
ಮಡಿಕೇರಿ ಫೆ.7 NEWS DESK : ಕೊಡವ ಜನಾಂಗ ಹಾಗೂ ಕೊಡವ ಸಂಸ್ಕೃತಿಯ ಸಮಗ್ರ ಅಸ್ತಿತ್ವದ ಮೇಲೆ ನಡೆಯುತ್ತಿರುವ ಜನಾಂಗೀಯ ತಾರತಮ್ಯ, ದಬ್ಬಾಳಿಕೆ ಮತ್ತು ಸಂವಿಧಾನಾತ್ಮಕ ಹಕ್ಕುಗಳನ್ನು ಕಸಿಯುವ ಯತ್ನದ ವಿರುದ್ಧ ಪಾದಯಾತ್ರೆ ನಡೆಸಲಾಗಿದೆ ಎಂದು ಅಖಿಲ ಕೊಡವ ಸಮಾಜ ಜಿಲ್ಲಾಡಳಿತಕ್ಕೆ ನೀಡಿದ ಮನವಿ ಪತ್ರದಲ್ಲಿ ತಿಳಿಸಿದೆ. ಸುಳ್ಳು ಇತಿಹಾಸವನ್ನು ಸೃಷ್ಟಿಸಿ ಕೊಡವರ ಅಸ್ತಿತ್ವಕ್ಕೆ ದಕ್ಕೆ ತರುವ ಪ್ರಯತ್ನ ನಡೆದಿದೆ. ದೇಶಕಂಡ ಅಪ್ರತಿಮ ವೀರ ಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಪ್ರತಿಮೆಗಳಿಗೆ ಅಗೌರವ ತೋರಲಾಗಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡು ಮಹಾನ್ ಸೇನಾನಿಗಳನ್ನು ಕೊಡವರು ಎಂಬ ಏಕೈಕ ಕಾರಣಕ್ಕೆ ಅವಹೇಳನ ಮಾಡಲಾಗಿದೆ. ಕೊಡವರನ್ನು ದ್ವೇಷಿಸುವ ಉದ್ದೇಶ ಇದರಲ್ಲಿ ಅಡಗಿದೆ. ದುಷ್ಟಕೂಟ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ನಿರಂತರವಾಗಿ ಕೊಡವ ಮಹಿಳೆಯರು, ಮಕ್ಕಳ ಅವಹೇಳನ ಮಾಡಲಾಗುತ್ತಿದೆ. ಕೊಡವರ ಸಾಂಪ್ರದಾಯಿಕ ಉಡುಪು ಮತ್ತು ಆಭರಣಗಳನ್ನು ವಿಡಂಬನಾತ್ಮಕವಾಗಿ ದುರ್ಬಳಕೆ ಹಾಗೂ ಉದ್ದೇಶಪೂರ್ವಕವಾಗಿ ಕೊಡವರಿಗೆ ಮತ್ತು ಕೊಡವ ಸಂಸ್ಕೃತಿಗೆ ಅವಮಾನ ಮಾಡಲಾಗುತ್ತಿದೆ. ಕೊಡಗಿನ ದೇವಸ್ಥಾನಗಳಲ್ಲಿ ಬೈಲಾ ಅಸ್ತ್ರವನ್ನು ಪ್ರಯೋಗಿಸಿ ಕೊಡವ ಸಂಸ್ಕೃತಿ, ಪರಂಪರೆಯನ್ನು ಸಂಪೂರ್ಣ ನಾಶಮಾಡಲು ಹುನ್ನಾರ ನಡೆಯುತ್ತಿದೆ. ಇದು ಸಂವಿಧಾನ ವಿರೋಧಿ ಕೃತ್ಯಮಾತ್ರವಲ್ಲದೆ, ಮಾನವ ಹಕ್ಕಿನ ಉಲ್ಲಂಘನೆಯಾಗಿದೆ. ಕೊಡಗು ಜಿಲ್ಲೆ ಎಂಬ ಹೆಸರನ್ನೇ ಬದಲು ಮಾಡಲೂ ಸಹ ಈ ದುಷ್ಟಕೂಟ ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದ್ದು, ಇಂತಹ ಬೇಳವಣಿಗೆಗಳು ಸಮಾಜದ ಹಿತದೃಷ್ಟಿಯಲ್ಲಿ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅಖಿಲ ಕೊಡವ ಸಮಾಜ ಅಸಮಾಧಾನ ವ್ಯಕ್ತಪಡಿಸಿದೆ.
:: ಬೇಡಿಕೆಗಳು ::
ಸೂಕ್ಷ್ಮಾತಿ ಸೂಕ್ಷ್ಮ ಅಲ್ಪಸಂಖ್ಯಾತ ಕೊಡವ ಜನಾಂಗದ ಸಂವಿಧಾನಬದ್ಧ ಬೇಡಿಕೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು. ಕೊಡವ ಜನಾಂಗದ ಪರಂಪರೆ, ಧಾರ್ಮಿಕ ಆಚರಣೆಗಳು, ಸಾಮಾಜಿಕ ಭದ್ರತೆಗೆ ಪೂರಕವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕೊಡವರು ಹಾಗೂ ಜಮ್ಮಾ ಹಿಡುವಳಿದಾರರ ಕೋವಿ ವಿನಾಯಿತಿಯ ವಿಶೇಷ ಹಕ್ಕನ್ನು ಅಭಾದಿತವಾಗಿ ಮುಂದುವರಿಸಬೇಕು.
ಕೊಡವ ಸಮುದಾಯದ ಮೇಲೆ ಪ್ರಬಲ ಜನಾಂಗಗಳು ರಾಜಕೀಯ ಪ್ರಭಾವ ಬಳಸಿ ನಡೆಸುತ್ತಿರುವ ದಬ್ಬಾಳಿಕೆಗೆ ಕಡಿವಾಣ ಹಾಕಬೇಕು. ಕೊಡವ ಸಂಸ್ಕೃತಿ, ಸಂಪ್ರದಾಯ, ಉಡುಗೆ ತೊಡುಗೆ, ಆಭರಣಗಳು, ಆಚರಣೆಗಳ ವಿಡಂಬನಾತ್ಮಕ ಬಳಕೆ ಮತ್ತು ಕೊಡವರ ಭಾವನೆಗಳಿಗೆ ದಕ್ಕೆ ತರುವ ಪ್ರಚೋದನಾತ್ಮಕ ಕೃತ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಕೊಡವರು ಎಂಬ ಕಾರಣಕ್ಕೆ ಈ ದೇಶದ ಅಪ್ರತಿಮ ಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರುಗಳಿಗೆ ಅಗೌರವ ತೋರಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ನಡೆಸಿ, ಕಿಡಿಗೇಡಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಗಡಿಪಾರು ಮಾಡಬೇಕು.
ತಲಕಾವೇರಿಯಲ್ಲಿ ಕೊಡವರ ಭಾಗವಹಿಸುವಿಕೆಯ ಸ್ವಾತಂತ್ರ್ಯಕ್ಕೆ ನಿರಂತರ ತೊಂದರೆ ಮಾಡುವ ಪ್ರಕ್ರಿಯೆಗಳಿಗೆ ಕಡಿವಾಣ ಹಾಕಬೇಕು. ಗೊಂದಲ ಸೃಷ್ಟಿಸುವ ಪಟ್ಟಭದ್ರಹಿತಾಸಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೊಡವರಿಗೆ, ಕೊಡವ ಸಂಸ್ಕೃತಿಗೆ ಕೊಡಗಿನ ಯಾವುದೇ ಧಾರ್ಮಿಕ ಕ್ಷೇತ್ರಗಳಲ್ಲಿ ಅವಮಾನವಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕೊಡವರು, ಕೊಡವ ಸಂಸ್ಕೃತಿ ಮತ್ತು ಕೊಡವ ಪಾರಂಪರಿಕ ಆಚರಣೆಗಳಿಗೆ ಈ ನೆಲದಲ್ಲಿ ಮುಕ್ತ ವಾತವರಣ ಕಲ್ಪಿಸಬೇಕು.
ಕಟ್ಟೆಮಾಡುವಿನ ಮಹಾದೇವರ ದೇವಸ್ಥಾನವನ್ನು ಮೃತ್ಯುಂಜಯ ದೇವಸ್ಥಾನವೆಂದು ಸುಳ್ಳುನಾಮಕರಣ ಮಾಡುವ ಮೂಲಕ ದೇವಸ್ಥಾನದ ಪಾವಿತ್ರ್ಯತೆಯನ್ನು ನಾಶಮಾಡಲಾಗಿದೆ. ಉದ್ದೇಶಪೂರ್ವಕವಾಗಿ ಜನಾಂಗಗಳ ನಡುವೆ ವಿಷಬೀಜವನ್ನು ಬಿತ್ತಿ, ಸಮಾಜದಲ್ಲಿ ಅಶಾಂತಿ ಸೃಷ್ಟಿಸಲಾಗಿದೆ ಎಂದು ಮನವಿ ಪತ್ರದಲ್ಲಿ ಆರೋಪಿಸಲಾಗಿದ್ದು, ದೇವಸ್ಥಾನದ ಅರ್ಚಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಕಟ್ಟೆಮಾಡು ವಾರ್ಷಿಕ ಉತ್ಸವದ ಸಂದರ್ಭ, ಕೊಡವರ ಸಾಂಸ್ಕೃತಿಕ ಉಡುಗೆಯನ್ನು ನಿರ್ಬಂಧಿಸಲು ಪ್ರಯತ್ನಿಸಿ, ಕೊಡವರ ಮೇಲೆ ಹಲ್ಲೆ ನಡೆಸಿದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳದ ಹೊರತು ಕೊಡವ ಸಮುದಾಯ ಯಾವುದೇ ಸಂಧಾನ ಸಭೆ ಅಥವಾ ಯಾವುದೇ ಶಾಂತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಜಿಲ್ಲಾಡಳಿತಕ್ಕೆ ನೀಡಿದ ಮನವಿ ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.



