷ್ಟಾರ್ಥ ಹರಕೆ ತೀರಿಸಿದರು. ಉರೂಸ್ ಅಂಗವಾಗಿ ಪಾಲಿಬೆಟ್ಟ ಪಟ್ಟಣ ದರ್ಗಾ ಆವರಣ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿತ್ತು.












